Advertisement

ಮುಂಗಾರು ಮಳೆಗಾಗಿ ಮುಗಿಲತ್ತ ರೈತರ ನೋಟ

11:38 AM Jul 12, 2019 | Suhan S |

ಚನ್ನರಾಯಪಟ್ಟಣ: ಪೂರ್ಣ ಮುಂಗಾರು ಕೈ ಕೊಟ್ಟ ಪರಿಣಾಮ ದ್ವಿದಳ ಧಾನ್ಯ ರೈತರ ಕೈಸೇರಲಿಲ್ಲ. ಮುಂಗಾರು ಮಳೆ ಉತ್ತಮವಾಗಿ ಸುರಿಯಬಹುದೆಂದು ಆಶಾಭಾವನೆಯಿಂದ ರೈತರು ತಮ್ಮ ಕೃಷಿ ಭೂಮಿ ಹದಮಾಡಿಕೊಂಡು ವರುಣನ ಕೃಪೆಗಾಗಿ ಮುಗಿಲತ್ತ ನೋಡುವಂತಾಗಿದೆ.

Advertisement

ತಾಲೂಕಿನಲ್ಲಿ ವಾಡಿಕೆಯಂತೆ ಮಳೆ ಉತ್ತಮವಾಗಿದೆ ಎಂದು ಕೃಷಿ ಅಧಿಕಾರಿಗಳು ಹೇಳುವುದಲ್ಲದೇ ಮಳೆ ಆಗಿರುವ ಅಂಕಿ ಅಂಶದ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಕೃಷಿಗೆ ಅಗತ್ಯವಿರುವಷ್ಟು ಮಳೆಯಾಗಿದ್ದು ಬಾಗೂರು ಹಾಗೂ ನುಗ್ಗೇಹಳ್ಳಿ ಹೋಬಳಿಯಲ್ಲಿ ವಾಡಿಕೆಗಿಂತ‌ ಶೇ.10-18 ರಷ್ಟು ಹೆಚ್ಚುವರಿಯಾಗಿ ಮಳೆ ಸುರಿದಿರುವುದಲ್ಲದೇ ಉಳಿದ ನಾಲ್ಕು ಹೋಬಳಿಯಲ್ಲಿ ಕೃಷಿ ಚಟುವಟಿಕೆ ಮಾಡಲು ಯೋಗ್ಯವಾಗುವಷ್ಟು ಮಳೆಯಾಗಿದೆಯಂತೆ.

ಕೃಷಿ ಭೂಮಿಯಲ್ಲಿ ತೇವಾಂಶವಿಲ್ಲ ಎಂದು ರೈತರು ಹೇಳುತ್ತಾರೆ. ಕಳೆದ ಒಂದೆರಡು ತಿಂಗಳಿನಿಂದ ಬಿತ್ತನೆ ಮಾಡಲು ಭೂಮಿ ಹದ ಮಾಡಿ ರೈತ ಸಂಪರ್ಕ ಹಾಗೂ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಖರೀದಿ ಮಾಡಿಕೊಂಡು ವರುಣನ ಆಗಮನಕ್ಕಾಗಿ ಮುಗಿಲತ್ತ ನೋಡುತ್ತಿದ್ದೇವೆ. ತಿಂಗಳಲ್ಲಿ ಒಮ್ಮೆ ಉತ್ತಮ ಮಳೆಯಾದರೆ ಸಾಕು ಅದನ್ನೇ ಮುಂದಿಟ್ಟುಕೊಂಡು ಮುಂಗಾರು ಉತ್ತಮವಾಗಿದೆ ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡುತ್ತಾರೆ ಎಂಬುದು ರೈತರ ವಾದವಾಗಿದೆ.

ಹೋಬಳಿವಾರು ಮಳೆ ವಿವರ: ಕಸಬಾ ಹೋಬಳಿ 220 ಮಿ.ಮೀ.ಗೆ 220 ಮಳೆಯಾಗಿದೆ. ಬಾಗೂರು 207 ಮಳೆಯಾಗಬೇಕಿದ್ದು 244 ಮಿ.ಮೀ. ಬಂದಿದ್ದು ಅಂದರೆ ಶೇ.18 ಮಿ.ಮೀ. ಹೆಚ್ಚುವರಿಯಾಗಿದೆ. ನುಗ್ಗೇಹಳ್ಳಿ 192ಕ್ಕೆ 211 ಅಂದರೆ ಶೇ.10 ರಷ್ಟು ಹೆಚ್ಚು ಮಳೆಯಾಗಿದೆ. ದಂಡಿಗನಹಳ್ಳಿ ಹೋಬಳಿ 222 ಕ್ಕೆ 208 ಶೇ.7 ರಷ್ಟು ಕಡಿಮೆ ಮಳೆಯಾಗಿದೆ. ಹಿರೀಸಾವೆ 173ಕ್ಕೆ 158 ಶೇ.9 ರಷ್ಟು ಮಳೆ ಕೊರತೆಯಾಗಿದೆ, ಶ್ರವಣಬೆಳಗೊಳ 216 ಮಿ.ಮೀ.ಗೆ 209 ರಷ್ಟು ಮಳೆಯಾಗಿದ್ದು ಶೇ.3ರಷ್ಟು ಮಾತ್ರ ಮಳೆ ಕೊರತೆಯಿದೆ. ಒಟ್ಟಾರೆ ತಾಲೂಕಿನಲ್ಲಿ ಕೃಷಿ ಚಟುವಟಿಕೆಗೆ ಅಗತ್ಯ ಮಳೆ 204 ಮಿ.ಮೀ. ಬೇಕಿದ್ದು 208 ಮಿ.ಮೀ. ಮಳೆಯಾಗುವ ಮೂಲಕ ಶೇ.2 ರಷ್ಟು ಅಧಿಕ ಮಳೆ ಸುರಿದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂಕಿ ಅಂಶ ಸಮೇತ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಬಿತ್ತನೆ ಪ್ರಮಾಣ ಇಳಿಮುಖ: ತಾಲೂಕಿನಲ್ಲಿ 40,325 ಹೆಕ್ಟೇರ್‌ ಬಿತ್ತನೆ ಆಗಬೇಕಿತ್ತು.ಆದರೆ 19,555 ಹೆಕ್ಟೇರ್‌ ಪ್ರದೇಶದಲ್ಲಿ ತಾಲೂಕಿನ ರೈತರು ಬಿತ್ತನೆ ಮಾಡಿದ್ದಾರೆ. ಮೆಕ್ಕೆಜೋಳ 8,500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು 890 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ, ತೊಗರಿ 400ಕ್ಕೆ 70 ಹಕ್ಟೇರ್‌ ಬಿತ್ತನೆ, ಉದ್ದು 600ಕ್ಕೆ 37.5 ಬಿತ್ತನೆ, ಅಲಸಂದೆ 1,100ಕ್ಕೆ 600, ಹೆಸರು 800ಕ್ಕೆ 140, ಎಳ್ಳು 800ಕ್ಕೆ 13, ಕಬ್ಬು 875 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಿದ್ದು ಹಳೆಯ ಕೂಳೆ ಕಬ್ಬು ಹಾಗೂ ಬಿತ್ತನೆ ಸೇರಿ 155 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

Advertisement

ತೋಟಗಾರಿಕೆ ಬೆಳೆಗಳಾದ ಆಲೂಗಡ್ಡೆ 950ಕ್ಕೆ 575, ಟೊಮೆಟೋ 250ಕ್ಕೆ 129, ಈರುಳ್ಳಿ 5ಕ್ಕೆ ಶ್ಯೂನ್ಯ, ಮೆಣಸಿನಕಾಯಿ 100ಕ್ಕೆ 49, ಶುಂಠಿಗೆ ಗುರಿ ನಿಗದಿಯಾಗಿಲ್ಲ ಆದರೂ 300 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಬೀಜ ಖರೀದಿ ಬಿಲ್ ನೀಡುತ್ತಿಲ್ಲ: ತಾಲೂಕಿನಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಕೃಷಿ ಇಲಾಖೆ ಹಾಗೂ ಹೋಬಳಿಯ ರೈತ ಸಂಪರ್ಕ ಕೇಂದ್ರದ ಮೂಲಕ ರಿಯಾಯಿತಿ ದರ‌ದಲ್ಲಿ ರೈತರಿಗೆ ಬಿತ್ತನೆ ಬೀಜವ‌ನ್ನು ವಿತರಣೆ ಮಾಡಲಾಗಿದೆ.

ರೈತರು ಬಿತ್ತನೆಗಾಗಿ ನಾನಾ ಬೀಜವನ್ನು ಕೊಂಡು ಕೊಳ್ಳುವಾಗ ಸರ್ಕಾರ ನಿಯಮದ ಪ್ರಕಾರ ರಿಯಾಯಿತಿ ದರದಲ್ಲಿ ಬೀಜ ಕೊಳ್ಳುವ ರೈತರಿಗೆ ಆಯಾ ರೈತ ಸಂಪರ್ಕ ಕೇಂದ್ರದಿಂದ ವಿತರಣೆ ಬಿಲ್ ನೀಡಬೇಕು ಆದರೆ ಕೆಲವು ಸಲ ಬಿಳಿಹಾಳೆಯಲ್ಲಿ ಬೀಜದ ದರವನ್ನು ನಮೂದಿಸಿ ಕೊಡಲಾಗುತ್ತಿದೆ. ನಕಲಿ ಬೀಜಗಳ ಮಾರಾಟ ಕಂಡು ಬಂದಿಲ್ಲವಾದರೂ ಬಿಲ್ ನೀಡದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಮಳೆಯಿಲ್ಲದೇ ಪರದಾಟ: ಒಣಭೂಮಿ ಹಾಗೂ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ರೈತರು ಮಳೆಯಿಲ್ಲದೇ ಸಂಕಟ ಪಡುತ್ತಿದ್ದಾರೆ, ಬಿತ್ತದೆಯೇ ಸುಮ್ಮನೆ ಕೂತಿದ್ದರೆ ಒಳಿತಾಗುತ್ತಿತ್ತು. ಆದರೆ ಬಿತ್ತನೆ ಮಾಡಿ ಇದ್ದ ಹಣ ಖರ್ಚು ಮಾಡಿ ಕೈ ಸುಟ್ಟುಕೊಳ್ಳುವಂತಾಗಿದೆ ಎನ್ನುತ್ತಿದ್ದಾರೆ. ಬಿತ್ತನೆಗೆ ಹಣ ಖರ್ಚು ಮಾಡಿದ ಕೃಷಿಕರು ನಷ್ಟಕ್ಕೆ ಸಿಲುಕಿದ್ದಾರೆ. ಒಣಹವೆಗೆ ಬೆಳೆ ಬಾಡಿಹೋಗುತ್ತಿದೆ. ಆಷಾಢದ ಗಾಳಿ ಬೀಸುತ್ತಿದ್ದು ಮೋಡ ಕವಿದ ವಾತಾವರಣವಿದೆ ಹೊರತು ಮಳೆ ಬರುತ್ತಿಲ್ಲ.

ಮಳೆ ನಿರೀಕ್ಷೆ: ತಾಲೂಕಿನ ನುಗ್ಗೇಹಳ್ಳಿ ಹಾಗೂ ಬಾಗೂರು ಹೋಬಳಿಯಲ್ಲಿ ಕಳೆದ 10 ದಿವಸದ ಹಿಂದೆ ಉತ್ತಮ ಮಳೆ ಸುರಿದಿದ್ದರಿಂದ ರಾಸುಗಳ ಮೇವು ಬೆಳೆಯಲು ರೈತರು ಮುಂದಾಗಿದ್ದಾರೆ.

ಪೂರ್ಣ ಮುಂಗಾರು ಬೆಳೆಗಳಾದ ಹೆಸರು, ಅಲಸಂದೆ, ಉದ್ದು, ಎಳ್ಳು ಬೆಳೆದಿದ್ದು ಮಳೆ ಕೊರತೆಯಿಂದ ಅವು ರೈತರ ಕೈ ಸೇರುವ ಲಕ್ಷಣಗಳ ಕಾಣುತ್ತಿಲ್ಲ. ಕೊಳವೆ ಬಾವಿ ಹೊಂದಿರುವ ರೈತರು ಬಿತ್ತನೆ ಅವಧಿ ಮೀರಬಾರದು ಎಂದು ಕಡಿಮೆ ತೇವಾಂಶದಲ್ಲಿಯೇ ಅಲೂಗಡ್ಡೆ, ಮೆಕ್ಕಜೋಳ ಬಿತ್ತನೆ ಮಾಡಿ ಮಳೆ ಆಗಮನದ ನಿರೀಕ್ಷೆಯಲ್ಲಿದ್ದಾರೆ.

 

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next