ಬೆಂಗಳೂರು: ಇತ್ತೀಚೆಗೆ ಬಸವೇಶ್ವರನಗರದ ಮಂಜುನಾಥ ನಗರದಲ್ಲಿ ನಡೆದಿದ್ದ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ತಂದೆಯೇ ಮಗನನ್ನು ಕೊಲೆ ಗೈದಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮಂಜುನಾಥ ನಗರ ನಿವಾಸಿ ಪ್ರಕಾಶ್(48) ಎಂಬವರನ್ನು ಬಂಧಿಸಲಾಗಿದೆ.
ಆರೋಪಿ ಮಾ.6ರಂದು ತನ್ನ ಪುತ್ರ ಯೋಗೇಶ್ (21)ನನ್ನು ಕುತ್ತಿಗೆ ಬಿಗಿದು ಕೊಲೆಗೈದು, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಥೆ ಸೃಷ್ಟಿಸಿದ್ದ. ಆದರೆ, ಮರಣೋತ್ತರ ವರದಿಯಲ್ಲಿ ಆತ್ಮಹತ್ಯೆ ಅಲ್ಲ. ಕೊಲೆ ಆಗಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ: ಮಂಜುನಾಥನಗರದಲ್ಲಿ ಪ್ರಕಾಶ್ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದರು. ಪುತ್ರ ಯೋಗೇಶ್ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಈ ಮಧ್ಯೆ ಕುಡಿತ ಚಟಕ್ಕೆ ಬಿದ್ದು ನಿತ್ಯ ಮದ್ಯ ಸೇವಿಸಿ ಬರುತ್ತಿದ್ದ. ಮನೆಗೆ ಬಂದಾಗ ಪೋಷಕರ ಜತೆ ಜಗಳ ಮಾಡುತ್ತಿದ್ದ. ಕುಡಿತ ಬಿಡುವಂತೆ ಮಗನಿಗೆ ಹಲವು ಬಾರಿ ತಂದೆ ಬುದ್ದಿವಾದ ಹೇಳಿದ್ದಾರೆ. ಆದರೂ, ಆತ ತನ್ನ ಚಾಳಿ ಮುಂದುವರಿಸಿದ್ದ.
ಮಾ.5ರಂದು ಮನೆಯಿಂದ ಹೋಗಿದ್ದ ಯೋಗೇಶ್, ಮರು ದಿನ(ಮಾ.6ರಂದು) ಬೆಳಗ್ಗೆ ಮನೆಗೆ ಬಂದು, ಪರೀಕ್ಷೆ ಹೋಗಬೇಕಿದ್ದರಿಂದ ಹಾಲ್ ಟಿಕೆಟ್ ಹುಡುಕಾಡುತ್ತಿದ್ದ. ಎಲ್ಲೆಯೂ ಸಿಗದಿದ್ದಕ್ಕೆ, ಅಲ್ಲೇ ಇದ್ದ ತಂದೆ ಪ್ರಕಾಶ್‌ಗೆ, ಹಾಲ್ ಟಿಕೆಟ್ ಹುಡುಕಿಕೊಡುವಂತೆ ಹೇಳಿದ್ದಾನೆ. ಆಗ ಕೋಪಗೊಂಡ ಪ್ರಕಾಶ್, ಪರೀಕ್ಷೆ ಇದ್ದರೂ ರಾತ್ರಿಯೆಲ್ಲ ಮನೆಗೆ ಬಾರದೆ ಎಲ್ಲಿಗೆ ಹೋಗಿದ್ದೆ ಎಂದು ಬೈಯ್ದಿದ್ದಾರೆ. ಅದರಿಂದ ಕೋಪಗೊಂಡ ಯೋಗೇಶ್, ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಪ್ರಕಾಶ್, ವೇಲ್‌ನಿಂದ ಯೋಗೇಶ್ ಕುತ್ತಿಗೆ ಬಿಗಿದ್ದಾರೆ. ಆಗ ಆತ ಮೃತಪಟ್ಟಿದ್ದ. ಕೆಲ ಹೊತ್ತಿನ ಬಳಿಕ ಪ್ರಕಾಶ್, ಮಗನ ಬಳಿ ಹೋಗಿ ಎಚ್ಚರಿಸಲು ಮುಂದಾಗಿದ್ದಾನೆ. ಆದರೆ, ಆತ ಎಚ್ಚರಗೊಂಡಿಲ್ಲ. ಕೂಡಲೇ ಸ್ಥಳೀಯರ ನೆರವು ಪಡೆದು ಆಸ್ಪತ್ರೆಗೆ ಕರೆದೊಯ್ದಿದ್ದ. ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದರು.
ಆಗ ಆರೋಪಿ, ಸ್ಥಳೀಯರಿಗೆ “ಮನೆಯಲ್ಲಿ ನೇಣು ಬಿಗಿದುಕೊಂಡಿದ್ದ. ನಾನು ಹೋಗಿ ಬಿಡಿಸಿದೆ. ಪ್ರಜ್ಞೆ ಕಳೆದುಕೊಂಡಿದ್ದ’ ಎಂದು ಕಥೆ ಸೃಷ್ಟಿಸಿದ್ದ ಎಂದು ಪೊಲೀಸರು ಹೇಳಿದರು.
ಮರಣೋತ್ತರ ವರದಿಯಲ್ಲಿ ಕೊಲೆ ಎಂಬುದು ದೃಢ: ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಯೋಗೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿಲ್ಲ. ಬಲವಂತವಾಗಿ ಹಗ್ಗದ ಮಾದರಿಯ ವಸ್ತುವಿನಿಂದ ಕುತ್ತಿಗೆ ಬಿಗಿದ್ದಿದ್ದಾರೆ ಎಂದು ಪ್ರಾಥಮಿಕ ವರದಿ ನೀಡಿದ್ದರು. ಈ ವರದಿ ಆಧರಿಸಿ ತನಿಖೆ ನಡೆಸಿದ ಪೊಲೀಸರು, ಸ್ಥಳೀಯರ ವಿಚಾರಣೆ ನಡೆಸಿದಾಗ ತಂದೆ ಮತ್ತು ಮಗನ ನಡುವಿನ ಗಲಾಟೆ ವಿಚಾರ ಗೊತ್ತಾಯಿತು. ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ. ತನ್ನ ಮೇಲೆ ಹಲ್ಲೆ ನಡೆಸಿದ ಕೋಪಕ್ಕೆ ಕುತ್ತಿಗೆ ಬಿಗಿದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.