ಗಣೇಶಪುರಿ, ಮಾ. 4: ಭಿವಂಡಿ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಲಕ್ಷಾಂತರ ಭಾವಿಕರ ಶ್ರದ್ಧಾಸ್ಥಾನವೆನಿಸಿದ ಗಣೇಶಪುರಿ ಶ್ರೀ ಭೀಮೇಶ್ವರ ಸದ್ಗುರು ನಿತ್ಯಾನಂದ ಬಾಬಾ ಸಮಾಧಿ ಮಂದಿರದಲ್ಲಿ ವಿವಾದವೊಂದು ತಲೆ ಎತ್ತಿ ಹಲವು ದಿನಗಳಾಗಿದ್ದು, ಪ್ರಸ್ತುತ ಭಕ್ತಾದಿಗಳು ವಿಶ್ವಸ್ಥ ಮಂಡಳಿಯ ವಿರುದ್ಧ ಭುಗಿಲೆದಿದ್ದಾರೆ.
ಮಂದಿರದಲ್ಲಿ ಪ್ರತಿಷ್ಠಾಪಿತಗೊಂಡಿರುವ ನಿತ್ಯಾನಂದ ಸ್ವಾಮಿ ಮೂರ್ತಿಗೆ ಬಣ್ಣ ಹಚ್ಚುವ ಕಾರ್ಯವು ಕಳೆದ ಜ. 20 ರ ಮಧ್ಯ ರಾತ್ರಿ ನಡೆಸಲಾಗಿದ್ದು, ಪವಿತ್ರ ಸಮಾಧಿ ಇರುವ ಪೀಠದ ಮೇಲೆ ಕೆಲಸಗಾರರನ್ನು ಹತ್ತಿಸಿ ಅನುಚಿತ ರೀತಿಯಲ್ಲಿ ಕೆಲಸ ಮಾಡಿಸಿದ ವಿಶ್ವಸ್ಥ ಮಂಡಳಿಯ ವಿರುದ್ಧ ಭಕ್ತಾದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಗಣೇಶ್ ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು, ಘಟನೆಯ ವಿರುದ್ಧವಾಗಿ ಫೆ. 12 ರಂದು ಗಣೇಶಪುರಿಯಲ್ಲಿನ ಅಂಗಡಿ ಮುಗ್ಗಟ್ಟುಗಳನ್ನು ತೆರೆಯದೆ ಸಂಪೂರ್ಣ ಬಂದ್ ಆಚರಿಸಲಾಗಿತ್ತು.
ವಿಶ್ವಸ್ಥ ಮಂಡಳಿಯ ಕಾರ್ಯಾಧ್ಯಕ್ಷ ರಾಮಚಂದ್ರ ಶೆಣೈ ಮತ್ತು ಸ್ಥಳೀಯ ವಿಶ್ವಸ್ಥರಾದ ಶ್ರೀಪಾದ ಜೋಷಿ, ಮುರಲೀಧರ ಹೆಗಡೆ ಇವರ ಅವಿವೇಕತನವನ್ನು ಖಂಡಿಸಿ ಸ್ಥಳೀಯ ಭಕ್ತಾದಿಗಳು ಗಣೇಶಪುರಿ ಸಂಘರ್ಷ ಸಮಿತಿಯ ಬ್ಯಾನರ್‌ನಡಿಯಲ್ಲಿ ಒಂದಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ವಿಶ್ವಸ್ಥ ಮಂಡಳಿಯನ್ನು ವಜಾಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸುವ ಬೇಡಿಕೆಯೂಂದಿಗೆ ಸುನೀಲ್ ಪ್ರತಾಪ್ ದೇವ್ರೆ ಇವರ ನೇತೃತ್ವದಲ್ಲಿ ಮಾ. 4 ರಿಂದ ಸಮಾಧಿ ಪರಿಸರದಲ್ಲಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ. ಪ್ರತಿಭಟನೆಯಲ್ಲಿ ನಿರತರಾಗಿರುವ ರಾಮಚಂದ್ರ ನಾಯ್ಕ, ಪ್ರಕಾಶ್ ಕಾಂಬ್ಳಿ, ಸುನೀಲ್ ದೇವ್ರೆ, ಭರತ್, ದೀಪಕ್ ಪೂಜಾರಿ, ಪ್ರಸಾದ್ ಸುವರ್ಣ ಇವರು ತಮ್ಮ ಉದ್ದೇಶ ಹಾಗೂ ಬೇಡಿಕೆಗಳನ್ನು ಸ್ಪಷ್ಟ ಪಡಿಸಿದ್ದು, ಸ್ಥಾನೀಯ ಸಂಘಟನೆಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ. ಸಂಘರ್ಷ ಸಮಿತಿಯ ಸತ್ಯಾಗ್ರಹದ ಸ್ಥಳದಲ್ಲಿ ಹಾಜರಾಗಿ ತನ್ನ ವೈಯಕ್ತಿಕ ಬೆಂಬಲವನ್ನು ಸೂಚಿಸಿವೆ.
ಬೊಯಿಸರ್‌ನ ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥರಾದ ಸತ್ಯಾ ಕೋಟ್ಯಾನ್ ಅವರು ಧಾರ್ಮಿಕ ಸ್ಥಳದಲ್ಲಿನ ಪಾವಿತ್ರ್ಯತೆಯನ್ನು ರಕ್ಷಿಸುವುದು ವಿಶ್ವಸ್ಥ ಮಂಡಳಿ ಹಾಗೂ ಪ್ರತಿಯೋರ್ವ ಭಕ್ತಾದಿಗಳ ಕರ್ತವ್ಯವಾಗಿದೆ. ಬಾಬಾ ಸಮಾಧಿಯು ಪವಿತ್ರ ಶ್ರದ್ಧಾ ಸ್ಥಾನವಾಗಿದ್ದು ಅದರ ಮೇಲೆ ಹತ್ತಿ ಕಾಲೂರಿದ್ದು ತೀರಾ ಅನುಚಿತ ವರ್ತನೆಯಾಗಿದೆ. ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗುವ ರೀತಿ ವರ್ತಿಸಿದ ತಪ್ಪಿತಸ್ಥರನ್ನು ಗುರುತಿಸುವಲ್ಲಿ ಯಾವುದೇ ರಾಜಕೀಯ ಇರಬಾರದು ಎಂದು ತಮ್ಮ ಕಳಕಳಿಯನ್ನು ವ್ಯಕ್ತ ಪಡಿಸಿದ್ದಾರೆ. ಸ್ಥಳೀಯ ಶಾಸಕರಾದ ಹಿತೇಂದ್ರ ಠಾಕೂರ್ ಅವರು ಈ ಬಗ್ಗೆ ಚಾರಿಟಿ ಕಮಿಶನರ್‌ಗೆ ಪತ್ರ ಬರೆದಿದ್ದು, ಭಕ್ತಾದಿಗಳು ಘಟನೆಯ ಕುರಿತು ಶಾಂತಿ ಭಂಗವಾದಂತೆ ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ವಿನಂತಿಸಿದ್ದಾರೆ.
– ಚಿತ್ರ-ವರದಿ: ರವಿಶಂಕರ್ ಡಹಾಣೂರೋಡ್