*
ಗೆಜ್ಜೆ ಅಂದರೆ ಅವಳು, ಗೆಜ್ಜೆಯನ್ನು ಮಾತನಾಡಿಸುವ ನೆವದಲ್ಲಿ ಅವಳ ಕುಶಲ ವಿಚಾರಿಸುತ್ತಾನೆ ಹುಡುಗ. ಅವಳ ದನಿ ಕೆಲವೊಮ್ಮೆ ಅವನಿಗೆ ಗೆಜ್ಜೆಯಂತೆ ಕೇಳಿಸೋದಿದೆ, ನಗುವಂತೂ ಥೇಟ್ ಗೆಜ್ಜೆಯ ಝಲ್ ಝಲ್ ನಾದವೇ.
Advertisement
ಬಹಳ ಹಿಂದಿನಿಂದಲೇ ಗೆಜ್ಜೆಗೊಂದು ರೊಮ್ಯಾಂಟಿಕ್ ಕಲ್ಪನೆ ಇದೆ. ಗೆಜ್ಜೆ ಅಂದರೆ ಸಾಕು, ಮನಃಪಟಲದಲ್ಲಿ ಗೆಜ್ಜೆ ತೊಟ್ಟ ಲಂಗದಾವಣಿಯ ಹಳ್ಳಿ ಹುಡುಗಿ ಇಣುಕುತ್ತಾಳೆ. ಮಾಡರ್ನ್ ಹುಡುಗಿಯರು ಗೆಜ್ಜೆ ಹಾಕ್ಕೊಳ್ಳೋದೆ ಇಲ್ವಲ್ಲಾ? ಅಂತ ಗೊಣಗೋ ಹಾಗಿಲ್ಲ. ಈ ಜನರೇಶನ್ ಹೆಣ್ಮಕ್ಕಳು ಕಾಲಿಗೆ ಗೆಜ್ಜೆ ತೊಡುತ್ತಾರೋ ಇಲ್ಲವೋ ಬೇರೆ ಮಾತು, ಆದರೆ ಗೆಜ್ಜೆ ಪ್ರೀತಿ ಹೆಣ್ಮನಸ್ಸಿಂದ ದೂರ ಸರಿದಿಲ್ಲ ಅನ್ನೋದು ಇತ್ತಿತ್ತೀಚೆಗೆ ಸ್ಪಷ್ಟವಾಗ್ತಿದೆ. ಈ ಕಾಲದ ಹುಡುಗೀರು ಹಳತರಲ್ಲೇನೋ ಹೊಸತು ಹುಡುಕುವ ಜಾಯಮಾನದವರು. ಹಳೆಯ ಗೆಜ್ಜೆಯನ್ನು ಹಳಬರ ಹಾಗೆ ಕಾಲಿಗೆ ಕಟ್ಟಿಕೊಂಡು ಓಡಾಡುವುದರಲ್ಲಿ ಅವರಿಗೆ ಅಂಥ ಖುಷಿ ಏನಾಗಲ್ಲ, ಹಾಗಂತ ಗೆಜ್ಜೆಯ ಕಿಣಿ ಕಿಣಿ ನಾದದಿಂದ ಹಿಂದೋಡಲು ಮನಸ್ಸು ಕೇಳಲ್ಲ. ಅದಕ್ಕೆ ಗೆಜ್ಜೆಯಲ್ಲಿ ಹೊಸ ಹೊಸ ಸ್ಟೈಲ್‌ಗಳ ಬಗ್ಗೆ ಅವರು ಯೋಚಿಸ್ತಾರೆ. ಇಂಥ ಕ್ರಿಯೇಟಿವ್ ಥಿಂಕಿಂಗ್‌ನಲ್ಲಿ ಹೊಳೆದದ್ದೇ, ಗೆಜ್ಜೆಯ ಮೂಗುತಿ, ಗೆಜ್ಜೆಯ ಯಿಯರ್ ರಿಂಗ್, ಗೆಜ್ಜೆಯ ಕೈ ಬಳೆ, ಗೆಜ್ಜೆಯ ಸರ ..ಹೀಗೆ.
Related Articles
Advertisement
ಕಿವಿಯೋಲೆಗಳಲ್ಲಿ ಗೆಜ್ಜೆ ಬರೋದು ಅಪರೂಪ ಏನಲ್ಲ. ಸಿಲ್ವರ್ ಯಿಯರ್‌ರಿಂಗ್ ತಗೊಂಡರೆ ಅದರಲ್ಲಿ ತರಹೇವಾರಿ ವಿನ್ಯಾಸದ ಗೆಜ್ಜೆಗಳಿರುತ್ತವೆ. ಆದರೆ ಕಿವಿಯ ಮೇಲೆ ಯಿಯರ್‌ಕಫ್ನಲ್ಲಿ ಈಕೆ ಗೆಜ್ಜೆ ತೊಟ್ಟಿದ್ದಾಳೆ. ಇವು ಕಾಲ್ಗೆಜ್ಜೆಗಳಂತೆ ಘಲ್ ಘಲ್ ಅನ್ನಲಾರವು, ಆದರೆ ಪಕ್ಕದಲ್ಲೇ ಇರೋ ಕಿವಿಗೆ ಅವು ಒಂದಕ್ಕೊಂದು ತಾಗಿದಾಗ ಹೊಮ್ಮುವ ನಾದದ ಅನುಭೂತಿಯಾಗಬಹುದು.
ಇದಲ್ಲದೇ ಕೈ ಬೆರಳಿಗೆ ಉಂಗುರದ ಜೊತೆಗೆ ಗೆಜ್ಜೆ ಪೋಣಿಸಿದ್ದರೆ ಅದೊಂಥರ ಚೆಂದ, ಬ್ರೇಸ್‌ಲೈಟ್‌ಗಳಲ್ಲೂ ಗೆಜ್ಜೆಗಳನ್ನು ಜೋಡಿಸಬಹುದು. ಬ್ರೇಸ್‌ಲೈಟ್‌ಗಳಲ್ಲಿ ಹಳೆಯ ಐದುಪೈಸೆ ನಾಣ್ಯ ಬಳಸಿ ಮಾಡಿದ, ಅಲ್ಲಲ್ಲಿ ಗೆಜ್ಜೆ ಕಟ್ಟಿದ ವಿನ್ಯಾಸಕ್ಕೆ ಎಲ್ಲಿಲ್ಲದ ಜನಪ್ರಿಯತೆ ಇದೆ.