ಕೊಲಂಬೋ: ವಿಶ್ವದ ಕ್ರಿಕೆಟ್ ರಾಷ್ಟ್ರಗಳು ತನ್ನ ನೆಲದಲ್ಲಿ ಕ್ರಿಕೆಟ್ ಆಡುವಂತೆ ಮಾಡಲು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ತನ್ನ ಪ್ರಯತ್ನವನ್ನು ಮುಂದುವರಿಸುತ್ತಲೇ ಇದೆ. ಆದರೆ ಈ ಪ್ರಯತ್ನಕ್ಕೊಂದು ಭಾರೀ ಹಿನ್ನಡೆಯಾಗುವ ಬೆಳವಣಿಗೆಯೊಂದು ನಡೆದಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಮುಂಬರುವ ಪಾಕಿಸ್ಥಾನ ಪ್ರವಾಸದಲ್ಲಿ ಲಂಕಾ ತಂಡದ ಪ್ರಮುಖ ಆಟಗಾರರು ಯಾರೂ ಇರುವುದಿಲ್ಲ.
ಶ್ರೀಲಂಕಾದ ಹಿರಿಯ ಆಟಗಾರರಾಗಿರುವ ಲಸಿತ ಮಾಲಿಂಗ, ಆ್ಯಂಜಲೋ ಮ್ಯಾಥ್ಯೂಸ್ ಸಹಿತ ತಂಡದ ಹತ್ತು ಪ್ರಮುಖ ಆಟಗಾರರು ಭದ್ರತಾ ಕಾರಣಗಳನ್ನು ನೀಡಿ ಪಾಕಿಸ್ಥಾನ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರೊಂದಿಗೆ ಸೋಮವಾರ ಆಯೋಜಿಸಿದ್ದ ಸಭೆಯ ಬಳಿಕ ಈ ನಿರ್ಧಾರ ಹೊರಬಿದ್ದಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಲಂಕಾ ತಂಡದ ಟಿ20 ಕಪ್ತಾನ ಲಸಿತ ಮಾಲಿಂಗ, ಧಿಮುತ್ ಕರುಣರತ್ನೆ, ಆ್ಯಂಜಲೋ ಮ್ಯಾಥ್ಯೂಸ್ ಸಹಿತ ಒಟ್ಟು ಹತ್ತು ಆಟಗಾರರು ಇದೇ ಸೆಪ್ಟಂಬರ್ 27ರಂದು ಪ್ರಾರಂಭವಾಗಲಿರುವ ಪಾಕಿಸ್ಥಾನ ಪ್ರವಾಸಕ್ಕೆ ತೆರಳದೇ ಇರಲು ನಿರ್ಧರಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡವು ಪಾಕಿಸ್ಥಾನದಲ್ಲಿ ಅಕ್ಟೋಬರ್ 09ರವರೆಗೆ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನು ಆಡಲಿದೆ.
2009ರಲ್ಲಿ ಪಾಕ್ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ ಪ್ರಯಾಣಿಸುತ್ತಿದ್ದ ಬಸ್ಸಿನ ಮೇಲೆ ಲಾಹೋರಿನಲ್ಲಿ ಗನ್ ಧಾರಿಯೊಬ್ಬ ದಾಳಿ ಮಾಡಿದ ಘಟನೆಯ ಬಳಿಕ ಪಾಕಿಸ್ಥಾನದಲ್ಲಿ ಯಾವುದೇ ಮಹತ್ವದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ ಮತ್ತು ವಿಶ್ವ ಕ್ರಿಕೆಟ್ ಮಟ್ಟದಲ್ಲಿ ಪಾಕಿಸ್ಥಾನ ನೆಲ ಪ್ರತ್ಯೇಕವಾಗಿಯೇ ಉಳಿದುಬಿಟ್ಟಿದೆ.
ಶ್ರೀಲಂಕಾ ಕ್ರಿಕೆಟ್ ಆಟಗಾರರಲ್ಲಿ ಹಲವು ಆಟಗಾರರ ಕುಟುಂಬ ಸದಸ್ಯರು ಈ ಪ್ರವಾಸದ ಕುರಿತು ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಪಾಕ್ ಪ್ರವಾಸದ ಕುರಿತು ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಶ್ರಿಲಂಕಾ ಕ್ರಿಕೆಟ್ ಮಂಡಳಿ ಪ್ರವಾಸಕ್ಕೆ ಆಯ್ಕೆಗೊಂಡಿರುವ ತನ್ನ ಆಟಗಾರರಿಗೆ ನೀಡಿದೆ ಎಂದು ತಿಳಿದುಬಂದಿದೆ.
2009ರ ಲಾಹೋರ್ ಉಗ್ರ ದಾಳಿಯ ಬಳಿಕ ಪಾಕಿಸ್ಥಾನದಲ್ಲಿ ಯಾವುದೇ ಮಹತ್ವದ ಕ್ರಿಕೆಟ್ ಸರಣಿ ಆಯೋಜನೆಗೊಂಡಿಲ್ಲ. 2017ರಲ್ಲಿ ಶ್ರೀಲಂಕಾ ತಂಡ ಲಾಹೋರ್ ನಲ್ಲಿ ಏಕೈಕ ಟಿ20 ಪಂದ್ಯವನ್ನು ಆಡಿತ್ತು ಮತ್ತು ಐಸಿಸಿ ವಿಶ್ವ ಇಲೆವೆನ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮಾತ್ರ ಕಳೆದ ಎರಡು ವರ್ಷಗಳಲ್ಲಿ ಪಾಕ್ ನೆಲದಲ್ಲಿ ಕಿರು ಟಿ20 ಸರಣಿ ಪಂದ್ಯಗಳನ್ನಾಡಿದ್ದವು.