ಬೆಟಗೇರಿ: ಇಂದಿನ ದಿನಮಾನಗಳಲ್ಲಿ ಬಾಲ್ಯ ವಿವಾಹ ನಿಯಂತ್ರಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು. ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಕ್ಷಮ್ಯ ಅಪರಾಧವಾಗಿದೆ. ಹೆಣ್ಣು ಮಕ್ಕಳಿಗೆ ಬೇಗ ವಿವಾಹ ಬೇಡ, ಬೇಗ ಮದುವೆಯಾದ ಹೆಣ್ಣು ಮಕ್ಕಳು ಬದುಕಿನೂದ್ದಕ್ಕೂ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಧಾರವಾಡ ಜಿಲ್ಲಾ ಎಂಎಸ್‌ಕೆ ಸಂಯೋಜಕರಾದ ಆರತಿ ಸಬರದ ಹೇಳಿದರು.
ಬೆಟಗೇರಿ ಗ್ರಾಮದ ವಿವಿದೇ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಹಿಳಾ ಸಮಾಖ್ಯ ಕರ್ನಾಟಕ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ 18ರಂದು ನಡೆದ ತರಬೇತಿ ಕಾರ್ಯಾಗಾರ, ತಾಯಂದಿರ ಸಭೆ ಹಾಗೂ “ಬೇಗ ಬೇಡ ಕೊರಳಿಗೆ ಉರುಳು’ ಬಾಲ್ಯ ವಿವಾಹ ಜಾಗೃತಿ ಅಭಿಯಾನ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೂಡಿಸಲು ಪ್ರತಿಯೊಬ್ಬ ತಂದೆ, ತಾಯಿ ಪ್ರಯತ್ನಿಸಬೇಕು. ಬಾಲ್ಯ ವಿವಾಹ ನಿಯಂತ್ರಣ ಜಾಗೃತಿ ಕುರಿತು ಸಲಹೆ ತಿಳಿಸಿದರು.
ಬೆಳಗಾವಿ ಜಿಲ್ಲಾ ಎಂಎಸ್‌ಕೆ ಸಂಯೋಜಕರಾದ ನಾಗರತ್ನಾ ಗೂಳಿ ಉಪನ್ಯಾಸಕರಾಗಿ ಮಾತನಾಡಿ, ಮನೆಯಲ್ಲಿ ಮಕ್ಕಳ ಓದಿನ ಕಡೆ ತಂದೆ, ತಾಯಿ ವಿಶೇಷ ಗಮನ ಹರಿಸಿದರೆ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುವುದರಲ್ಲಿ ಎರಡು ಮಾತಿಲ್ಲ ಎಂದರು.
ಸಿರಿಗನ್ನಡ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷೆ ರಜನಿ ಜಿರಗ್ಯಾಳ ಮಾತನಾಡಿ, ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಒಳ್ಳೆಯ ಸಂಸ್ಕಾರ ನೀಡುವಲ್ಲಿ ತಾಯಿಂದಿರ ಪಾತ್ರ ಮಹತ್ವದಾಗಿದೆ ಎಂದರು. ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ಅಧ್ಯಕ್ಷತೆ ವಹಿಸಿ, ಸಿರಿಗನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಜಯಾ ಚುನುಮರಿ, ನ್ಯಾಯವಾದಿ ಮಂಗಲಾ ಜಕಾತಿ, ಬೆಳಗಾವಿ ಜಿಲ್ಲಾ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಆಯೋಗದ ಕಾರ್ಯಾಧ್ಯಕ್ಷರಾದ ವೈಶಾಲಿ ಭರಭರಿ ಮಾತನಾಡಿದರು. ಅತಿಥಿಗಳನ್ನು ಶಾಲೆಯ ಹಾಗೂ ತಾಯಿಂದಿರ ಪರವಾಗಿ ಶಾಲು ಹೊದಿಸಿ ಸತ್ಕರಿಸಿದರು.
ಬೆಳಗಾವಿ ಎಸ್‌ಪಿಸಿ ನೋಡಲ್ ಅಧಿಕಾರಿ ಜ್ಯೋತಿ ಪರಾಂಡೆ, ಪಿಎಚ್‌ಸಿ ವೈದ್ಯಾಧಿಕಾರಿ ಭುವನೇಶ್ವರಿ ಚೆನ್ನಾಳ, ಕಿರಿಯ ಸಂಪನ್ಮೂಲ ವ್ಯಕ್ತಿ ಸಂಪತ್ತಾ ಘಂಟೆ, ಸಿಆರ್‌ಸಿ ಪೂರ್ಣಿಮಾ ಭಾವಿಕಟ್ಟಿ, ಗ್ರಾಪಂ ಅಧ್ಯಕ್ಷೆ ಬಸವ್ವ ದೇಯಣ್ಣವರ, ಈರಯ್ಯ ಹಿರೇಮಠ, ಶ್ರೀಶೈಲ ಗಾಣಗಿ, ಶಿವಾಜಿ ನೀಲಣ್ಣವರ, ರಾಮಣ್ಣ ಬಳಿಗಾರ, ವೀರಸಂಗಪ್ಪ ದೇಯಣ್ಣವರ, ನಿಂಗಪ್ಪ ಕೋಣಿ, ವಿದ್ಯಾರ್ಥಿ ತಾಯಂದಿರು, ಪಾಲಕರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಇದ್ದರು.