ಬೆಂಗಳೂರು: ಕೇಂದ್ರ ಸರ್ಕಾರವು ಫಾಸ್ಟ್‌ಟ್ಯಾಗ್ ಅಳವಡಿಕೆಗೆ ವಿಧಿಸಿದ್ದ ಗಡುವನ್ನು ಕೊನೆಯ ಕ್ಷಣದಲ್ಲಿ ಮತ್ತೆ ಒಂದು ತಿಂಗಳು ವಿಸ್ತರಿಸಿದ್ದರಿಂದ ನಗರ ಸೇರಿದಂತೆ ರಾಜ್ಯದ ವಾಹನ ಸವಾರರು ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯಾದ್ಯಂತ ರಾಷ್ಟೀಯ ಹೆದ್ದಾರಿಗಳಲ್ಲಿ ಒಟ್ಟಾರೆ 39 ಟೋಲ್ ಪ್ಲಾಜಾಗಳಿದ್ದು, 400ಕ್ಕೂ ಅಧಿಕ ನಿರ್ಗಮನ ಮತ್ತು ಪ್ರವೇಶ ದ್ವಾರಗಳಿವೆ.
ಅವುಗಳ ಮೂಲಕ 6 ಲಕ್ಷಕ್ಕೂ ಅಧಿಕ ವಾಹನಗಳು ನಿತ್ಯ ಸಂಚರಿಸುತ್ತವೆ. ಆದರೆ, ಈವರೆಗೆ ಶೇ.32ರಷ್ಟು ವಾಹನಗಳು ಅಂದರೆ 1.76 ಲಕ್ಷ ವಾಹನಗಳಷ್ಟೇ ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡು ಸಂಚರಿಸುತ್ತಿವೆ. ಉಳಿದ ವಾಹನದಾರರು ಸೋಮವಾರದಿಂದ ದುಪ್ಪಟ್ಟು ಶುಲ್ಕ ಪಾವತಿಸಬೇಕಿತ್ತು. ಇದರಿಂದ ವಾಹನ ಮಾಲೀಕರು ಚಿಂತೆಗೀಡಾಗಿದ್ದರು. ಕೇಂದ್ರ ಸರ್ಕಾರ ಕೊನೆಯ ಗಳಿಗೆಯಲ್ಲಿ ಗಡುವು ಅವಧಿಯನ್ನು ಜ. 15ರವರೆಗೆ ಮುಂದೂಡಿದ್ದರಿಂದ ವಾಹನ ಮಾಲೀಕರು ನಿರಳರಾದರು.
“ಡಿ. 13ರ ಸಂಜೆ ವೇಳೆಗೆ ಒಟ್ಟು 5.50 ಲಕ್ಷ ವಾಹನಗಳು ಟೋಲ್ ಪ್ಲಾಜಾಗಳ ಮೂಲಕ ಸಂಚಾರ ನಡೆಸಿದ್ದು, ಈ ಪೈಕಿ ಶೇ. 32 (1.76 ಲಕ್ಷ) ವಾಹನಗಳು ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡಿವೆ’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಾಜ್ಯ ನಿರ್ದೇಶಕ ಶ್ರೀಧರ್ ಮಾಹಿತಿ ನೀಡಿದರು.
ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಲು ವಾಹನ ನಿಲ್ಲಿಸದೆ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸುವ ಫಾಸ್ಟ್‌ಟ್ಯಾಗ್ ತಂತ್ರಜ್ಞಾನ ಅಳವಡಿಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಡಿ. 1ರವರೆಗೆ ಗಡುವು ವಿಧಿಸಲಾಗಿತ್ತು. ಆದರೆ, ವಾಹನದಾರರು ಪೂರ್ಣ ಪ್ರಮಾಣದಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಡಿ. 15ಕ್ಕೆ ವಿಸ್ತರಿಸಲಾಗಿತ್ತು. ಶನಿವಾರ ಮತ್ತೂಂದು ತಿಂಗಳ ಕಾಲ ಅವಧಿ ವಿಸ್ತರಿಸಲಾಗಿದೆ.
ಸ್ಥಳೀಯರಿಗೆ ಶುಲ್ಕ ವಿನಾಯ್ತಿ: ಟೋಲ್ ಪ್ಲಾಜಾ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ವಾಸವಿರುವ ಸ್ಥಳೀಯರಿಗೆ ಎಂದಿನಂತೆ ಶುಲ್ಕ ವಿನಾಯ್ತಿ ನೀಡಲಾಗುತ್ತದೆ. ಇದಕ್ಕಾಗಿ ವಾಹನ ಮಾಲೀಕರು ತಮ್ಮ ನಿವಾಸದ ಪ್ರಮಾಣ ಪತ್ರವನ್ನು ಫಾಸ್ಟ್‌ಟ್ಯಾಗ್ ಪಡೆಯುವ ಬ್ಯಾಂಕ್ ಅಥವಾ ಸೇವಾ ಕೇಂದ್ರಕ್ಕೆ (ಪಿಒಎಸ್) ನೀಡಬೇಕು. ವಿಳಾಸ ಪರಿಶೀಲಿಸಿ ಎನ್‌ಎಚ್‌ಎಐ ಅಧಿಕಾರಿಗಳು ದೃಢೀಕರಿಸಿದ ಬಳಿಕ ರಿಯಾಯ್ತಿ ದರದ ಫಾಸ್ಟ್‌ಟ್ಯಾಗ್ ನೀಡಲಾಗುತ್ತದೆ.
ಬಿಎಂಟಿಸಿ ಎಲ್ಲ ಬಸ್‌ಗಳಿಗೂ ಟ್ಯಾಗ್: ಈ ಮಧ್ಯೆ ನಿತ್ಯ ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ಬಿಎಂಟಿಸಿ ಬಸ್‌ಗಳಿಗೆ ಈಗಾಗಲೇ ಫಾಸ್ಟ್‌ಟ್ಯಾಗ್ ಅಳವಡಿಸಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳು ಈ ನಿಟ್ಟಿನಲ್ಲಿ ಹಿಂದೆ ಉಳಿದಿವೆ. “ನಗರದ ಹೊರಭಾಗಗಳಿಗೆ ಪ್ರತಿ ದಿನ ಬಿಎಂಟಿಸಿಯ 450 ಬಸ್‌ಗಳು ಕಾರ್ಯಾಚರಣೆಯಾಗುತ್ತಿದ್ದು, ಅವುಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಸಲಾಗಿದೆ. ಹಾಗಾಗಿ, ಯಾವುದೇ ರೀತಿಯ ಸಮಸ್ಯೆಯಾಗದು’ ಎಂದು ಬಿಎಂಟಿಸಿ ನಿರ್ದೇಶಕಿ ಸಿ. ಶಿಖಾ
“ಉದಯವಾಣಿ’ಗೆ ತಿಳಿಸಿದ್ದಾರೆ.
ಒಂದು ವೇಳೆ ಗಡುವು ವಿಸ್ತರಣೆ ಆಗದಿದ್ದರೆ ಫಾಸ್ಟ್‌ಟ್ಯಾಗ್‌ಗಳಿಗೆ ಏಕಾಏಕಿ ಬೇಡಿಕೆ ಹೆಚ್ಚಾಗಿ ನೂಕುನುಗ್ಗಲು ಉಂಟಾಗುತ್ತಿತ್ತು. ವಾಹನ ಸವಾರರು ಪರದಾಡುವಂತಾಗುತ್ತಿತ್ತು.
-ಉಮೇಶ್, ರಾಜಾಜಿನಗರದ ಕಾರು ಚಾಲಕ