ಲಕ್ನೋ: ಉತ್ತರ ಪ್ರದೇಶದ ನೋಯ್ಡಾದಲ್ಲಿ ನಕಲಿ ನೋಟು ದಂಧೆಯಲ್ಲಿ ತೊಡಗಿದ್ದ 5 ಜನರನ್ನು ಪೋಲಿಸರು ಬಂಧಿಸಿದ್ದು, ಅವರಿಂದ ಸುಮಾರು 6.50 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ನಕಲಿ ನೋಟುಗಳ ದಂಧೆಯನ್ನು ಪೋಲಿಸರು ಪತ್ತೆಹಚ್ಚಿದ್ದಾರೆ.
ವಿಶೇಷವೇನೆಂದರೆ, ಈ ಖದೀಮರಿಗೆ ನಕಲಿ ನೋಟುಗಳ ದಂಧೆಯಲ್ಲಿ ತೊಡಗಿಸಿಕೊಳ್ಳಲು ಇತ್ತೀಚೆಗೆ ಬಿಡುಗಡೆಯಾದ ಶಾಹಿದ್ ಕಪೂರ್, ವಿಜಯ್ ಸೇತುಪತಿ ಅಭಿನಯದ ಹಿಂದಿ ವೆಬ್ ಸೀರಿಸ್ ʻಫರ್ಝಿʼ ಕಥೆಯೂ ಪ್ರೇರಣೆಯಾಗಿತ್ತು ಎಂದು ಪೋಲಿಸರು ತಿಳಿಸಿದ್ದಾರೆ. ಅಲ್ಲದೇ ಇವರು ತಮ್ಮ ನೆಟ್‌ವರ್ಕ್ ವಿಸ್ತರಿಸಿಕೊಳ್ಳುವುದಕ್ಕಾಗಿ ಇನ್ಸ್ಟಾಗ್ರಾಮ್ ಆಪ್‌ನ್ನು ಬಳಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಈ ಮೂಲಕ ಅವರು ರಾಷ್ಟ್ರ ರಾಜಧಾನಿ ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶದೆಲ್ಲೆಡೆ ತಮ್ಮ ಪ್ರಭುತ್ವ ಸಾಧಿಸಿಕೊಂಡಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.
ʻಆರೋಪಿಗಳಿಂದ 2000, 500, 200 ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸೆಕ್ಟರ್ 24 ಠಾಣೆಯ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದಾರೆʼ ಎಂದು ನೋಯ್ಡಾದ ಅಡಿಶನಲ್ DCP ಶಕ್ತಿ ಆವಸ್ತಿ ಅವರು ತಿಳಿಸಿದ್ದಾರೆ.
ಆರೋಪಿಗಳಿಗೆ ಹಿಂದಿ ವೆಬ್ ಸೀರಿಸ್ ʻಫರ್ಝಿʼ ಪ್ರೇರಣೆಯಾಗಿದ್ದು, 100 ರೂ. ಅಸಲಿ ನೋಟಿಗೆ 200 ರೂ. ನಕಲಿ ನೋಟು ನೀಡಿ ವ್ಯವಹಾರ ನಡೆಸುತ್ತಿದ್ದರು. ಸಪ್ಲೈ ಚೈನ್ ರೀತಿಯಲ್ಲಿ ಇವರು ವ್ಯವಹಾರ ಕುದುರಿಸುತ್ತಿದ್ದರು.
ಪೋಲಿಸರು ಟ್ರಾಕಿಂಗ್ ಮಾಡದಂತೆ ವರ್ಚುವಲ್ ಮೊಬೈಲ್ ಸಂಖ್ಯೆಯ ಮೂಲಕ ವಾಟ್ಸ್‌ಆಪ್‌ನಲ್ಲಿ ಸಂಪರ್ಕ ಸಾಧಿಸುತ್ತಿದ್ದರು. ಅಲ್ಲದೇ ಇನ್ಸ್ಟಾಗ್ರಾಮ್‌ನಲ್ಲಿ ನಕಲಿ ಕರೆನ್ಸಿ ಬಗ್ಗೆ ರೀಲ್ಸ್ ಮಾಡಿಯೂ ವ್ಯವಹಾರ ಕುದುರಿಸುತ್ತಿದ್ದರು. ಯೂಟ್ಯೂಬ್ ವೀಡಿಯೋ, ಶಾರ್ಟ್ಸ್ ಗಳ ಮೂಲಕವೂ ಸಂಪರ್ಕ ಸಾಧಿಸುತ್ತಿದ್ದರು. ಇವರ ವೀಡಿಯೋಗಳನ್ನು ನೋಡಿ ಜನ ಕಾಮೆಂಟ್ ಮಾಡಿ ಸಂಪರ್ಕಕ್ಕೆ ಬರುತ್ತಿದ್ದರು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.