Advertisement
ಬೇಸಗೆ ಬಿಸಿ ಬಂತೆಂದರೆ ನೀರಿನ ಮೂಲಗಳು ಬತ್ತಲು ಆರಂಭ ಎಂದರ್ಥ. ಇದರ ಪರಿಣಾಮ ಮನುಷ್ಯನ ಮೇಲೆ ಆಗುವ ರೀತಿಯಲ್ಲಿ ಕೃಷಿ ಚಟುವಟಿಕೆಯ ಮೇಲೂ ಉಂಟಾಗುತ್ತದೆ. ಇದಕ್ಕೆ ಪರಿಹಾರ ಎಂಬಂತೆ ಹರಿವು ಕ್ಷೀಣಿಸುವ ನೀರನ್ನು ಪೂರ್ತಿ ಬತ್ತುವ ಮೊದಲೇ ಒಂದೆಡೆ ಸಂಗ್ರಹಿಸಿಟ್ಟು ಅಂತರ್ಜಲ ಹಾಗೂ ಕೃಷಿ ಭೂಮಿ ಹಸಿರನ್ನಾಗಿಸುವ ಪ್ರಯತ್ನವೇ ಬಗೆ-ಬಗೆಯ ನೀರಿನ ಕಟ್ಟಗಳು.
ನಗರಕ್ಕೆ, ಗ್ರಾಮಾಂತರ ಪ್ರದೇಶಕ್ಕೆ ಕುಡಿಯುವ ನೀರು, ಕೃಷಿ, ಕೈಗಾರಿಕೆ ಸೇರಿದಂತೆ ವಾಣಿಜ್ಯ ಬಳಕೆಗೆ ಪೂರಕವಾಗಿ ದೊಡ್ಡ ನದಿಗಳಿಗೆ ಬೃಹತ್ ಅಣೆಕಟ್ಟು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತದೆ. ಅವು ವರ್ಷವಿಡೀ ಹಾಗೆಯೇ ಇರುತ್ತವೆ. ಮಳೆಗಾಲದಲ್ಲಿಯೂ ನೀರು ಹರಿದು ಹೋಗಲು, ಬೇಸಗೆಯಲ್ಲಿ ನೀರು ಹಿಡಿದಿಟ್ಟುಕೊಳ್ಳಲು ಪೂರಕವಾಗಿರುವಂತೆ ಈ ಕಟ್ಟ ನಿರ್ಮಿಸಲಾಗಿರುತ್ತದೆ. ಸಣ್ಣ ನದಿಗಳಲ್ಲಿ ಇದೇ ತರಹದ ಅಣೆಕಟ್ಟುಗಳಿವೆ. ಇದಕ್ಕೆ ಸರಕಾರ ಅನುದಾನ ಬಳಸಿ ಕಾಲ-ಕಾಲಕ್ಕೆ ಅಣೆಕಟ್ಟು ನಿರ್ಮಿಸುತ್ತಿದೆ.
Related Articles
ಸರಕಾರದ ಅನುದಾನಕ್ಕೆ ಕಾಯದೇ ಪರಿಸರದಲ್ಲಿ ಸಿಗುವ ಪರಿಕರ ಬಳಸಿ ಕಡಿಮೆ ವೆಚ್ಚದಲ್ಲಿ ತಡೆ ಒಡ್ಡು ನಿರ್ಮಿಸುವ ಕೃಷಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ತೋಟದ ನಡುವಿನ ಉಜಿರುಕಣಿಯಲ್ಲಿ ನವಂಬರ್, ಡಿಸೆಂಬರ್ ತನಕ ನೀರಿನ ಹರಿವಿದೆ ಎಂದಾದರೆ ಅದಕ್ಕೆ ಮರಳು ಚೀಲ, ಹಲಗೆ ಜೋಡಿಸಿ ಮಣ್ಣಿನ ತಡೆ ಹೀಗೆ ತೆರನಾಗಿ ಪರಿಸರ ಸ್ನೇಹಿ ಕಟ್ಟ ನಿರ್ಮಿಸಿದರೆ 20ರಿಂದ 30 ದಿವಸ ತನಕ (ಅದಕ್ಕಿಂತ ಹೆಚ್ಚು ಇರಬಹುದು)ನೀರು ಸಂಗ್ರಹವಾಗುತ್ತದೆ. ಇದು ಆ ಕೃಷಿ ಭೂಮಿಯ ಸೀಮಿತ ಪ್ರದೇಶಕ್ಕೆ ಬಿಸಿಲಿನ ಬಿಸಿಯಿಂದ ರಕ್ಷಣೆ ಕೊಡುತ್ತದೆ. ಜತೆಗೆ ಬೆಳೆಗೆ ನೀರನ್ನೂ ಒದಗಿಸುತ್ತದೆ.
Advertisement
ಇಂತಹ ಕಡಿಮೆ ವೆಚ್ಚದ ತಡೆ ಒಡ್ಡುಗಳನ್ನು ಅವಕಾಶ ಇರುವೆಡೆ ಹೆಚ್ಚೆಚ್ಚು ನಿರ್ಮಿಸಬಹುದಾಗಿದೆ. ಈ ರೀತಿಯು ಜಲಸಂರಕ್ಷಣೆ ಪ್ರಯೋಗ ಈಗ ಹೆಚ್ಚಾಗುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆಯು ಆಗಿದೆ. ಸಂಘ ಸಂಸ್ಥೆಗಳು, ಎನ್ನೆಸ್ಸೆಸ್ ಮೊದಲಾದ ಸಾಮಾಜಿಕ ಸಂಘಟನೆಗಳು ಕೂಡ ಜಲಸಂರಕ್ಷಣೆಯ ನಿಟ್ಟಿನಲ್ಲಿ ಇಂತಹ ತಡೆ ಒಡ್ಡುಗಳ ರಚನೆಗೆ ಮುಂದಾಗುತ್ತಿವೆ. ವರ್ಷದಿಂದ ವರ್ಷಕ್ಕೆ ತಡೆ ಒಡ್ಡುಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಇದಕ್ಕೂಂದು ದೃಷ್ಟಾಂತ.ಬಹುಮುಖ್ಯವಾಗಿ ಕೃಷಿ ಉದ್ದೇಶದಿಂದ ಕಿಂಡಿ ಅಣೆಕಟ್ಟಿನ ಪರಿಕಲ್ಪನೆ ಅಗತ್ಯತೆ ಇರುವುದು ಗ್ರಾಮಾಂತರ ಪ್ರದೇಶದಲ್ಲಿ. ಸಣ್ಣ ನೀರಾವರಿ ಇಲಾಖೆಯು ಹೊಳೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆದ್ಯತೆ ನೀಡಿದರೆ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ವತಿಯಿಂದ ತೋಡುಗಳಿಗೆ 5 ಲಕ್ಷ ರೂ. ಒಳಗಿನ ವೆಚ್ಚದ ಕಟ್ಟ ನಿರ್ಮಾಣಕ್ಕೆ ಸಹಾಯಧನ ನೀಡುತ್ತದೆ. ಆದರೆ ಸಹಾಯಧನ ಇಲ್ಲದೆಯೋ ಇಂತಹ ಕಟ್ಟ ನಿರ್ಮಿಸಿದವರು ಹಲವರಿದ್ದಾರೆ. ಗಣನೀಯ ಕೊಡುಗೆ
ಅಣೆಕಟ್ಟು, ಕಿಂಡಿ ಅಣೆಕಟ್ಟು, ಸಣ್ಣ ಒಡ್ಡುಗಳು ಅಂತರ್ಜಲದ ಸಂರಕ್ಷಣೆಗೆ ಗಣನೀಯ ಕೊಡುಗೆ ನೀಡುತ್ತಿವೆ. ಇಂತಹ ಅಂತರ್ಜಲ ಸಂರಕ್ಷಣೆ ಇರುವೆಡೆ ಬಾವಿ, ಕೆರೆಮೂಲಗಳಲ್ಲಿ ಜಲ ಮಟ್ಟ ಏರಿಕೆ ಆಗುತ್ತಿರುವುದು ಕಿಂಡಿ ಕಟ್ಟಗಳಿಂದ ಆಗುತ್ತಿರುವ ಪ್ರಯೋಜನಕ್ಕೆ ಪ್ರತ್ಯಕ್ಷ ಸಾಕ್ಷಿ. ಜತೆಗೆ ಭೂಮಿಯೊಳಗೆ ಕುಸಿಯುತ್ತಿರುವ ಅಂತರ್ಜಲ ಹೆಚ್ಚಳಕ್ಕೂ ಇದರ ಕೊಡುಗೆ ಅಪಾರ. - ಕಿರಣ್ ಪ್ರಸಾದ್ ಕುಂಡಡ್ಕ