Advertisement

ರೈತಗುಣ ಮತ್ತು ಆನ್‌ಲೈನ್‌ ಶಿಕ್ಷಣ 

10:59 PM Sep 08, 2021 | Team Udayavani |

ಹದಿನಾರು ತಿಂಗಳ ಅನಂತರ ಆ ಶಾಲೆಯ ಬಾಗಿಲು ತೆರೆದಿದೆ. ಆವರೆಗೆ ಆನ್‌ಲೈನ್‌ನಲ್ಲೇ ಇದ್ದ ಶಿಕ್ಷಕರಿಗೆ ತರಗತಿಯಲ್ಲಿ ಮಕ್ಕಳನ್ನು ಕಂಡು ಖುಷಿಯೇ ಖುಷಿ. ವಿದ್ಯಾರ್ಥಿಗಳಿಗೂ ಅದೇ ಸಂಭ್ರಮ, ಸಂತೋಷ, ಉಲ್ಲಾಸವಿರಬಹುದೆಂದು ನಂಬಿದ್ದೇ ತಪ್ಪಾಯಿತು. ಬೇಂದ್ರೆಯವರ ಪದ್ಯ ಆರಂಭಿಸಿ ಇಪ್ಪತ್ತು ನಿಮಿಷ ಆಗಿರಲಿಲ್ಲ. ಕಡೇ ಬೆಂಚಿನ ಹುಡುಗ ಎದ್ದು “ಸ್ವಲ್ಪ ನಿಲ್ಲಿಸ್ತೀರಾ ಮೇಡಂ ಬೋರಾಗುತ್ತದೆ ಎನ್ನಬೇಕೆ? “ಹೌದು ಮೇಡಂ ಹತ್ತು ನಿಮಿಷ ರೆಸ್ಟ್‌ ಕೊಡಿ- ಉಳಿದ ಮಕ್ಕಳ ಒಕ್ಕೊರಲಿನ ಕೂಗು!

Advertisement

ಕಳೆದ ವಾರ ರಾಜ್ಯದೆಲ್ಲೆಡೆ ಶಾಲೆ ಆರಂಭವಾದ ಮೇಲೆ ಭಾಗಶಃ ಶಿಕ್ಷಕವರ್ಗ ಅನುಭವಿಸಿದ ಸವಾಲಿದು. ಗಂಭೀರವಾಗಿ ಕೂತು ಆಲಿಸುವುದು, ಮನನ ಮಾಡುವುದು ಬಿಡಿ, ಅರ್ಧಗಂಟೆ ನೆಟ್ಟಗೆ ತರಗತಿಯಲ್ಲಿ ಕೂರಲಾಗದ, ಪಾಠ ಕೇಳಲಾಗದ ಚಡಪಡಿಕೆ, ನಿರ್ಲಕ್ಷ್ಯ, ಜಡತ್ವ ನೇರವಾಗಿ ಗೋಚರವಾಗುವಷ್ಟರ ಮಟ್ಟಿಗೆ ಕೊರೊನೋತ್ತರ ತರಗತಿಗಳು ಯಾಂತ್ರಿಕವಾಗುತ್ತಿವೆ. ಇನ್ನೇನು ಶಾಲೆ ಆರಂಭವಾಯಿತು, ಮಕ್ಕಳು ಶಾಲೆಗೆ ಹೋಗುತ್ತಾರೆ, ಆಫ್ಲೈನ್‌ ಕ್ಲಾಸ್‌ನಿಂದಾಗಿ ಮೊಬೈಲ್‌ ಅವಲಂಬನೆ ತಪ್ಪುತ್ತದೆ, ಮತ್ತೆ ಅದೇ ಹಳೆಯ ಶೈಕ್ಷಣಿಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ನಿರೀಕ್ಷಿಸಿದ್ದ ಹೆತ್ತವರು ಪೂರ್ಣ ತೃಪ್ತರಾಗ ದಂಥ ಪರಿಸ್ಥಿತಿ ಎಲ್ಲೆಡೆ ಇದೆ. ಶಿಕ್ಷಕರಿಗೂ ಅಷ್ಟೇ. ಶಾಲೆಯೊಳಗಡೆ ಮತ್ತೆ ಹಳೆಯ ಶೈಕ್ಷಣಿಕ ವಾತಾ ವರಣವನ್ನು ಮರುಸ್ಥಾಪಿಸುವುದು ಸುಲಭವಲ್ಲ ಎಂಬುದು ಅರಿವಾಗತೊಡಗಿದೆ.

ಕಲಿಕೆ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತೀಯ ಸಾಂಪ್ರದಾಯಿಕ ವ್ಯಾಖ್ಯೆಯೊಳಗಡೆ ಆಗಾಗ ಉಲ್ಲೇಖಗೊಳ್ಳುವ ಒಂದು ಶಬ್ದ ಗುರುಮುಖೇನ ಎಂಬುದು. ನಾಟ್ಯ, ಸಂಗೀತದಂಥ ಶಿಷ್ಟಕಲೆಗಳ ಕಲಿಕಾ ಸಂದರ್ಭದಲ್ಲಿ ಗುರುಮುಖೇನ, ಗುರು ಸಾನಿಧ್ಯ-ಸಾಮೀಪ್ಯಕ್ಕೆ ವಿಶೇಷ ಬದ್ಧತೆಯಿದೆ. “ಮುಖೇನ’ ಎಂದರೆ ಬರೀ ಮುಖ ಅಲ್ಲ. ಶಿಷ್ಯನೆದುರು ಗುರು ಇರಬೇಕು. ಅದು ಉಪ ಸ್ಥಿತಿಯ ಸಾಮೀಪ್ಯ. ಉಪ ಎಂದರೆ ಹತ್ತಿರ. ನ್ಯಾಸ ಎಂದರೆ ಇಡುವುದು. ಅದು ಏನೇ ಇರಲಿ ಕಲಿಕೆ, ಗುರು ಮತ್ತು ಶಿಷ್ಯನ ಉಪಸ್ಥಿತಿ, ಸಾಮೀಪ್ಯದಲ್ಲೇ ನಡೆಯಬೇಕು.

ಪ್ರಪ್ರಥಮ ಬಾರಿ “ಆನ್‌ಲೈನ್‌’ ಈ ಸಂಬಂಧವನ್ನೇ ತಪ್ಪಿಸಿತು. ಗುರು ಎಲ್ಲೋ, ಶಿಷ್ಯ ಇನ್ನೆಲ್ಲೋ ಆಗಿ ಅಜ್ಞಾತ-ಅನಾಮಿಕ ಹಾದಿ ಯಲ್ಲಿ ಬರೀ ಯಂತ್ರದ ದಾರಿಯಲ್ಲಿ ಇಬ್ಬರು ಮುಖಾಮುಖೀಯಾಗಬೇಕಾಯಿತು. ವಿಜ್ಞಾನದ

ಈ ಹೊಸ ಸಾಧ್ಯತೆಯ ಬಗ್ಗೆ ಬೆರಗು ಇದ್ದೇ ಇದೆ. ಕಷ್ಟಕಾಲದಲ್ಲಿ ಒದಗಿಬಂದ ಪರ್ಯಾಯದ ಬಗ್ಗೆ ಕೃತಜ್ಞತೆಯೂ ಇದೆ. ಆದರೆ ಇರುವುದೇ ಅದೊಂದೇ ದಾರಿ. ಬೇರೆ ಯಾವುದೂ ಇಲ್ಲ ಎಂದಾದಾಗ ಮಕ್ಕಳ ಸಹವಾಸ ಸಂಬಂಧದ ಲ್ಲಾಗುವ ನಷ್ಟ  ಸೃಷ್ಟಿಸಬಲ್ಲ ಆತಂಕ ಮತ್ತು ಕರಾಳ ಭವಿಷ್ಯದ ಬಗ್ಗೆ ಯೋಚಿಸಬೇಕು.

Advertisement

ಕಳೆದ ಒಂದೂವರೆ ವರ್ಷದಲ್ಲಿ ಮಕ್ಕಳು ಮನೆಯಲ್ಲಿ ಕೂತು ಆನ್‌ಲೈನ್‌ ಕ್ಲಾಸ್‌ ಮಾತ್ರ ಕೇಳಲಿಲ್ಲ. ಅದೇ ಹೊತ್ತಿಗೆ ಯಂತ್ರಸುಖವನ್ನು ಅನುಭವಿಸಿದರು. ತಂದೆ-ತಾಯಿಯ ಸಮ್ಮತಿ ಯಲ್ಲೇ ಅವರ ಕೈಗೆ ಮೊಬೈಲ್‌ ಬಂತು. ಅದರಲ್ಲೇ ಕ್ಲಾಸ್‌, ಪಾಠ, ಶಿಕ್ಷಣ; ಅದೇ ಶಾಲೆ ಎಂಬ ಭ್ರಮೆ ಅಥವಾ ನಂಬಿಕೆಯಲ್ಲಿ ಮಕ್ಕಳು ನಿಧಾನವಾಗಿ ವಿಷವಾದುದು ಹೆಚ್ಚಿನವರ ಗಮನಕ್ಕೆ ಬರಲೇ ಇಲ್ಲ. ಗೊತ್ತಾದರೂ ನೈತಿಕತೆ ಪರಿಧಿಗೆ ಸರಿದು ಕಲಿಕೆ-ಶಿಕ್ಷಣ ಕೇಂದ್ರಕ್ಕೆ ಬಂದಿತ್ತು. ಮೊಬೈಲ್‌, ಟ್ಯಾಬ್‌ ಇಲ್ಲದೆ ಏನೂ ಇಲ್ಲ, ಈಗ ಉಳಿದಿರುವುದು ಅದೊಂದೇ ದಾರಿ ಎಂದಾದಾಗ ತಡೆಯುವ ಶಕ್ತಿ ಯಾವ ತಂದೆ ತಾಯಿಯಲ್ಲೂ ಉಳಿಯಲಿಲ್ಲ.

ಗುರು, ವಿದ್ಯಾರ್ಥಿ, ಹೆತ್ತವರು ನಿರ್ಧರಿತ ಶಿಕ್ಷಣ ಇಂದು ಇಲ್ಲವಾಗಿ ಯಂತ್ರ ಕೇಂದ್ರಿತ ಶಿಕ್ಷಣ ಮೇಳೈಸುವಂತಾಗಿದೆ. ಗುರುವೇ ನಿರ್ಧರಿಸುವ, ಗುರುವೇ ಶಕ್ತಿಕೇಂದ್ರವಾಗುವ ಗುರುಕುಲ ಶಿಕ್ಷಣದಲ್ಲಿ ಪ್ರಕೃತಿಗೂ ತುಂಬಾ ಆದ್ಯತೆ ಇತ್ತು. ಗಿಡ, ಮರ, ಬಳ್ಳಿ, ಹೂವು, ಕಾಯಿ, ಪಕ್ಷಿ, ಕಾಡಾಡಿ-ಬಾನಾಡಿಗಳು ಅರಿವಿನ ಅಕ್ಷರಗಳಾಗಿ ಆಶ್ರಮದೊಳಗಡೆಯ ಶಿಕ್ಷಣದಲ್ಲಿ ಲಭ್ಯವಾಗು ತ್ತಿತ್ತು. ಯಾವಾಗ ಪುಸ್ತಕ, ಲೇಖನ ಸಾಮಗ್ರಿ, ಕಟ್ಟಡ, ಕ್ಯಾಂಪಸ್‌, ಹಳದಿ ಬಸ್‌, ಬಯೋಮೆಟ್ರಿಕ್ಸ್‌, ಯೂನಿಫಾರಂ- ಇವೆಲ್ಲ ಮುಖ್ಯವಾದವೋ ಗುರು ಕೂಡಾ ಬದಿಗೆ ಸರಿಯಲಾರಂಭಿಸಿದ.

ಹೆತ್ತವರು ಕೇಂದ್ರಿತ ಶಿಕ್ಷಣದಲ್ಲಿ ಮಕ್ಕಳ ಕಲಿಕೆಯ ದಾರಿಯನ್ನು; ಮಗುವೊಂದು ಯಾವ ಶಾಲೆಗೆ ಹೋಗಬೇಕು? ಯಾವ ಪದವಿ ಪಡೆಯಬೇಕೆಂಬುದನ್ನು ನಿರ್ಧರಿಸುವ ಹಕ್ಕುಗಳನ್ನು ಹೆತ್ತವರೇ ನಿರ್ಧರಿಸುವಂತಾಯಿತು. ಗುರುವಿನ ಮಾರ್ಗದರ್ಶನ, ಮಗುವಿನ ಆಸೆ, ಅಭಿರುಚಿಗಳನ್ನು ಗಮನಿಸುವವರ ಸಂಖ್ಯೆ ಕ್ಷೀಣಿಸಿತು. ಶಾಲೆಯೊಳಗಡೆಯ ಮನುಷ್ಯ ಸಂವೇದನೆಗಳಿ ಗಿಂತ ಆ ಶಾಲೆಯ ಕಟ್ಟಡ, ಕ್ಯಾಂಪಸ್‌, ಸ್ಮಾರ್ಟ್‌ ಬೋರ್ಡ್‌ನಂಥ ಭೌತಿಕ ವಿಷಯಗಳು ಹೆತ್ತವರಿಗೆ ಶಿಕ್ಷಣದ ಮೌಲ್ಯ ತೂಗುವ ಅಳತೆಗೋಲು ಗಳಾದುವು. ಪರಿಣಾಮ ಗುರು ಮತ್ತು ಶಿಷ್ಯ ಏಕ ಕಾಲದಲ್ಲಿ ಬದಿಗೆ ಸರಿದರು. ಇದನ್ನೇ ಬಂಡವಾಳ ಮಾಡಿಕೊಂಡ ಮಾಲಕರು ಕಟ್ಟುವ ಶಾಲೆಗಳು ಹೀಗೆಯೇ ಇರಬೇಕೆಂದು ಅವುಗಳನ್ನು ಮತ್ತಷ್ಟು ಯಂತ್ರ ತುಂಬಿಸಿ ಸುಸಜ್ಜಿತಗೊಳಿಸಿದರು.

ಈಗ ಆನ್‌ಲೈನ್‌ನಲ್ಲಿ ಮಗುವಿಗೆ ಗುರು ಕಾಣಿ ಸುವುದಿಲ್ಲ. ಬದಲಾಗಿ ಅವನ ಮುಖವಷ್ಟೇ ಕಾಣಿ ಸುತ್ತದೆ. ಅದು ಜೀವ ಇರುವ ಮುಖವಲ್ಲ. ಬರೀ ಚಿತ್ರಪಟ. ಹಾಗೆಯೇ ಗುರುವಿಗೆ ಮಗು ಕಾಣಿಸ ಲಾರದು. ಯಾವುದೇ ಕಾರಣಕ್ಕೂ ಇದು ಗುರು- ಶಿಷ್ಯ ಮುಖಾಮುಖೀಯಾಗಿರುವ ಸಮ್ಮುಖ ಶಿಕ್ಷಣ ಅಲ್ಲವೇ ಅಲ್ಲ. ಶಿಷ್ಯನ ಮುಖ, ಮನಸ್ಸಿನೆದುರು ಗುರು ಸಮ್ಮುಖಗೊಂಡಾಗ ಮಾತ್ರ ಆ ಅರಿವಿನ ಧಾರೆ; ಆ ಸಮ್ಮುಖದಲ್ಲೇ ಪ್ರಶ್ನೆ- ಉತ್ತರ, ಚರ್ಚೆ-ಸಂವಾದ ನಡೆದು ಹುಟ್ಟುವ ಹೊಸ ಹೊಳಹುಗಳಿಗೆ ಉಪನ್ಯಾಸ ಎನ್ನಬಹುದು. ಉಪ

ನ್ಯಾಸಕನೋರ್ವ ಪಾಠ ಮಾಡುವ ಬೇಂದ್ರೆ ಯವರ ಒಂದೇ ಪದ್ಯ ಬಿ.ಎ. ತರಗತಿಯಲ್ಲಿ ಒಂದು ಸುಖ, ಬಿ.ಕಾಂ.ನಲ್ಲಿ ಮತ್ತೂಂದು ಅನುಭವ ಕೊಡು ವುದು ಇಂಥದ್ದೇ ಸಮ್ಮುಖ ಕಾರಣಕ್ಕೆ. ಬೇರೆ ಬೇರೆ ಕ್ಲಾಸ್‌ ಬೇಡ, ಒಂದೇ ತರಗತಿಯಲ್ಲಿ ಒಂದೇ ಪದ್ಯ ವನ್ನು ಬೇರೆ ಬೇರೆ ಅವಧಿಗಳಲ್ಲಿ ಮಾಡಿದರೂ ಅನುಭವಸುಖದಲ್ಲಿ ಇಂಥ ವ್ಯತ್ಯಾಸವಾಗುತ್ತದೆ. ಕಾರಣ ತರಗತಿಯೊಳಗಡೆಯ ಸಮ್ಮುಖದಲ್ಲಿ ಪರಸ್ಪರ ಹಂಚಿಕೆಯಾಗುವ, ಕೋದುಕೊಳ್ಳುವ ಸಂವೇದನೆಗಳು. ಮನೆ ಮತ್ತು ಶಾಲೆ ಎರಡೂ ಕಡೆಯ ಪರಿಸರ ಬೆಳೆಯುವ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದು ಸರ್ವವೇದ್ಯ. ಅಂಥ ಪ್ರಮುಖ ಎರಡು ನೆಲೆಗಳಲ್ಲಿ ಒಂದಾದ ಶಾಲೆ ಮುಚ್ಚಿ ಅಂಗಳ ತುಂಬಾ ಹುಲ್ಲುಕಾಡು ಬೆಳೆದು ಬಹಳ ದಿನಗಳಾದುವು. ಮನೆಯಲ್ಲೂ ರೈತಮನಸ್ಸು ಕ್ಷೀಣಿಸುತ್ತಿದೆ. ರೈತಮನಸ್ಸು ಇರುವ ಹೆತ್ತವರಾದರೆ ಮಗುವಿನ ಯಂತ್ರ ಮನಸ್ಸನ್ನು ಕಳಚಲು ಭಾಗಶಃ ಸಾಧ್ಯವಿದೆ. ಕೃಷಿ, ಅನ್ನದ ದಾರಿಯಲ್ಲಿ ನಾಗರಿಕತೆಗೆ ತಲುಪುವಾಗ ಸಹಜವಾಗಿಯೇ ದತ್ತವಾದ ಮನಸ್ಸೇ ರೈತಮನಸ್ಸು. ಇಂಥ ರೈತಮನಸ್ಸು ಹೊಂದಿದ ಕೊನೆಯ ತಲೆಮಾರೇ ಇಂದಿನ ಹೆತ್ತವರಿರಬೇಕು. ಹಾಗೆಂದು ರೈತ ಮನಸ್ಸು ಹೊಂದಲು ನೇಗಿಲು ಹಿಡಿದು ಗದ್ದೆಗೆ ಇಳಿದು ದುಡಿಯಬೇಕಾಗಿಲ್ಲ. ಕತ್ತಿ, ಹಾರೆ ಹಿಡಿದು ಭೂಮಿ, ಕೆಸರಿನೊಂದಿಗೆ ಸೆಣಸಾಡಬೇಕಾಗಿಲ್ಲ. ನಾವು ದಿನಾ ತಿನ್ನುವ ಅನ್ನದ ಪರಿಮಳ ಗ್ರಹಿಸುವ ಶಕ್ತಿ ಇದ್ದರೆ ಸಾಕು. ಕುಡಿಯುವ ಹಾಲು, ಸೇವಿಸುವ ತರಕಾರಿಯ ಮೂಲ ಗೊತ್ತಿದ್ದರೆ ಸಾಕು. ಮಹಾನಗರದ 20ನೇ ಮಹಡಿಯ 510ನೇ ಫ್ಲ್ಯಾಟ್‌ನಲ್ಲಿ ಬದುಕುವ ಮಗುವಿಗೆ ಬಿಡಿ, ಅದರ ಹೆತ್ತವರಿಗೇ ಈ ಅನ್ನದಾನಿಯ ಅನ್ವೇಷಣೆಯ ಕಥನ ಗೊತ್ತಾಗದಿದ್ದರೆ ಆ ಮನೆಯಲ್ಲಿ ರೈತಗುಣ ಇರುವುದಾದರೂ ಹೇಗೆ?

ರೈತಗುಣ ಕ್ಷೀಣಿಸುತ್ತಾ ಯಂತ್ರಗುಣ, ಮಾರುಕಟ್ಟೆ ಮನಸ್ಸು ವಿಜೃಂಭಿಸುತ್ತಾ ಬಂದಂತೆ ನಮ್ಮನೆಯ ಮಗು ಗರಿಷ್ಠ ಅಂಕ ಗಿಟ್ಟಿಸಿ ಪದವೀಧರನಾಗಬಹುದೇ ಹೊರತು ಮನುಷ್ಯ ನಾಗಬಹುದೇ ಎಂಬುದು ಗಂಭೀರ ಪ್ರಶ್ನೆ.

 

ನರೇಂದ್ರ ರೈ ದೇರ್ಲ

Advertisement

Udayavani is now on Telegram. Click here to join our channel and stay updated with the latest news.

Next