“ಈ ಹಿಂದೆ ನಾನು ಮೂರು ಚಿತ್ರಗಳಿಗೂ ನಿರ್ಮಾಪಕನಾಗಿದ್ದೆ. ಆದರೆ, ಅಲ್ಲೆಲ್ಲಾ ನನಗೆ ಮೋಸವಾಯ್ತು. ಆ ಚಿತ್ರಗಳಿಂದ ಹೊರಬಂದ ನಾನು, ಚಾಲೆಂಜ್ ಆಗಿ ತೆಗೆದುಕೊಂಡು ಈಗ ಈ ಚಿತ್ರ ನಿರ್ಮಿಸಿದ್ದೇನೆ …’
– ಹೀಗೆ ಹೇಳುತ್ತಾ ಹೋದರು ನಿರ್ಮಾಪಕ ಮೋಹನ್. ಅವರು ಹೇಳಿದ್ದು “ರಾಜಲಕ್ಷ್ಮಿ’ ಚಿತ್ರದ ಬಗ್ಗೆ. ಇದು ಅವರ ಮೊದಲ ನಿರ್ಮಾಣದ ಚಿತ್ರ. ಇದಕ್ಕೂ ಮೊದಲು ಮೂರು ಚಿತ್ರಕ್ಕೆ ನಿರ್ಮಾಪಕರಾಗಿ ಕೆಲಸ ಮಾಡಿದ್ದರಂತೆ. ಅಲ್ಲಿ ಒಂದಷ್ಟು ವಿನಾಕಾರಣ ಸಮಸ್ಯೆ ಸೃಷ್ಟಿಸಿದ್ದರಿಂದ ಹೊರಬಂದರಂತೆ. ಅಲ್ಲಿ ಮೋಸ ಆಗಿದ್ದರಿಂದಲೇ “ರಾಜಲಕ್ಷ್ಮಿ’ ಚಿತ್ರ ಮಾಡಿದ್ದಾಗಿ ಹೇಳಿಕೊಂಡರು ಮೋಹನ್.
ಮೂಲತಃ ವಕೀಲರಾಗಿರುವ ಮೋಹನ್‌ಗೆ ಒಳ್ಳೆಯ ಕಥೆ ಇರುವ ಚಿತ್ರ ಮಾಡುವ ಆಸೆ ಇತ್ತು. ಅದಕ್ಕೆ ಸರಿಯಾಗಿ ನಿರ್ದೇಶಕ ಕಾಂತರಾಜ್ ಗೌಡ ಅವರು “ರಾಜಲಕ್ಷ್ಮಿ’ ಚಿತ್ರದ ಕಥೆ ಹೇಳಿದರಂತೆ. ಆ ಕಥೆ ನಿರ್ಮಾಪಕರ ಊರಾದ ಸಿದ್ದಯ್ಯನದೊಡ್ಡಿಯಲ್ಲಿ ಈ ಹಿಂದೆ ನಡೆದಂತಹ ನೈಜ ಘಟನೆಗೆ ಹತ್ತಿರವಾಗಿತ್ತಂತೆ. ಕೊನೆಗೆ, ಆ ಊರಿಗೆ ನಿರ್ದೇಶಕರನ್ನು ಕಳುಹಿಸಿ, ಇನ್ನಷ್ಟು ಮಾಹಿತಿ ಕಲೆಹಾಕಿ, ಒಂದೊಳ್ಳೆಯ ಕಥೆ ಹೆಣೆದು ಚಿತ್ರ ಮಾಡಿದ್ದಾರೆ. ಇನ್ನು, ನಿರ್ದೇಶಕರು “ರಾಜಲಕ್ಷ್ಮಿ’ ಚಿತ್ರದ ಶೀರ್ಷಿಕೆ ಕೇಳಿದೊಡನೆ ಇದನ್ನೇ ಫಿಕ್ಸ್ ಮಾಡಿ ಅಂದರಂತೆ. ಕಾರಣ, ನಿರ್ಮಾಪಕರ ತಂದೆ, ತಾಯಿ ಹೆಸರು ಕೂಡ ರಾಜ-ಲಕ್ಷ್ಮಿಯಂತೆ. ಇದೊಂದು ಹಳ್ಳಿ ಸೊಗಡಿನ ಕಥೆ. ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ, ಸಿನಿಮಾಗೆ ಬೇಕಾದ್ದೆಲ್ಲವನ್ನೂ ಕೊಟ್ಟಿದ್ದಾಗಿ ಹೇಳುತ್ತಾರೆ ನಿರ್ಮಾಪಕ ಮೋಹನ್.
ನಿರ್ದೇಶಕ ಕಾಂತರಾಜ್‌ಗೌಡ ಅವರೂ ವಕೀಲರು. ಅವರಿಗೆ ಒಂದು ಸಿನಿಮಾ ಮಾಡುವ ಆಸೆ ಇತ್ತಂತೆ. ಆ ಆಸೆ ಹೊತ್ತು 2007 ರಲ್ಲಿ ಬೆಂಗಳೂರಿಗೆ ಬಂದವರು, ಮೊದಲು ಲೈಟ್ ಬಾಯ್ ಆಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಲೇ, ಸಿನಿಮಾ ನಿರ್ದೇಶನದ ಆಸೆ ಈಡೇರಿಸಿಕೊಂಡಿದ್ದಾಗಿ ಹೇಳಿಕೊಂಡರು ಅವರು. “ರಾಜಲಕ್ಷ್ಮಿ’ ಮನರಂಜನೆ ಜೊತೆಗೆ ಒಂದು ಸಂದೇಶ ಇರುವ ಚಿತ್ರ. ಇಲ್ಲೊಂದು ಪ್ರೀತಿಯ ಕಥೆ ಇದೆ, ಅಲ್ಲೊಂದು ವ್ಯಥೆಯೂ ಇದೆ. ಮಂಡ್ಯ ಭಾಷೆ ಇಲ್ಲಿದ್ದರೂ, ಎಲ್ಲಾ ವರ್ಗಕ್ಕೂ ಸಲ್ಲುವ, ಎಲ್ಲಾ ಕಡೆ ನೋಡುವ ಚಿತ್ರವಿದು’ ಎಂಬುದು ಕಾಂತರಾಜ್ ಗೌಡ ಮಾತು.
ನಾಯಕ ನವೀನ್ ತೀರ್ಥಹಳ್ಳಿ ಅವರಿಗೆ “ರಾಜಲಕ್ಷ್ಮಿ’ ಚಿತ್ರದ ಮೇಲೆ ಸಿಕ್ಕಾಪಟ್ಟೆ ಒಲವು. ಕಾರಣ, ಗಟ್ಟಿ ಕಥೆ . ಕಳೆದ 12 ವರ್ಷಗಳಿಂದಲೂ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಸಿನಿಮಾಗೆ ಎಂಟ್ರಿ ಕೊಟ್ಟಿರುವ ಅವರು ಈಗಾಗಲೇ ತೆಲುಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ “ರಾಜಲಕ್ಷ್ಮಿ’ ಅವರಿಗೊಂದು ಹೊಸ ಇಮೇಜ್ ಕೊಡುತ್ತದೆ ಎಂಬ ವಿಶ್ವಾಸ. ಶೀರ್ಷಿಕೆ ಕೇಳಿದೊಡನೆ, ಇದು ಲವ್‌ಸ್ಟೋರಿ ಎನ್ನುವುದು ಗೊತ್ತಾಗುತ್ತದೆ. ಗ್ರಾಮೀಣ ಭಾಗದ ಕಥೆಯಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ. ನಾಲ್ಕು ಭರ್ಜರಿ ಫೈಟ್‌ಗಳಿವೆ. ಹಳ್ಳಿಯಲ್ಲಿದ್ದರೂ ಕಾಲೇಜ್ ಓದಿಕೊಂಡು, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡ ಹುಡುಗನ ಲೈಫಲ್ಲೊಂದು ಲವ್ ಶುರುವಾಗುತ್ತೆ, ಆಮೇಲೆ ಏನಾಗುತ್ತದೆ ಎಂಬುದು ಕಥೆ ‘ ಎಂದರು ನವೀನ್.
ನಾಯಕಿ ರಶ್ಮಿಗೌಡ ಅವರಿಲ್ಲಿ ಲಕ್ಷ್ಮೀ ಎಂಬ ಪಾತ್ರ ಮಾಡಿದ್ದಾರಂತೆ. “ನನ್ನದು ಹಳ್ಳಿ ಹುಡುಗಿ ಪಾತ್ರ. ಅದರಲ್ಲೂ ರಗಡ್ ಹುಡುಗಿ. ಯಾರೇ ಎದುರು ಬಂದರೂ, ಮಾತಾಡಿಸಿದರೂ, ಕೇರ್ ಮಾಡದ ಗತ್ತು ಇರುವ ಪಾತ್ರವದು’ ಎಂದರು ರಶ್ಮಿಗೌಡ.
ಛಾಯಾಗ್ರಾಹಕ ವೀನಸ್‌ಮೂರ್ತಿ ಅವರ ಪುತ್ರ ನಾಗು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ನವೀನ್ ನೃತ್ಯ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಮುತ್ತುರಾಜ್, ಕಿರಣ್ ಸೇರಿದಂತೆ ಹಲವರು ನಟಿಸಿದ್ದಾರೆ.