Advertisement

ಪ್ರತಿಷ್ಠಿತ “ಫಾರ್ ಎವರ್ 21” ಫ್ಯಾಶನ್ ದಿಗ್ಗಜ ಕಂಪನಿ ದಿವಾಳಿ; 178 ಮಳಿಗೆ ಬಂದ್!

08:44 AM Oct 01, 2019 | Nagendra Trasi |

ವಾಷಿಂಗ್ಟನ್: ಇತ್ತೀಚೆಗಷ್ಟೇ ಪ್ರತಿಷ್ಠಿತ ಟ್ರಾವೆಲ್ ಬ್ರ್ಯಾಂಡ್ ಥಾಮಸ್ ಕುಕ್ ಕಂಪನಿ ದಿವಾಳಿಯಾದ ಸುದ್ದಿ ಹೊರಬಿದ್ದಿತ್ತು, ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಕಡಿಮೆ ಬೆಲೆಗೆ ಹೆಸರಾಗಿರುವ ಜನಪ್ರಿಯ ಫ್ಯಾಶನ್ ಬ್ರಾಂಡ್ ಆಗಿರುವ “ಫಾರ್ ಎವರ್ 21” ಕೋರ್ಟ್ ಗೆ ಚಾಪ್ಟರ್ 11ರ ಪ್ರಕಾರ ದಿವಾಳಿಯಿಂದ ರಕ್ಷಣೆ ಕೋರಿ(ಉದ್ಯಮ ಪುನಶ್ಚೇತನ) ಅರ್ಜಿ ಸಲ್ಲಿಸಿದೆ.

Advertisement

ಏನಿದು ಚಾಪ್ಟರ್ 11 ದಿವಾಳಿ ಅರ್ಜಿ:

ಅಮೆರಿಕದಲ್ಲಿ ಬ್ಯಾಂಕ್ ರಪ್ಸಿ(ದಿವಾಳಿ) ಕೋಡ್ ಇದೆ. ಕೋರ್ಟ್ ನ್ಯಾಯಸಮ್ಮತವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸುತ್ತದೆ. ಈ ಕಾನೂನು ಚಾಪ್ಟರ್ 7(ನ್ಯಾಯಾಲಯದಲ್ಲಿರುವ ದಿವಾಳಿ ಪ್ರಕರಣಗಳಿಗೆ ಸಂಬಂಧಿಸಿದ್ದು), ಚಾಪ್ಟರ್ 11( ಉದ್ಯಮ ಪುನಶ್ಚೇತನ), ಚಾಪ್ಟರ್ 15(ಅಂತಾರಾಷ್ಟ್ರೀಯ ದಿವಾಳಿತನಕ್ಕೆ ಸಂಬಂಧಿಸಿದ್ದು) ಕಾಯ್ದೆ ಚಾಲ್ತಿಯಲ್ಲಿದೆ.

 57 ದೇಶಗಳಲ್ಲಿ 800 ಮಳಿಗೆ:

ಲಾಸ್ ಏಂಜಲೀಸ್ ಮೂಲದ “ಫಾರ್ ಎವರ್ 21” ಫ್ಯಾಶನ್ ಕಂಪನಿ 178 ಮಳಿಗೆಗಳನ್ನು ಬಂದ್ ಮಾಡುವುದಾಗಿ ತಿಳಿಸಿದೆ. ಈ ಕಂಪನಿ 57 ದೇಶಗಳಲ್ಲಿ 800 ಮಳಿಗೆಗಳನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

Advertisement

ಅಮೆರಿಕದಲ್ಲಿರುವ ಫಾರ್ ಎವರ್ 21 ಮಳಿಗೆಗಳ ಮೌಲ್ಯವನ್ನು ಹೆಚ್ಚಿಸಲು ಹೆಚ್ಚು ನಿಗಾ ವಹಿಸಲಾಗುತ್ತಿದ್ದು, ಅಂತಾರಾಷ್ಟ್ರೀಯ ಪ್ರದೇಶಗಳಲ್ಲಿ ಇರುವ ಕೆಲವು ಮಳಿಗೆಗಳನ್ನು ಮುಚ್ಚಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ವಿವರಿಸಿದೆ.

ಅಂತಾರ್ಜಾಲ ತಾಣದ ಇ-ಮಾರುಕಟ್ಟೆಯಿಂದಾಗಿ ಮಾರಾಟದಲ್ಲಿ ತೀವ್ರ ಕುಸಿತ ಕಾಣುತ್ತಿರುವುದಾಗಿ ಹೇಳಿರುವ ಫಾರ್ ಎವರ್ 21 ದಿವಾಳಿಯಿಂದ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದೆ.  ಈಗಾಗಲೇ ಪೇ ಲೆಸ್ ಶೂಸೋರ್ಸ್ ಮತ್ತು ಚಾರ್ಲೊಟ್ಟ ರುಸ್ಸೆ ಕಂಪನಿ ದಿವಾಳಿಯಿಂದ ಮುಚ್ಚಿದೆ.

ಫಾರ್ ಎವರ್ 21 ಫ್ಯಾಶನ್ ಕಂಪನಿ ನೆಚ್ಚಿಕೊಂಡಿದ್ದ ಸಾಂಪ್ರದಾಯಿಕ ಚಿಲ್ಲರೆ ಮಾರಾಟಗಾರರು ಭಾರೀ ನಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಅಮೆರಿಕದಲ್ಲಿರುವ ಸುಮಾರು 8,558 ಚಿಲ್ಲರೆ ಮಾರಾಟಗಾರರು ತಮ್ಮ ಅಂಗಡಿಗಳನ್ನು ಬಂದ್ ಮಾಡುವುದಾಗಿ ಘೋಷಿಸಿದ್ದಾರೆ.

ಜಾಗತಿಕ ಕೋರ್ ಸೈಟ್ ಸಂಶೋಧನಾ ಸಂಸ್ಥೆಯ ಅಂದಾಜಿನ ಪ್ರಕಾರ, 2019ರ ಅಂತ್ಯದೊಳಗೆ ಅಮೆರಿಕದಲ್ಲಿ ಸುಮಾರು 12 ಸಾವಿರ ಮಳಿಗೆಗಳು ಮುಚ್ಚಲಿವೆ ಎಂದು ಹೇಳಿದೆ.

ಫಾರ್ ಎವರ್ 21 1984ರಲ್ಲಿ ಅಮೆರಿಕದ ಫಾಸ್ಟ್ ಫ್ಯಾಶನ್ ಸಂಸ್ಥೆ ಸ್ಥಾಪನೆಯಾಗಿತ್ತು. ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ ಮತ್ತು ಅಮೆರಿಕದಲ್ಲಿ ಕೇಂದ್ರ ಕಚೇರಿಗಳನ್ನು ಹೊಂದಿತ್ತು. ಡೂ ವನ್ ಚಾಂಗ್, ಜಿನ್ ಸೂಕ್ ಚಾಂಗ್ ಈ ಕಂಪನಿಯನ್ನು ಸ್ಥಾಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next