Advertisement
ಒಮ್ಮೆ ಅಮ್ಮನ ಚಿಕ್ಕಪ್ಪ ಚಾಮರಾಜನಗರದಿಂದ ಬಂದು, ನಮ್ಮಮನೆಯ ಹತ್ತಿರವೇ ಇದ್ದ ಅಜ್ಜಿಮನೆಯಲ್ಲಿ ಉಳಿದುಕೊಂಡಿದ್ದರು. ಆ ತುಂಬು ಕುಟುಂಬಕ್ಕೆ ಒಂದು ಲೆಕ್ಕಕ್ಕೆ ಅಪ್ಪ ಇಡೀ ಸಂಸಾರಕ್ಕೆ ಹಿರಿಯ ಅಳಿಯ. ಅಮ್ಮ ಇದ್ದಾಗ ಮಗಳ ಮನೆಯೆಂಬ ಮಮಕಾರದಿಂದ ಬಂದು ಹೋಗುತ್ತಿದ್ದಂತೆ. ಆ ಸಂಪ್ರದಾಯ ತಪ್ಪಿಸಬಾರದೆಂದು ಆ ಬಾರಿಯೂ ಬಂದರು. ಊರಿಗೆ ಹೊರಡುವ ತರಾತುರಿಯ ಮಧ್ಯೆಯೂ ಅಮ್ಮನ ಗುಣಗಾನ ಮಾಡುತ್ತ ಹೇಳಿದರು: “ಅಳಿಯಂದ್ರೆ, ನಮಗೆಲ್ಲ ಎಂಥಾ ದೊಡ್ಡ ನಷ್ಟ. ದೇವರು ನಿಮಗೆ ಈ ದು:ಖ ತಡಕೊಳ್ಳೋ ಶಕ್ತಿ ಕೊಡಲಿ. ಊರ ಕಡೆ ಮಕ್ಕಳನ್ನು ಕರೆದುಕೊಂಡು ಬನ್ನಿ’
Related Articles
Advertisement
ಅಡುಗೆಮನೆಯಲ್ಲಿ ಫಿಲ್ಟರ್ ತೆರೆದು ನೋಡಿದರೆ ಒಬ್ಬರಿಗಾಗುವಷ್ಟು ಡಿಕಾಕ್ಷನ್ ಮಾತ್ರ ಇತ್ತು. ಹಾಲಿನಲ್ಲಿ ಕೂತು ಆದೇಶ ನೀಡಿದ ಅಪ್ಪನಿಗೆ ಈ ಸೂಕ್ಷ್ಮ ತಿಳಿಯಪಡಿಸಲು, ಅಪ್ಪನಿಗೆ ಮಾತ್ರ ಕಾಣುವಂತೆ ಅಡುಗೆ ಕೋಣೆಯ ಬಾಗಿಲಿಂದ ಓರೆಯಾಗಿ ನಿಂತು ಸನ್ನೆ ಮಾಡಿದೆ. ಮೂಕ ಭಾಷೆಯ ಆ ಸಂದೇಶವನ್ನು ಹೀಗೆ ಓದಿಕೊಳ್ಳಬಹುದು: “ಮೊದಲು ಚಿಕ್ಕಪ್ಪನಿಗೆ ಕಾಫಿ ಕೊಟ್ಟು ಕಳಿಸೋಣ. ನಿಮಗೆ ಆಮೇಲೆ ಮಾಡಿಕೊಡ್ತೀನಿ. ಈಗ ಒಬ್ಬರಿಗೆ ಮಾತ್ರ ಡಿಕಾಕ್ಷನ್ ಸಾಕಾಗತ್ತೆ…’
ಅಪ್ಪ ಅಲ್ಲೇ ಅವರೆದುರೇ ಕೂಗಿದರು: “ಕೈ ಬಾಯಿ ತಿರುಗಿಸಿ ಅದೇನು ಹೇಳ್ತೀಯೋ ನಂಗೆ ಅರ್ತವಾಗೋಲ್ಲ. ಇಲ್ಲೇ ಬಂದು ಹೇಳು…’
ಬಂದ ಸಿಟ್ಟು ನುಂಗಿ, ಅಮ್ಮನ ಚಿಕ್ಕಪ್ಪನಿಗೆ ಕಾಫಿ ತಂದಿತ್ತೆ.
ಅವರು- “ಅಳಿಯಂದಿರಿಗೆ…’ ಎಂದರು.
“ಇಲ್ಲ, ಅವರು ಇಷ್ಟು ಹೊತ್ತಲ್ಲಿ ಕಾಫಿ ಕುಡಿಯೋಲ್ಲ. ಅವರಿಗೆ ನಿದ್ರೆ ಬರೋಲ್ಲ. ಹಸಿವು ಆಗೋಲ್ಲ’ -ಎಂದು ನಾನುತ್ತರಿಸಿದೆ.
ಅಪ್ಪ ಕೂಡಲೇ- “ಹಾಗೇನಿಲ್ಲ, ನನಗೆ ಯಾವಾಗ ಕಾಫಿ ಕುಡಿದರೂ ಏನೂ ವ್ಯತ್ಯಾಸ ಅಗೋಲ್ಲ’ ಎನ್ನುತ್ತ ನನ್ನ ಮರ್ಯಾದೆ ಹರಾಜಿಗೆ ಹಾಕಿದರು.
ಆ ಚಿಕ್ಕಪ್ಪ ನಿರ್ಗಮಿಸಿದ ತಕ್ಷಣ ಅಪ್ಪನನ್ನು ತರಾಟೆಗೆ ತೆಗೆದುಕೊಂಡೆ. “ಹೆಂಡತಿ ಸತ್ತ ಮೇಲೆ ಪಾಪ ಅಳಿಯನಿಗೆ ಒಂದು ತೊಟ್ಟು ಕಾಫಿಗೂ ಪರಾಧೀನ ಅಂತಾ ಅವರು ಆಡಿಕೊಳ್ಳಲ್ವಾ? ಇಡೀ ಚಾಮರಾಜನಗರ, ಮೈಸೂರಿನ ಬಳಗಕ್ಕೆಲ್ಲ ಈ ವಿಷಯ ಹಬ್ಬಲ್ವಾ? ಮಕ್ಕಳಾದ ನಮ್ಮ ಬಗ್ಗೆ ಏನಂದುಕೋತಾರೆ? ಸನ್ನೆ ಭಾಷೆ ಅರ್ಥ ಆಗದಿದ್ದರೆ ಇಲ್ಲೇ ಬಂದು ಹೇಳು ಅಂತಾ ಯಾಕೆ ಅನ್ನಬೇಕಿತ್ತು? ಅವರ ಮುಂದೆ ಬಂದು ಒಬ್ಬರಿಗೆ ಮಾತ್ರ ಆಗೋಷ್ಟು ಕಾಫಿ ಅಗತ್ತೆ ಅಂತಾ ಹೇಳ್ಳೋಕೆ ಸಾಧ್ಯಾನಾ?’- ಹೀಗೆ ನನ್ನ ಕೋಪದ ಕಿಡಿ ಮಾತಾಗಿ, ಮತಾಪಾಗಿ ಚಟಪಟ ಸಿಡಿಯುತ್ತ ಸುರುಸುರು ಬಾಣವಾದಾಗ ಅಪ್ಪ ಅಪರಾಧಿಯಂತೆ ಮೌನಕ್ಕೆ ಶರಣಾಗಿದ್ದರು.
ಒಂದು ಕಾಲಕ್ಕೆ ಅಮ್ಮ, ಮನೆಮುಂದೆ ಎಮ್ಮೆಹಾಲು ಕರೆಸಿ ಮಾಡಿಕೊಡುತ್ತಿದ್ದ ನೊರೆ ನೊರೆ ಕಾಫಿಯ ರುಚಿ, ತಾಜಾತನವನ್ನು ಅಪ್ಪ ಜೀವನದುದ್ದಕ್ಕೂ ನೆನಪು ಮಾಡಿಕೊಳ್ಳುತ್ತಿದ್ದರು. ಅಮ್ಮ ಬೆರೆಸುತ್ತಿದ್ದ ಅನುರಾಗ ಆ ನೆನಪಲ್ಲಿ ಇಣುಕುತ್ತಿತ್ತು.
ಅಪ್ಪನ ಮರಣಶಾಸನ ಏನು ಗೊತ್ತೇ?
“ನನ್ನ ತಿಥಿ, ಕರ್ಮಾಂತ ಹೆಚ್ಚು ಹೂಡಿಕೋಬೇಡಿ. ಆ ದಿನ ತೆಂಗಿನಮರಗಳಿಗೆ ನೀರು ಹಾಕಿ. ಬಂದವರಿಗೆ ಒಳ್ಳೇ ಕಾಫಿ ಮಾಡಿಕೊಡಿ. ಸೈಗಾಲ್ ಹಾಡುಗಳ ಕ್ಯಾಸೆಟ್ ದಾನ ಮಾಡಿ…’
-ಸಾಯಿಲಕ್ಷ್ಮಿ