Advertisement

ತಂದೆ-ತಾಯಿ ಬಾ ಎಂದರೂ, ಬಾರದ ಮಗ

12:24 AM Apr 10, 2019 | Lakshmi GovindaRaju |

ಬೆಂಗಳೂರು: “ನೀನು ನಮಗೆ ಬೇಕು, ಬಾ ಮನೆಗೆ ಹೋಗೋಣ, ನಮ್ಮನ್ನು ಅತಂತ್ರ ಮಾಡಬೇಡ ಎಂದು ಹೆತ್ತ ತಂದೆ-ತಾಯಿ ಗೋಗರೆದರೆ, ಇಲ್ಲ ಬರಲ್ಲ ನಾನು ಸ್ವತಂತ್ರವಾಗಿ ಬದುಕುತ್ತೇನೆ ಎಂದು ಕಡ್ಡಿ ಮುರಿದಂತೆ ಮಗ ಹೇಳಿದ. ಹತ್ತು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಅಪ್ಪ-ಅಮ್ಮನ ಜೊತೆಗೆ ಹೋಗಲು ಸ್ಪಷ್ಟವಾಗಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆತನಿಗೆ ಬಿಟ್ಟು ಕಳಿಸಿದ ಪ್ರಸಂಗ ಮಂಗಳವಾರ ಹೈಕೋರ್ಟ್‌ನಲ್ಲಿ ನಡೆಯಿತು.

Advertisement

ತನ್ನ ಮಗನನ್ನು ಕೃಷ್ಣಪ್ಪ ಎಂಬುವರು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದಾರೆ. ಆದ್ದರಿಂದ ಮಗನನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ತಾಯಿ ಬಾಲಮ್ಮ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ.ಎನ್‌. ಫ‌ಣೀಂದ್ರ ಹಾಗೂ ನ್ಯಾ. ಎಚ್‌.ಬಿ. ಪ್ರಭಾಕರ ಶಾಸ್ತ್ರೀ ಅವರ ವಿಭಾಗೀಯ ನ್ಯಾಯಪೀಠ ಈ ವೃತ್ತಾಂತಕ್ಕೆ ಸಾಕ್ಷಿಯಾಯಿತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ತಂದೆ-ತಾಯಿ ಹಾಗೂ ಮಗನ ನಡುವೆ ಸಂಧಾನ ಮಾತುಕತೆಗೆ ಅವಕಾಶ ಮಾಡಿಕೊಟ್ಟಿತು. ಸತತ 45 ನಿಮಿಷದ ಮಾತುಕತೆ ವಿಫ‌ಲಗೊಂಡ ಹಿನ್ನೆಲೆಯಲ್ಲಿ ಮಗನನ್ನು ತನ್ನಿಚ್ಛೆಯಂತೆ ಬದುಕುವಂತೆ ಹೇಳಿ ಆತನಿಗೆ ಬಿಟ್ಟು ಕಳುಹಿಸಿದ ನ್ಯಾಯಪೀಠ, ಅರ್ಜಿ ಇತ್ಯರ್ಥಪಡಿಸಿತು.

ನನ್ನ ಮಗ ಸೆಂಥಿಲ್‌ ಕುಮಾರ್‌ ಆಕ್ಸ್‌ಫರ್ಡ್ ಎಂಜಿನಿಯರ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡುತ್ತಿದ್ದ. ಆದರೆ, 2009ರ ಜುಲೈ 7ರಂದು ಉಪನ್ಯಾಸಕ ಸಿ.ಬಿ.ಕೃಷ್ಣಪ್ಪ ಅವರ ಬಳಿ ಟ್ಯೂಷನ್‌ಗೆ ಹೋಗಿದ್ದ. ಆತ ಮನೆಗೆ ಮತ್ತೆ ಹಿಂದಿರಗಿಲ್ಲ.

ನಾಪತ್ತೆಯಾದ ಮಗನನನ್ನು ಹುಡುಕಿಕೊಡಲು ಕಾಟನ್‌ಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದರೂ ಪೊಲೀಸರು ನನ್ನ ಮಗನನ್ನು ಪತ್ತೆ ಹಚ್ಚಿಲ್ಲ. ಕೃಷ್ಣಪ್ಪ ನನ್ನ ಮಗನನ್ನು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ.

Advertisement

ಆದ್ದರಿಂದ ಮಗನನ್ನು ಪತ್ತೆ ಮಾಡಿ ಕೋರ್ಟ್‌ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ತಾಯಿ ಬಾಲಮ್ಮ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ನ್ಯಾಯಪೀಠದ ಮುಂದೆ ಹಾಜರಾದ ಸೆಂಥಿಲ್‌ ಕುಮಾರ್‌, ಅಪ್ಪ, ಅಮ್ಮ ಹಾಗೂ ಅಕ್ಕ ನನಗೆ ಸಾಕಷ್ಟು ಕಿರುಕುಳ ನೀಡಿದರು.

ನನ್ನ ವಿದ್ಯಾಭ್ಯಾಸ ಹಾಳು ಮಾಡಿದರು. ಸುಳ್ಳು ದೂರು ನೀಡಿ ಪೊಲೀಸರಿಂದಲೂ ಹೊಡೆಸಿದರು. ಇದರಿಂದ ಮನೆ ಬಿಟ್ಟು ಹೊರ ಬಂದೆ. ಯಾವುದೇ ಕಾರಣಕ್ಕೂ ಮತ್ತೆ ಅವರೊಂದಿಗೆ ಮನೆಗೆ ಹೋಗುವುದಿಲ್ಲ. ನಾನು ಸ್ವತಂತ್ರವಾಗಿ ಬದುಕುತ್ತಿದ್ದೇನೆ. ಸ್ವಂತ ಕಾಲ ಮೇಲೆ ನಿಂತು ಸಂಪಾದಿಸಿ ಸಾಧನೆ ಮಾಡಬೇಕು ಅಂದುಕೊಂಡಿದ್ದೇನೆ ಎಂದು ನ್ಯಾಯಮೂರ್ತಿಗಳಿಗೆ ತಿಳಿಸಿದ.

ಈ ವೇಳೆ ಅಪ್ಪ-ಅಮ್ಮ ಗೊಗರೆದರು. ಸಂಧಾನಕ್ಕೆ ಮಾತುಕತೆಗೆ ನ್ಯಾಯಪೀಠ ಅವಕಾಶ ಮಾಡಿಕೊಟ್ಟಿತು. ಅದು ವಿಫ‌ಲಗೊಂಡು, ಸೆಂಥಿಲ್‌ ಕುಮಾರ್‌ ತನ್ನ ನಿಲುವಿಗೆ ಅಂಟಿಕೊಂಡ ಹಿನ್ನೆಲೆಯಲ್ಲಿ “ಸೆಂಥಿಲ್‌ ಕುಮಾರ್‌ ವಯಸ್ಕರಾಗಿದ್ದು, ಆ

ತನ ಇಚ್ಛೆಯ ವಿರುದ್ಧ ಪೋಷಕರೊಂದಿಗೆ ಮನೆಗೆ ಬಲವಂತವಾಗಿ ಕಳುಹಿಸಿಕೊಡಲು ಸಾಧ್ಯವಿಲ್ಲ. ಸೆಂಥಿಲ್‌ ಕುಮಾರ್‌ ತನಗಿಷ್ಟ ಬಂದಂತೆ ಬದುಕಬಹುದು. ಕೃಷ್ಣಪ್ಪ ಸೆಂಥಿಲ್‌ ಅನ್ನು ಅಕ್ರಮ ಬಂಧನದಲ್ಲಿ ಇರಿಸಿದ್ದಾನೆ ಎಂಬುದು ದೃಡಪಟ್ಟಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.

ಡಿಸಿಪಿ ಕಾರ್ಯಕ್ಕೆ ಮೆಚ್ಚುಗೆ: ಪ್ರಕರಣದ ವಿಚಾರಣೆಗಾಗಿ ಪಶ್ಚಿಮ ವಲಯದ ಡಿಸಿಪಿ ರವಿ. ಡಿ ಚನ್ನಣ್ಣನವರ್‌ ಕೋರ್ಟ್‌ಗೆ ಖುದ್ದು ಹಾಜರಾಗಿದ್ದರು. ಕೃಷ್ಣಪ್ಪ ಅವರನ್ನು ಹುಡುಕಲು ಕೇರಳಕ್ಕೆ ತೆರಳಲು ಬಾಲಮ್ಮ ಅವರಿಂದ ಮೂರು ಸಾವಿರ ರೂ. ಹಣ ಪಡೆದ ಕಾಟನ್‌ಪೇಟೆ ಎಎಸ್‌ಐ ಕೆ.ಟಿ.ಗೋವಿಂದಪ್ಪ,

ಪೇದೆ ಮನ್ನಪ್ಪ ಅವರನ್ನು ಸೇವೆಯಿಂದ ಅಮಾನತು ಪಡಿಸಿ ತನಿಖೆಗೆ ಆದೇಶಿಸಿದ ಡಿಸಿಪಿ ರವಿ ಚನ್ನಣ್ಣನವರ್‌ ಬಗ್ಗೆ ನ್ಯಾಯಪೀಠ ಮೆಚ್ಚಿಗೆ ವ್ಯಕ್ತಪಡಿಸಿ, ಇದೇ ಪ್ರಕರಣದಲ್ಲಿ ಅರ್ಜಿದಾರರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಪೇದೆ ಫ‌ಕೀರ³ಪ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ಡಿಸಿಪಿಗೆ ನಿರ್ದೇಶಿಸಿತು.

ಸೆಂಥಿಲ್‌ ದಿಢೀರ್‌ ಪ್ರತ್ಯಕ್ಷ: ಸೆಂಥಿಲ್‌ ಕುಮಾರ್‌ನನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠ ಹೇಳಿತ್ತು. ಮಂಗಳವಾರ ಬೆಳಗ್ಗೆ ವಿಚಾರಣೆ ನಡೆಸಿದ ನ್ಯಾಯಪೀಠ, ಅದನ್ನು ಮಧ್ಯಾಹ್ನಕ್ಕೆ ಮುಂದೂಡಿತ್ತು. ಮಧ್ಯಾಹ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ಸೆಂಥಿಲ್‌ ಕುಮಾರ್‌ ದಿಢೀರ್‌ ಆಗಿ ಕೋರ್ಟ್‌ನಲ್ಲಿ ಪ್ರತ್ಯಕ್ಷನಾಗಿ ನ್ಯಾಯಮೂರ್ತಿ, ವಕೀಲರು, ಪೊಲೀಸರು ಮತ್ತು ಪೋಷಕರಿಗೆ ಅಚ್ಚರಿ ಮೂಡಿಸಿದ.

ಈ ವೇಳೆ “ನೀವು ಇಲ್ಲಿಗೆ ಹೇಗೆ ಬಂದೆ, ಯಾರು ಕರೆ ತಂದರು ಎಂದು ನ್ಯಾಯಪೀಠ ಆತನನ್ನು ಪ್ರಶ್ನಿಸಿತು. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಬಗ್ಗೆ ನನ್ನ ಸ್ನೇಹಿತರಿಂದ ಮಾಹಿತಿ ತಿಳಿಯಿತು. ಹುಡುಕಿಕೊಂಡು ನಾನೇ ಖುದ್ದಾಗಿ ಇಲ್ಲಿಗೆ ಬಂದೆ ಎಂದು ಉತ್ತರಿಸಿದ. ಬಳಿಕ ಸಂಧಾನ ಮಾತುಕತೆಗೆ ನ್ಯಾಯಪೀಠ ಅವಕಾಶ ಮಾಡಿಕೊಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next