Advertisement

ಸಾವಯವ ಪದ್ಧತಿಯಲ್ಲಿ ಬೆಂಡೆ ಬೆಳೆದು ಲಾಭ ಪಡೆದ ಕೃಷಿ ಸಾಧಕ

06:50 AM May 11, 2018 | |

ಶಿರ್ವ : ಬಿಳಿ ಹಾಲು ಬೆಂಡೆಯನ್ನು ಪ್ರಮುಖ ಬೆಳೆಯನ್ನಾಗಿ ಬೆಳೆಯುವವರ ಸಂಖ್ಯೆ ವಿರಳ. ಆದರೆ ಅದನ್ನೇ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದು ಬಂಪರ್‌ ಬೆಳೆ ತೆಗೆದ ಸಾಧನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ  ಶಿರ್ವ ಗ್ರಾಮದ ಕಲ್ಲೊಟ್ಟು ರಾಘವೇಂದ್ರ ನಾಯಕ್‌ ಅವರದ್ದು. 

Advertisement

ಮಿಶ್ರ ಕೃಷಿ ಮಾಡುತ್ತಿರುವ ನಾಯಕ್‌ ಅವರು ರಾಜ್ಯ ಪ್ರಶಸ್ತಿ ಪಡೆದ ಪ್ರಗತಿಪರ ಕೃಷಿಕರೂ ಹೌದು. ತನ್ನ ಕೃಷಿ ಭೂಮಿಯ 15 ಸೆಂಟ್ಸ್‌ ಜಾಗದಲ್ಲಿ ಸಾವಯವ ಗೊಬ್ಬರ ಬಳಸಿ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಿಡುಗಡೆಗೊಂಡ ರೋಗ ನಿರೋಧಕ ತಳಿ ಹಾಲುಬೆಂಡೆ ಬೆಳೆದು ಅಧಿಕ ಇಳುವರಿಯಿಂದ ಲಾಭ ಪಡೆದಿದ್ದಾರೆ. 

ಅಧಿಕ ಇಳುವರಿಗೆ ಪ್ಲಾನ್‌
10 ಸೆಂಟ್ಸ್‌ ಜಾಗದಲ್ಲಿ ಪ್ರಥಮ ಉಳುಮೆಗೆ  25ಕೆಜಿ ಸುಣ್ಣ, 500 ಕೆಜಿ ಸಾವಯವ ಗೊಬ್ಬರದೊಂದಿಗೆ 100 ಕೆಜಿಯಷ್ಟು ಕಹಿಬೇವಿನ ಹಿಂಡಿ ಭೂಮಿಗೆ ಸೇರಿಸಿ ಹದ ಮಾಡಬೇಕು. ಸಾಲಿನಿಂದ ಸಾಲಿಗೆ 4 ಅಡಿ ,ಗಿಡದಿಂದ ಗಿಡಕ್ಕೆ 3 ಅಡಿ ಅಂತರವಿಟ್ಟು ನರ್ಸರಿ ಗಿಡ ನಾಟಿ ಮಾಡಬೇಕು. ನಾಟಿ ಮಾಡಿದ 15 ದಿನದ ನಂತರ ಗೋಬರ್‌ಗ್ಯಾಸ್‌ ಸ್ಲರಿ ನೀರಿನಲ್ಲಿ ಕಹಿಬೇವಿನ ಹಿಂಡಿ ಮಿಶ್ರಣ ಮಾಡಿ ದ್ರಾವಣವನ್ನು 15 ದಿನಕ್ಕೊಮ್ಮೆ ಗಿಡಕ್ಕೆ ಸುರಿಯಬೇಕು. ಇದರಿಂದ ಹಳದಿ ರೋಗ ಬಾಧಿಸದೆ ಗುಣಮಟ್ಟದ ಕಾಯಿಯೊಂದಿಗೆ ಅಧಿಕ ಇಳುವರಿ ಸಿಗುತ್ತದೆ ಎಂದು ನಾಯಕ್‌ ಹೇಳುತ್ತಾರೆ.

ಬೀಜೋಪಚಾರ
ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಿಂದ ಬಿಡುಗಡೆಗೊಂಡ ರೋಗ ನಿರೋಧಕ ಬಿಳಿ ಹಾಲು ಬೆಂಡೆ ತಳಿಗೆ ಮುಖ್ಯವಾಗಿ ಬಾಧಿಸುವ ನಂಜು ರೋಗ (ಹಳದಿ ರೋಗ). ಇದು ಮಣ್ಣು,ಹವಾಗುಣ ಇಲ್ಲವೇ ವೈರಸ್‌ ನಿಂದ ಹರಡಬಹುದೆಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.ಅದಕ್ಕಾಗಿ ಇಮಿಡಾಕ್ಲೊಪಿಡ್‌ ಎಂಬ ದ್ರಾವಣದಿಂದ  ಬೀಜೋಪಚಾರ ಮಾಡಬೇಕಾಗುತ್ತದೆ.ತೆಂಗಿನ ಚಿಪ್ಪಿನ ಪುಡಿಯೊಂದಿಗೆ ಪ್ರೊಟ್ರೇಯಲ್ಲಿ ಬೀಜ ಹಾಕಿ 24  ಗಂಟೆ ನೆನೆಸಿ ಬೀಜ ಹಾಕಬೇಕು.3-4 ದಿನದಲ್ಲಿ ಮೊಳಕೆ ಬಂದು ಗಿಡ ಸಿದ್ಧವಾಗಿ 12-15 ದಿನದಲ್ಲಿ ನಾಟಿಮಾಡಬಹುದು.

ತಾಂತ್ರಿಕತೆ
ಹೆಚ್ಚಾಗಿ ಬೆಂಡೆ ಬೆಳೆಗೆ ಕಳೆ ಬರುತ್ತಿದ್ದು ಹೊದಿಕೆ (ಮಲಿcಂಗ್‌ ಶೀಟ್‌) ಅಳವಡಿಸಲಾಗಿದೆ. ವಾರಕ್ಕೆ ಎರಡು ಬಾರಿ ನೀರುಣಿಸಿದಾಗ ತೇವಾಂಶ ಕಡಿಮೆಯಾಗದೆ ಕೀಟಗಳ ಹತೋಟಿಯಾಗಿ ಉತ್ತಮ ಗುಣಮಟ್ಟದ ಕಾಯಿ ಸಿಗುತ್ತದೆ. ಯಾವುದೇ ರೀತಿಯ ರಾಸಾಯನಿಕ ಸಿಂಪಡಿಸದೆ ಸಾವಯವ ಗೊಬ್ಬರ ನೀಡಿ ಅಧಿಕ ಇಳುವರಿ ಪಡೆಯಬಹುದು ಎನ್ನುತ್ತಾರೆ. 

Advertisement

ಪ್ರಯೋಗಶೀಲ  ಕೃಷಿ ಸಾಧಕ
ತನ್ನ ಕೃಷಿ ಭೂಮಿಯಲ್ಲಿ ಬಿಳಿ ಹಾಲು ಬೆಂಡೆಯೊಂದಿಗೆ ವಿಶಿಷ್ಟ ತಳಿ ಕೆಂಪು ಬೆಂಡೆಯನ್ನೂ ಬೆಳೆಯುತ್ತಿದ್ದಾರೆ. ಕೃಷಿಗಾಗಿ  ರಾಜ್ಯ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಅಲ್ಲದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸðತರಾಗಿದ್ದಾರೆ. ಪ್ರಯೋಗಶೀಲ ಚಿಂತನೆಯೊಂದಿಗೆ ಕೃಷಿಯಲ್ಲಿ ಆಸಕ್ತಿ ಹೊಂದಿರುವ ರಾಘವೇಂದ್ರ ನಾಯಕ್‌ ಕೃಷಿ ಇಲಾಖೆಯ ಭೂ ಚೇತನ ಯೋಜನೆಯ ಅನುವುಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಇದರೊಂದಿಗೆ ಆಸಕ್ತ ಕೃಷಿಕರಿಗೆ ಮಾರ್ಗದರ್ಶನ,ಯುವಕರಿಗೆ ಮನೆಯಲ್ಲಿ ಪ್ರಾತ್ಯಕ್ಷಿಕೆ ತರಬೇತಿ,ಬ್ಯಾಂಕ್‌ ಹಾಗೂ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ನಿಖರ ಮಾಹಿತಿ ನೀಡುತ್ತಿದ್ದಾರೆ.   

ಉತ್ತಮ ಆದಾಯ
ತನ್ನ 15 ಸೆಂಟ್ಸ್‌ ವಿಸ್ತೀರ್ಣದಲ್ಲಿ ಜಾಗದಲ್ಲಿ ನಾಯಕ್‌ ಅವರು 640 ಗಿಡ ಬಿಳಿ ಹಾಲು ಬೆಂಡೆ ಬೆಳೆದಿದ್ದು ಇಳುವರಿ ದಿನಕ್ಕೆ 60 ಕೆಜಿ ಕಾಯಿ ಸಿಗುತ್ತದೆ. ಒಂದು ಗಿಡದಿಂದ ತಿಂಗಳಿಗೆ 100-120 ಕಾಯಿ ಸಿಗುತ್ತದೆ. ಸ್ಥಳೀಯ ಮಾರುಕಟ್ಟೆ ದರ ರೂ. 40 ರಿಂದ 50 ಇದ್ದು  ತಿಂಗಳಿಗೆ ಸರಾಸರಿ ರೂ. 60 ಸಾವಿರದಿಂದ 75 ಸಾವಿರದ ವರೆಗೆ ಆದಾಯ ಬರುತ್ತಿದೆ. ದೂರದ ಮಾರುಕಟ್ಟೆಗೆ ಸಾಗಿಸಿದರೆ ಇನ್ನೂ ಹೆಚ್ಚಿನ ಲಾಭ ಗಳಿಸಬಹುದು ಎನ್ನುತ್ತಾರೆ.  

ವರ್ಷಪೂರ್ತಿ ಮಾರುಕಟ್ಟೆ
ಸಾವಯವ ಗೊಬ್ಬರ ಬಳಸಿ ಬೆಂಡೆ ಕೃಷಿ ಮಾಡಿದಲ್ಲಿ ಹೆಚ್ಚಿನ ಶ್ರಮವಿಲ್ಲದೆ ಅಧಿಕ ಲಾಭ ಹಾಗೂ ಇಳುವರಿ ಸಾಧ್ಯ. ಗಿಡ ಮುಟ್ಟಿದ್ದಲ್ಲಿ ತುರಿಕೆ ಇರುವುದರಿಂದ ಮಂಗಗಳ ಹಾವಳಿಯೂ ಇಲ್ಲ  ನವಿಲು ಕೂಡಾ ತಿನ್ನದೆ ಬೆಳೆಗೆ ಯಾವುದೇ ಬಾಧೆ ಇಲ್ಲ. ವರ್ಷಪೂರ್ತಿ ಮಾರುಕಟ್ಟೆ ಇದ್ದು  ತಾಂತ್ರಿಕತೆ ಬಳಸಿ ಕೃಷಿ ಮಾಡಿದರೆ ಆರ್ಥಿಕಾಭಿವೃದ್ಧಿ ಸಾಧ್ಯ.

– ರಾಘವೇಂದ್ರ ನಾಯಕ್‌, 
ಬೆಂಡೆ ಕೃಷಿಕ

-  ಸತೀಶ್ಚಂದ್ರ ಶೆಟ್ಟಿ , ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next