ಧಾರವಾಡ: ಸಂವಿಧಾನದ ಆಶಯಗಳಾದ ಆರ್ಥಿಕ, ಸಾಮಾಜಿಕ ಸಮಾನತೆ ಮೇಲೆ ಫ್ಯಾಸಿಸಂನ ನಿರಂತರ ದಾಳಿ ನಡೆದಿದ್ದು, ಇದರ ವಿರುದ್ಧ ಧ್ವನಿ ಎತ್ತುವುದು ಅವಶ್ಯ ಎಂದು ಸಾಹಿತಿ ಶಿವಸುಂದರ ಹೇಳಿದರು. ನಗರದಲ್ಲಿ ನಡೆದಿರುವ ಮೇ ಸಾಹಿತ್ಯ ಮೇಳದಲ್ಲಿ ಫ್ಯಾಸಿಸಂ- ಚಹರೆಗಳು ಮತ್ತು ಪ್ರತಿರೋಧ ವಿಷಯ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಫ್ಯಾಸಿಸಂನಿಂದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತಿದೆ. ಪ್ರಸ್ತುತ ದೇಶದಲ್ಲಿ ಪ್ರಜಾಸತ್ತೆಗೆ ವಿರುದ್ಧವಾದ ವಿದ್ಯಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಫ್ಯಾಸಿಸಂ ಎಂದರೆ ಕ್ರೌರ್ಯ ಮಾತ್ರವಲ್ಲ, ಅದಕ್ಕೂ ಮಿಗಿಲಾಗಿರುವುದು. ಹಿಟ್ಲರ್ 60 ಲಕ್ಷ ಯಹೂದಿಗಳನ್ನು ಕೊಲ್ಲಿಸಿದರೆ, ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ 10 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ನಮ್ಮ ದೇಶದಲ್ಲಿ ಬ್ರಾಹ್ಮಣ್ಯವೇ ಫ್ಯಾಸಿಸಂ ಆಗಿದೆ. ನಮ್ಮಲ್ಲಿನ ಒಳ್ಳೆಯತನವನ್ನಾಧರಿಸಿ ರಾಜಕಾರಣ ಮಾಡಿದರೆ ಸಮಾಜವಾದದ ಕಡೆಗೆ ಸಾಗಿದರೆ, ನಮ್ಮಲ್ಲಿನ ಕೆಟ್ಟತನವನ್ನಾಧರಿಸಿ ರಾಜಕಾರಣ ಮಾಡಿದರೆ ಫ್ಯಾಸಿಸಂ ಕಡೆಗೆ ಸಾಗುತ್ತೇವೆ ಎಂದು ಅಭಿಪ್ರಾಯಪಟ್ಟರು. 1991ರ ನಂತರ ನಮ್ಮ ರಾಜಕೀಯ ಪಕ್ಷಗಳು ಕಾಪೋìರೇಟ್ ಕಂಪನಿಯ ಸಿಇಒಗಳಾಗಿ ಕಾರ್ಯ ನಿರ್ವಹಿಸುತ್ತಿವೆ.
2009ರಲ್ಲಿ 9 ಕೋಟಿ ಜನರು ಬಿಜೆಪಿಗೆ ಮತ ನೀಡಿದರೆ, 2014ರ ಚುನಾವಣೆಯಲ್ಲಿ 17 ಕೋಟಿ ಜನರು ಬಿಜೆಪಿಗೆ ಮತ ಹಾಕಿದ್ದಾರೆ. ಯುವಕರಿಗೆ ಫ್ಯಾಸಿಸಂ ಪರಿಣಾಮ ಕುರಿತು ತಿಳಿಸುವ ಅಗತ್ಯತೆಯಿದೆ ಎಂದರು. ಭಾಷಾ ತಜ್ಞ ಡಾ|ಜಿ.ಎನ್.ದೇವಿ ಮಾತನಾಡಿ, ಫ್ಯಾಸಿಸಂ ವಿರುದ್ಧದ ಹೋರಾಟಕ್ಕೆ ಕನ್ನಡ ಭಾಷೆಯನ್ನು ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಕೇಂದ್ರ ಸರ್ಕಾರ ಹಿಂದಿ ಹೇರುತ್ತಿರುವುದು ಸರಿಯಲ್ಲ.
ಕನ್ನಡದಲ್ಲಿ ಫ್ಯಾಸಿಸಂ ವಿರುದ್ಧ ಸಾಹಿತ್ಯ ಹೆಚ್ಚೆಚ್ಚು ರಚನೆ ಮಾಡಬೇಕು. ವೈವಿಧ್ಯತೆ ಫ್ಯಾಸಿಸಂ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು. ಪ್ರಸ್ತುತ ಯಾವುದೇ ಸಿದ್ಧಾಂತಗಳಿಲ್ಲದೇ ಜಗತ್ತು ನಿರ್ವಾತದತ್ತ ಸಾಗುತ್ತಿದೆ. ಹಿಟ್ಲರ್ ಫ್ಯಾಸಿಸಂಗೂ ಹಾಗೂ ಭಾರತದ ಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಭಾರತದಲ್ಲಿ ಧರ್ಮಯುದ್ಧಗಳು ನಡೆದಿಲ್ಲ. ಧಾರ್ಮಿಕ ಭಿನ್ನಾಭಿಪ್ರಾಯಗಳಿವೆ.
ಅಂತರ ಧರ್ಮೀಯ ಯುದ್ಧಗಳು ನಡೆದಿವೆ. ಆದಿವಾಸಿ, ಕರಾವಳಿ, ಗುಡ್ಡಗಾಡು ಜನರನ್ನು ಸಂಘಟಿಸಿ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಫ್ಯಾಸಿಸಂ ಪರಿಣಾಮ್ನ ತಿಳಿಸಿಕೊಡುವುದು ಅಗತ್ಯ. ಮೋದಿ ಎಂಬುದು ಕೇವಲ ಮುಖವಾಡ ಮಾತ್ರ, ಆರ್‌ಎಸ್‌ಎಸ್ ಕುಣಿಸಿದಂತೆ ಕುಣಿಯುವ ಕೈಗೊಂಬೆ ಮಾತ್ರ ಎಂದರು. ಡಾ|ಆನಂದ ತೇಲು ಮಾತನಾಡಿ, ಫ್ಯಾಸಿಸಂ ಹಿಟ್ಲರ್ ಹಾಗೂ ಮುಸೋಲಿನಿಗಿಂತ ಅಪಾಯಕಾರಿ.
ಮೋದಿ ಗುಜರಾತ್‌ಸಿಎಂ ಆಗಿದ್ದಾಗ ಏನೇನು ಮಾಡಿದ್ದಾರೆಂಬುದನ್ನು ತಿಳಿಯಬೇಕು. ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಕೋಮುವಾದಿಗಳು ಮುಂದಾಗಿದ್ದು, ಇದಕ್ಕೆ ಅವಕಾಶ ನೀಡಬಾರದು. ಧರ್ಮ, ಜಾತಿ ಆಧಾರಿತ ಸಮಾಜ ನಿರ್ಮಾಣ ವಿರುದ್ಧ ಧ್ವನಿ ಎತ್ತಬೇಕೆಂದರು. ಯುವ ಸಮುದಾಯದವರಿಗೆ ಭಾರತದ ಭವಿಷ್ಯ ಕುರಿತು ತಿಳಿವಳಿಕೆ ನೀಡಬೇಕು ಎಂದರು. ಡಾ|ರಾಜೇಂದ್ರ ಪೊದ್ದಾರ ಗೋಷ್ಠಿ ಸಂಯೋಜನೆ ಮಾಡಿದರು.