ಬೆಂಗಳೂರು: ಆಯ ತಪ್ಪಿ ಕೆರೆಗೆ ಬಿದ್ದ ಪುತ್ರ ಮತ್ತು ಆತನನ್ನು ರಕ್ಷಿಸಲು ಹೋದ ತಂದೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಾಗಲೂರಿನಲ್ಲಿ ಸೋಮವಾರ ಸಂಜೆ ನಡೆದಿದೆ.
ಉತ್ತರಪ್ರದೇಶ ಮೂಲದ ಜಿನೇಂದ್ರ ಶರ್ಮಾ ಮತ್ತು ಪುತ್ರ ಲವ(3) ಮೃತರು. ಸೋಮವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮಂಗಳವಾರ ಇಬ್ಬರ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ನಗರದಲ್ಲಿ ಮರಗೆಲಸ ಮಾಡಿಕೊಂಡಿದ್ದ ಜಿನೇಂದ್ರ ಶರ್ಮಾ ತನ್ನ ಪತ್ನಿ ಮತ್ತು ಪುತ್ರನ ಜತೆ ಬೇಗೂರಿನಲ್ಲಿ ವಾಸವಾಗಿದ್ದರು. ಸೋಮವಾರ ಸಂಜೆ ಜಿನೇಂದ್ರ ಶರ್ಮಾ ತಮ್ಮ ಪುತ್ರನನ್ನು ಆಟವಾಡಲು ಬೇಗೂರು ಕೆರೆ ಬಳಿ ಕರೆದೊಯ್ದಿದ್ದರು.
ಕೆರೆ ಪಕ್ಕ ಆಟವಾಡುತ್ತಿದ್ದ ಮಗು ಆಯತಪ್ಪಿ ಕೆರೆಯೊಳಗೆ ಬಿದ್ದಿದೆ. ಇದನ್ನು ಗಮನಿಸಿದ ಜಿನೇಂದ್ರ ಶರ್ಮಾ ಮಗುವನ್ನು ರಕ್ಷಿಸಲು ತಾವೂ ಕೆರೆಗೆ ಹಾರಿದ್ದಾರೆ. ಆದರೆ, ನೀರಿನಿಂದ ಹೊರಬರಲು ಸಾಧ್ಯವಾಗದೆ ಇಬ್ಬರೂ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಬಾಗಲೂರು ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಸೋಮವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರಾದರೂ ಇಬ್ಬರೂ ಸಿಗಲಿಲ್ಲ. ಮಂಗಳವಾರ ಬೆಳಗ್ಗೆ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದರು.