Advertisement

Fashion Gold ವಂಚನೆ ಪ್ರಕರಣ:19.60 ಕೋಟಿ ರೂ. ಸೊತ್ತು ಜಪ್ತಿ

10:46 PM Aug 07, 2024 | Team Udayavani |

ಕಾಸರಗೋಡು: ಫ್ಯಾಶನ್‌ ಗೋಲ್ಡ್‌ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಪ್ರಸ್ತುತ ಸಂಸ್ಥೆಗೆ ಸೇರಿದ 19.60 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಿದೆ.

Advertisement

ಫ್ಯಾಶನ್‌ ಗೋಲ್ಡ್‌ ಗ್ರೂಪ್‌ ಕಂಪೆನಿಯ ಚೇರ್ಮನ್‌, ಮಂಜೇಶ್ವರದ ಮಾಜಿ ಶಾಸಕ ಎಂ.ಸಿ. ಖಮರುದ್ದೀನ್‌, ಆಡಳಿತ ನಿರ್ದೇಶಕ ಟಿ.ಕೆ. ಪೂಕೋಯ ತಂಙಳ್‌ ಸಹಿತ ಪ್ರಕರಣದಲ್ಲಿ ಆರೋಪಿಗಳಾಗಿರುವವರ ವಿರುದ್ಧ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 168 ಪ್ರಕರಣಗಳು ದಾಖಲಾಗಿವೆ. ಅವುಗಳ ತನಿಖೆಯನ್ನು ಕ್ರೈಂ ಬ್ರಾಂಚ್‌ ಕೈಗೆತ್ತಿಕೊಂಡಿತ್ತು. ಅದರ ಆಧಾರದಲ್ಲಿ ಇ.ಡಿ. ತನಿಖೆ ಆರಂಭಿಸಿತ್ತು. ಮುಂದಿನ ಕ್ರಮದ ಅಂಗವಾಗಿ ಇ.ಡಿ. ಸೊತ್ತುಗಳ ಜಪ್ತಿಗೆ ಮುಂದಾಗಿದೆ.

ಉತ್ತಮ ಲಾಭಾಂಶ ನೀಡುವ ಭರವಸೆ ನೀಡಿ ಹಲವರಿಂದ ಷೇರು ಮೂಲಕ ಠೇವಣಿ ಸಂಗ್ರಹಿಸಿ ಬಳಿಕ ಅವರನ್ನು ವಂಚಿಸಿದ್ದಾಗಿ ಆರೋಪಿಸಿ ನೀಡಲಾದ ದೂರಿನಂತೆ ಕ್ರೈಂ ಬ್ರಾಂಚ್‌ ತನಿಖೆ ನಡೆಸಿತ್ತು. ಒಟ್ಟು 20 ಕೋಟಿ ರೂ. ವಂಚನೆ ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸಲಾಗುವುದು ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next