Advertisement

Graduation: ಸ್ವದೇಶದಲ್ಲೇ ಸೇವೆಯ ಸಂಕಲ್ಪ ಅಗತ್ಯ: ಡಾ| ರಮೇಶ್‌ಚಂದ್ರ

10:29 AM Mar 20, 2024 | Team Udayavani |

ಮಂಗಳೂರು: ನರ್ಸಿಂಗ್‌ ಸಹಿತ ವೈದ್ಯಕೀಯದ ವಿವಿಧ ಕ್ಷೇತ್ರದಲ್ಲಿರುವ ವಿದ್ಯಾರ್ಥಿಗಳು ವೃತ್ತಿ ಸೇವೆಯ ನಿಮಿತ್ತ ವಿದೇಶಗಳಿಗೆ ತೆರಳುವುದಕ್ಕೆ ಆದ್ಯತೆ ನೀಡುವ ಬದಲು, ದೇಶದೊಳಗೆಯೇ ವೈದ್ಯಕೀಯ ಸೇವೆ ಸಲ್ಲಿಸಲು ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ| ಎ.ವಿ.ಎಸ್‌. ರಮೇಶ್‌ ಚಂದ್ರ ಹೇಳಿದರು.

Advertisement

ಮಂಗಳೂರಿನ ಫಾದರ್‌ ಮುಲ್ಲರ್‌ ಸ್ಕೂಲ್ ಆಫ್‌ ನರ್ಸಿಂಗ್‌, ನರ್ಸಿಂಗ್‌ ಕಾಲೇಜು ಹಾಗೂ ವಾಕ್‌ ಮತ್ತು ಶ್ರವಣ ಕಾಲೇಜುಗಳಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಸೆಂಟರ್‌ ನಲ್ಲಿ ಮಂಗಳವಾರ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‌

ವಿದೇಶದಲ್ಲಿ ವೈದ್ಯಕೀಯ ಕ್ಷೇತ್ರದ ಹುದ್ದೆ ಸಹಿತ ವಿದ್ಯಾಭ್ಯಾಸದ ಸಂದರ್ಭ ಕೆಲವೊಂದು ಕ್ಲಿಷ್ಟಕರ ಸನ್ನಿವೇಶ ಎದುರಾಗಿದ್ದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಬಹುಮುಖ್ಯವಾಗಿ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ದೇಶದೊಳಗೆಯೇ ಅಥವಾ ರಾಜ್ಯದೊಳಗೆಯೇ ಸೇವೆ ಸಲ್ಲಿಸುವ ಸೌಭಾಗ್ಯ ಉತ್ತಮ ಅವಕಾಶ ಎಂದರು.

ಅತ್ಯುತ್ತಮ ನರ್ಸ್‌ಗಳನ್ನು ಹೊಂದಿರುವ ಜಗತ್ತಿನ ವಿವಿಧ ದೇಶಗಳ ಪೈಕಿ ಭಾರತ 5ನೇ ಸ್ಥಾನ ಪಡೆದಿದೆ. ವಾಕ್‌ ಮತ್ತು ಶ್ರವಣ ವಿಭಾಗದಲ್ಲಿಯೂ ಭಾರತ ಗಮನೀಯ ಸಾಧನೆ ಬರೆದಿದೆ. ಗುಣಮಟ್ಟದ ವೈದ್ಯಕೀಯ ಸೇವೆ ದೇಶದ ಹಿರಿಮೆ. ಪ್ರೀತಿ, ಸಹಾನುಭೂತಿ ಇಲ್ಲಿ ಮುಖ್ಯ ಸ್ಥಾನ ಪಡೆದಿದೆ ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಸಿಂಡಿಕೇಟ್‌ ಸದಸ್ಯ ಪ್ರೊ| ಯು.ಟಿ. ಇಫ್ತೀಕರ್‌ ಫರೀದ್‌ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್‌ ಸೇವೆಗೆ ಬಹುದೊಡ್ಡ ಗೌರವವಿದೆ. ಫಾದರ್‌ ಮುಲ್ಲರ್‌ ಸಂಸ್ಥೆಯು ವೈದ್ಯಕೀಯ ಕ್ಷೇತ್ರದಲ್ಲಿ ಸಮಾಜಕ್ಕೆ ಅದ್ವಿತೀಯ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.

Advertisement

ಫಾದರ್‌ ಮುಲ್ಲರ್‌ ಸಮೂಹ ಸಂಸ್ಥೆಗಳ ನಿರ್ದೇಶಕ ರೆ|ಫಾ|ರಿಚರ್ಡ್‌ ಅಲೋಶಿಯಸ್‌ ಕುವೆಲ್ಲೋ ಸ್ವಾಗತಿಸಿದರು. ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಅನಿಶಾ ಮೈಕೆಲ್‌ ಸಿಕ್ವೇರ, ಲಿಶ್ಮಿತಾ ಲಾರೆಲ್‌ ಡಿಸೋಜ, ಆ್ಯಡ್ಲೆನ್‌ ಐರೆಲ್‌ ಪಿರೇರಾ ಸಹಿತ ಹಲವು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಎಫ್‌ಎಂಎಸ್‌ಒಎನ್‌ ಮತ್ತು ಎಫ್‌ ಎಂಸಿಒಎನ್‌ ಪ್ರಾಂಶುಪಾಲರಾದ ಭ| ಜೆಸಿಂತಾ ಡಿ’ಸೋಜಾ, ಎಫ್‌ ಎಂಸಿಯ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಪ್ರಾಂಶುಪಾಲರಾದ ಪ್ರೊ| ಸಿಂಥಿಯಾ ಸಾಂತುಮಾಯರ್‌, ಪ್ರಮುಖರಾದ ಅಜು ಅಬ್ರಹಾಂ, ಡಾ| ಆ್ಯಗ್ನೆಸ್‌, ಸಿ| ಧನ್ಯ ದೇವಕಿಯ, ಡಾ| ಉದಯ್‌ ಕುಮಾರ್‌ ಉಪಸ್ಥಿತರಿದ್ದರು.

ನಗು ಮುಖದ ಸೇವೆಯೇ ಔಷಧ: ಬಿಷಪ್‌

ಮಂಗಳೂರು ಬಿಷಪ್‌ ಹಾಗೂ ಫಾದರ್‌ ಮುಲ್ಲರ್‌ ಸಂಸ್ಥೆಗಳ ಅಧ್ಯಕ್ಷ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ನರ್ಸಿಂಗ್‌ ಸೇವೆ ಮಾನವೀಯ ಸೇವೆಯ ದ್ಯೋತಕ. ಕಷ್ಟದಲ್ಲಿರುವವರ ಕೈ ಹಿಡಿದು ಸಾಂತ್ವನದೊಂದಿಗೆ ಭರವಸೆ ನೀಡುವ ಮಹಾ ಕಾರ್ಯ ಇದರಿಂದ ನಡೆಯುತ್ತದೆ ಎಂದು ಹೇಳಿ, ರೋಗಿಯೊಬ್ಬನನ್ನು ಉಪಚರಿಸುವ ರೀತಿ ಹಾಗೂ ಅವನಿಗೆ ನಗುಮುಖದ ಸೇವೆ ನೀಡುವುದೇ ಬಹುದೊಡ್ಡ ಕಾರ್ಯ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಬೇಕು. ನಗುವಿನ ಮೂಲಕವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next