ನವದೆಹಲಿ:ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಒಪ್ಪಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಕಳೆದ 13 ತಿಂಗಳಿನಿಂದ ಹೋರಾಟ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಿರುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ(ಡಿಸೆಂಬರ್ 09) ಘೋಷಿಸಿದೆ.
ಇದನ್ನೂ ಓದಿ:ಕೋವಿಡ್ ಕಾರಣದಿಂದ ಶಾಲೆ ಮುಚ್ಚುವುದಿಲ್ಲ: ಶಿಕ್ಷಣ ಸಚಿವರ ಸ್ಪಷ್ಟನೆ
ಕೇಂದ್ರ ಸರ್ಕಾರದ ನೂತನ ಕರಡು ಪ್ರಸ್ತಾಪ ನಮಗೆ ಲಭ್ಯವಾಗಿದ್ದು, ಈ ಬಗ್ಗೆ ಇಂದು ಸಂಯುಕ್ತ ಕಿಸಾಸ್ ಮೋರ್ಚಾ ಚರ್ಚೆ ನಡೆಸಿದೆ. ಅದರಂತೆ 13 ತಿಂಗಳಿನಿಂದ ದೀರ್ಘಕಾಲ ನಡೆಸುತ್ತಿದ್ದ ಹೋರಾಟವನ್ನು ಅಂತ್ಯಗೊಳಿಸುವ ನಿರ್ಧಾರವನ್ನು ಸಂಯುಕ್ತ ಕಿಸಾನ್ ಮೋರ್ಚಾ ತೆಗೆದುಕೊಂಡಿರುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಐವರು ಸಮಿತಿ ಸದಸ್ಯರಲ್ಲಿ ಒಬ್ಬರಾದ ಅಶೋಕ್ ಧಾವ್ಲೆ ತಿಳಿಸಿದ್ದಾರೆ.
ಪ್ರತಿಭಟನೆಯನ್ನು ಅಂತ್ಯಗೊಳಿಸುವುದಾಗಿ ಘೋಷಿಸುವ ಮೊದಲೇ ದೆಹಲಿ-ಹರ್ಯಾಣದ ಗಡಿಭಾಗದ ಸಿಂಘುವಿನಲ್ಲಿ ಹಾಕಿದ್ದ ಟೆಂಟ್ ಗಳನ್ನು ರೈತರು ತೆರವುಗೊಳಿಸಲು ಆರಂಭಿಸಿದ್ದರು. ನಾವು ಪ್ರತಿಭಟನೆ ಕೈಬಿಟ್ಟು ಮನೆಗಳಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದೇವೆ ಎಂದು ರೈತರು ತಿಳಿಸಿದ್ದರು.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕು ಹಾಗೂ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ 2020ರ ನವೆಂಬರ್ 26ರಿಂದ ಸಂಯುಕ್ತ ಕಿಸಾನ್ ಮೋರ್ಚಾ ದೆಹಲಿಯ ಮೂರು ಗಡಿಭಾಗಗಳಾದ ಸಿಂಘು, ಗಾಜಿಪುರ್ ಹಾಗೂ ಟಿಕ್ರಿಯಲ್ಲಿ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ದೀರ್ಘ ಒಂದು ವರ್ಷಗಳ ಕಾಲದಿಂದ ರೈತರು ಹೋರಾಟ ನಡೆಸುತ್ತಿದ್ದು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು. ಅದರಂತೆ ಲೋಕಸಭೆಯಲ್ಲಿ ಕಾಯ್ದೆಯನ್ನು ರದ್ದುಗೊಳಿಸಲಾಗಿತ್ತು.