ವಿಧಾನಸಭೆ: ವಿಧಾನ ಮಂಡಲ ಕಲಾಪ ಪ್ರಸಾರಕ್ಕೆ ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮೆರಾ ಹಾಗೂ ಪತ್ರಿಕಾ ಛಾಯಾಗ್ರಾಹಕರಿಗೆ ನಿರ್ಬಂಧ ವಿಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಶನಿವಾರ ಧನವಿನಿಯೋಗ ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸದನದ ಗೌರವ ಹೆಚ್ಚಾಗುವಂತೆ ಉತ್ತಮ ಚರ್ಚೆಗಳಾಗಬೇಕು. ನಾವು-ನೀವು ಎಷ್ಟು ವರ್ಷ ಇಲ್ಲಿರುತ್ತೇವೆಯೋ ಗೊತ್ತಿಲ್ಲ. ನಾವು ಬಿಟ್ಟು ಹೋಗುವ ಹೆಜ್ಜೆಗಳು ಕಡತಗಳಲ್ಲಿ ದಾಖಲಾಗಬೇಕಲ್ಲವೆ?
ವಿಧಾನಸಭೆಯಲ್ಲಿ ಗುಣಮಟ್ಟದ ಉತ್ತಮ ಚರ್ಚೆ ನಡೆಯುತ್ತಿಲ್ಲ ಎಂದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಖಾಸಗಿ ಸುದ್ದಿವಾಹಿನಿಗಳ ಕ್ಯಾಮೆರಾಗಳಿದ್ದರೆ ಹುಮ್ಮಸ್ಸಿನ ಮಾತುಗಳ ಜತೆಗೆ ಎಚ್ಚರಿಕೆಯೂ ಇರುತ್ತಿತ್ತು ಎಂದು ಹೇಳಿದರು. ರಾಜ್ಯದಲ್ಲಿ ಇನ್ನೂ ಅವಿದ್ಯಾವಂತರಿದ್ದು, ದೃಶ್ಯ ಮಾಧ್ಯಮಗಳೇ ಸುದ್ದಿ ಮೂಲಗಳಾಗಿವೆ.
ಸದನದಲ್ಲಿ ಚರ್ಚೆಯಾಗುವ ವಿಚಾರ ರಾಜ್ಯದ ಜನರಿಗೆ ಗೊತ್ತಾಗಬೇಕು. ಸದನದಲ್ಲಿ ಕ್ಯಾಮೆರಾ ಪ್ರವೇಶ ನಿರ್ಬಂಧಕ್ಕೆ ಮುಖ್ಯಮಂತ್ರಿಗಳಿಗೂ ಒಪ್ಪಿಗೆ ಇದ್ದಂತಿಲ್ಲ. ಈ ಬಗ್ಗೆ ಯಡಿಯೂರಪ್ಪ ಟ್ವೀಟ್ ಮಾಡಿ, ಸಭಾಧ್ಯಕ್ಷರ ಬಳಿ ಚರ್ಚಿಸುವುದಾಗಿ ಹೇಳಿದ್ದರು. ಬಳಿಕ ಟ್ವೀಟ್ ಡಿಲೀಟ್ ಆಗಿತ್ತು ಎಂದು ಕಾಲೆಳೆದರು.
ವಿಧಾನಸಭಾಧ್ಯಕ್ಷರು ವಿವೇಚನಾಧಿಕಾರ ಬಳಸಿ ನಿರ್ಧಾರ ಕೈಗೊಂಡಿರಬಹುದು. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗದಷ್ಟೇ ಮಾಧ್ಯಮವೂ ಮುಖ್ಯ. ನಾನು ಸಿಎಂ ಆಗಿದ್ದಾಗ ಸರ್ಕಾರದ ಸುದ್ದಿ ವಾಹಿನಿ ತೆರೆಯಲು ಚಿಂತಿಸಿ, ನಂತರ ಕೈಬಿಟ್ಟೆವು ಎಂದು ಹೇಳಿದರು.