ಬೆಂಗಳೂರು: ಚರ್ಚ್‌ನ ಪ್ರಾರ್ಥನೆಯಲ್ಲೂ ಕನ್ನಡ ಜಾರಿಗೆ ತರುವ ಜತೆಗೆ ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಫಾದರ್ ಚಸರಾ ಅವರು ಕನ್ನಡ ಭಾಷೆಯ ಉಳಿವಿಗಾಗಿ ಶ್ರಮಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಬುಧವಾರ ನಡೆದ “ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆಗ ಬೆಂಗಳೂರಿನಂತಹ ಮಹಾನಗರದಲ್ಲಿ ಕನ್ನಡ ಉಳಿಸುವುದು ಕಷ್ಟವಾಗಿತ್ತು.
ಅಂತಹ ಪರಿಸ್ಥಿತಿಯಲ್ಲಿ ಕನ್ನಡ ನಾಡಿನಲ್ಲಿ ಪ್ರಾರ್ಥನೆ ಸೇರಿದಂತೆ ಜನರಿಗೆ ಅರ್ಥ ಆಗುವ ಕನ್ನಡ ಭಾಷೆಯ ಉಳಿವಿಗಾಗಿ ಜೀವನ ಮುಡಿಪಾಗಿಟ್ಟಿದ್ದ ಚಸರಾ ಅವರು ಪ್ರಾರ್ಥನೆಯಲ್ಲಿ ಕನ್ನಡವನ್ನು ಜಾರಿಗೆ ತಂದರು. ಜತೆಗೆ ಕನ್ನಡಕ್ಕಾಗಿ ವಿವಿಧ ಹೋರಾಟ ನಡೆಸಿದ್ದರು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕನ್ನಡ ಉಳಿಸಿಕೊಳ್ಳುವಲ್ಲಿ ರೈತರು, ಕಾರ್ಮಿಕರು, ಕೂಲಿಕಾರರು, ಗ್ರಾಮೀಣ ಪ್ರದೇಶಗಳ ಜನರ ಪಾತ್ರ ಹೆಚ್ಚಿದೆ. ಪ್ರಸ್ತುತ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆಡಳಿತದಲ್ಲಿ ಕನ್ನಡವಿದ್ದು, ವಿಧಾನಸೌಧದಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಕನ್ನಡ ಜಾರಿಯಾಗಿಲ್ಲ.
ಈ ಕುರಿತು ಸಾಕಷ್ಟು ಹೋರಾಟ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪೂರ್ಣ ಆಡಳಿತ ಕನ್ನಡದಲ್ಲೇ ಆಗುವ ಭರವಸೆ ಇದೆ ಎಂದು ಹೇಳಿದರು. ಕನ್ನಡಪರ ಹೋರಾಟಗಾರ ಜೇಕಬ್ ಫ್ರಾನ್ಸಿನ್ ಹಾಗೂ ರೈತಪರ ಹೋರಾಟಗಾರ ಮಾರುತಿ ಟಿ. ಮಾನ್ಪಡೆ ಅವರಿಗೆ “ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ, ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ರಾಜಶೇಖರ ಹತಗುಂದಿ, ವ.ಚ.ಚನ್ನೇಗೌಡ, ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.