ಹಾನಗಲ್ಲ: ಬಿತ್ತನೆ ಬಹುತೇಕ ಪೂರ್ಣಗೊಂಡಿದ್ದರೂ ತೇವಾಂಶದ ಕೊರತೆಯಿಂದ ಗೋವಿನಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ನೀರಿನ ಅಭಾವ ತಲೆದೋರಿದ್ದು, ಮಳೆಗಾಗಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿರುವ ದೃಶ್ಯ ತಾಲೂಕಿನಲ್ಲಿ ಕಂಡು ಬರುತ್ತಿದೆ.
ಹಾನಗಲ್ಲ ತಾಲೂಕಿನಲ್ಲಿ ಒಟ್ಟು 47,663 ಹೆಕ್ಟೇರ್ ಕೃಷಿ ಭೂಮಿ ಇದೆ. ಈ ಪೈಕಿ 37,900 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಭತ್ತದ ನಾಡಾದ ಹಾನಗಲ್ಲ ತಾಲೂಕಿನಲ್ಲಿ ಗೋವಿನಜೋಳವನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆಯಲು ಮುಂದಾಗಿದ್ದು, ಈ ವರ್ಷ ರೈತರು 21,385 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬಿತ್ತನೆ ಮಾಡಿದ್ದಾರೆ. 8,525 ಹೆಕ್ಟೇರ್‌ನಲ್ಲಿ ಕೂರಿಗೆ ಮೂಲಕ ಭತ್ತ ಬಿತ್ತನೆ, 2,775 ಹೆಕ್ಟೇರ್ ಸೋಯಾ ಅವರೆ, 2,425 ಹೆಕ್ಟೇರ್‌ನಲ್ಲಿ ಹತ್ತಿ, 665 ಹೆಕ್ಟೇರ್ ನಲ್ಲಿ ಶೇಂಗಾ ಬಿತ್ತನೆ ಮಾಡಿದ್ದಾರೆ. 2,100 ಹೆಕ್ಟೇರ್ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದೆ.
ಈಗಾಗಲೇ ಅಂದಾಜು 45 ದಿನಗಳ ಬೆಳೆಗಳಾಗಿವೆ. ಕೃಷಿ ಇಲಾಖೆ ಪ್ರಸ್ತುತ ವರ್ಷ 2,500 ಕ್ವಿಂಟಲ್ ಭತ್ತ, 470 ಕ್ವಿಂಟಲ್ ಗೋವಿನಜೋಳ, 105 ಕ್ವಿಂಟಲ್ ಶೇಂಗಾ, 2,172 ಕ್ವಿಂಟಲ್ ಸೋಯಾ ಅವರೆ ಬೀಜ ವಿತರಿಸಿದೆ. ಬಿತ್ತನೆ ಬೀಜ, ಗೊಬ್ಬರದ ಕೊರತೆ ಕಾಣದಿದ್ದರೂ ಪ್ರಾಕೃತಿಕವಾಗಿ ಮಳೆ ಅಭಾವವೇ ರೈತರನ್ನು ಹೆಚ್ಚು ಆತಂಕಕ್ಕೀಡು ಮಾಡಿದೆ.
ತಾಲೂಕಿನಲ್ಲಿ ನೀರಾವರಿ ವ್ಯವಸ್ಥೆ ಇರುವ ಕಡೆಗಳಲ್ಲಿ, ಅದರಲ್ಲೂ ವರದಾ, ಧರ್ಮಾ ನದಿ ತೀರದ ಪ್ರದೇಶಗಳಲ್ಲಿ ಹಾಗೂ ಅಲ್ಲಲ್ಲಿ ಕೊಳವೆಬಾವಿ ಅವಲಂಬಿಸಿ ಕೆಲವೆಡೆ ಭತ್ತದ ನಾಟಿಗೆ ಮುಂದಾಗಿರುವ ರೈತರು ಅಂದಾಜು 6,000 ಹೆಕ್ಟೇರ್‌ನಲ್ಲಿ ಭತ್ತದ ನಾಟಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಕಳೆದ ವರ್ಷ ಈ ಸಂದರ್ಭದಲ್ಲಿ ಭತ್ತ-ಗೋವಿನಜೋಳಕ್ಕೆ ಬಹಳಷ್ಟು ರೋಗ ಬಾಧೆ ಕಾಣಿಸಿತ್ತು. ಆದರೆ ಈ ಬಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಗೋವಿನಜೋಳಕ್ಕೆ ಲದ್ದಿ ಹುಳುವಿನ ಬಾಧೆ ಇದೆ. ಆದರೆ ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಲದ್ದಿ ಹುಳು ಕಾಣಿಸಿಕೊಂಡಿದ್ದರ ಪರಿಣಾಮ ಮುಂಜಾಗ್ರತೆಯಾಗಿ ಔಷಧಿ ಸಿಂಪಡಣೆಗೆ ಮುಂದಾಗಿರುವುದರಿಂದ ಲದ್ದಿ ಹುಳು ಬಾಧೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.
ಕಳೆದ ನಾಲ್ಕಾರು ವರ್ಷಗಳಿಂದ ಅತಿವೃಷ್ಟಿ-ಅನಾವೃಷ್ಟಿ ಕಾರಣದಿಂದ ಬೆಳೆ ಕೈಗೆ ಸಿಗದೆ ಆತಂಕದಲ್ಲೇ ಕೃಷಿಗೆ ಮುಂದಾದ ರೈತನ ಪಾಲಿಗೆ ಪ್ರಸ್ತುತ ವರ್ಷ ಸರಿಯಾಗಿ ಬೆಳೆ ಬರಬೇಕೆಂದರೆ ಅದು ಮಳೆಯನ್ನೇ ಆಶ್ರಯಿಸಿದೆ. ಈವರೆಗೆ ಇರುವ ಬೆಳೆಯಲ್ಲಿ ಏನೂ ತೊಂದರೆ ಇಲ್ಲದ ಕಾರಣ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತರಿದ್ದಾರೆ.