ಮುಂಬೈ: ಬಾಲಿವುಡ್ ಅಂಗಳದ ತಾರೆಯರನ್ನು ತೆರೆಮೇಲೆ ಹೊಳೆಯುವಂತೆ ಮಾಡುವ ಖ್ಯಾತ ಬಿ ಟೋನ್ ಫ್ಯಾಶನ್ ಡಿಸೈನರ್ ಸ್ವಪ್ನಿಲ್ ಶಿಂಧೆ ತಮ್ಮ ಲಿಂಗ ಪರಿವರ್ತನೆ ಮಾಡಿಕೊಳ್ಳುವ ಮೂಲಕ ಹೆಣ್ಣಾಗಿ ಬದಲಾಗಿದ್ದಾರೆ.
ಈ ಹಿಂದೆ ಸ್ವಪ್ನಿಲ್ ಶಿಂಧೆ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಇವರು ಬಾಲಿವುಡ್ ನ ಹಲವಾರು ಖ್ಯಾತ ನಟ ನಟಿಯರಿಗೆ ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ತಮ್ಮನ್ನು ತಾವು ಸಂಪೂರ್ಣವಾಗಿ ಹೆಣ್ಣಾಗಿ ಬದಲಾಯಿಸಿಕೊಳ್ಳುವುದರೊಂದಿಗೆ ಸಾಯಿಶಾ ಶಿಂಧೆ ಎಂಬ ಹೊಸ ಹೆಸರಿನ ಮೂಲಕ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ:ವಿಜಯಪುರ : ಕಪಾಲಿ ಹೊಟೇಲ್ ಬಳಿ ಅಪರಿಚಿತ ಯುವಕನ ಶವ ಪತ್ತೆ
ಈ ಕುರಿತು ತನ್ನ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಇವರು, ನಾನು ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ನನ್ನ ವರ್ತನೆಯನ್ನು ನೋಡಿ ನಾನು ಬೇರೆಯವರಿಗಿಂತ ಭಿನ್ನವಾಗಿದ್ದೇನೆ ಎಂದು ಎಲ್ಲರೂ ನನಗೆ ಗೇಲಿ ಮಾಡುತ್ತಿದ್ದರು. ಆಗ ನನ್ನೊಳಗೆ ನಾನು ತುಂಬಾ ಹಿಂಸೆ ಅನುಭವಿಸುತ್ತಿದ್ದೆ. ನಾನು ನಾನಾಗಿರಲಾಗದೆ ಉಸಿರುಗಟ್ಟಿಕೊಂಡು ಬದುಕುವ ರೀತಿ ಇದ್ದೆ. ಸಮಾಜದ ನೀತಿ ನಿಯಮಗಳಿಗಾಗಿ ನಾನು ಅಂತಹ ಪರಿಸ್ಥಿತಿಗಳನ್ನು ನಿಭಾಯಿಸಲೇಬೇಕಿತ್ತು ಎಂದು ಬರೆದುಕೊಂಡಿದ್ದಾರೆ.
ನಾನು ಫ್ಯಾಶನ್ ಡಿಸೈನಿಂಗ್ ಕಲಿಯುವ ನಿಟ್ಟಿನಲ್ಲಿ ನನ್ನ 20 ನೇ ವಯಸ್ಸಿನಲ್ಲಿರುವಾಗ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಫ್ಯಾಶನ್ ಆ್ಯಂಡ್ ಟೆಕ್ನಾಲಜಿ ಸೇರಿಕೊಂಡಿದ್ದೆ. ಆಗ ನನಗೆ ನಾನು ಪುರುಷರ ಕುರಿತಾಗಿ ಆಕರ್ಷಣೆ ಹೊಂದಿದ್ದೇನೆ, ನಾನು ಗೇ ಇರಬಹುದಾ ಎಂಬ ಆಲೋಚನೆ ಬಂದಿತು. ಆದರೆ ಕಳೆದ 6 ವರ್ಷಗಳ ಹಿಂದೆ ನಾನು ನನ್ನನ್ನು ಸಂಪೂರ್ಣವಾಗಿ ಒಪ್ಪಿಕೊಂಡೆ. ನಾನು ಗೇ ಅಲ್ಲ. ನಾನು ಲಿಂಗ ಪರಿವರ್ತಿತ ಮಹಿಳೆ ಎಂದು ಸಾಯಿಶಾ ಬರೆದುಕೊಂಡಿದ್ದಾರೆ.