ಸಾಗರ: ತಾಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಂಜಾನಾಯ್ಕ ಅವರ ಕರ್ತವ್ಯಲೋಪ, ಹಲ್ಲೆ ಮಾಡಿಸುವುದು, ಭ್ರಷ್ಟಾಚಾರ, ಸಾಕ್ಷಿನಾಶ, ದುರ್ನಡತೆ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಗುರುವಾರ ರೈತ ಸಂಘದ ಡಾ. ಎಚ್.ಗಣಪತಿಯಪ್ಪ ಬಣದ ವತಿಯಿಂದ ತಾಲೂಕು ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ತಾಲೂಕಿನಲ್ಲಿ ಅಧಿಕಾರಿಗಳ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟ ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿಗಳು ಬೆಂಗಾವಲಾಗಿ ನಿಂತಿದ್ದಾರೆ. ತಾಲೂಕಿನ ವಿವಿಧ ಕಚೇರಿಗಳಲ್ಲಿ ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರ ಕುರಿತ ಶೇ. 70ರಷ್ಟು ಕಡತವನ್ನು ರೈತ ಸಂಘ ಸಂಗ್ರಹಿಸಿದ್ದು ಶೀಘ್ರದಲ್ಲಿಯೆ ಅದನ್ನು ಸಾರ್ವಜನಿಕರ ಎದುರು ತೆರೆದಿಡುವ ಕೆಲಸ ಮಾಡಲಿದೆ ಎಂದು ಹೇಳಿದರು.
ತ್ಯಾಗರ್ತಿ ಪಿಡಿಓ ರೈತಸಂಘದ ಸದಸ್ಯರಾದ ಸುರೇಶ್ ಅವರು ತಮ್ಮ ಅಹವಾಲು ಸಲ್ಲಿಸಲು ಕಚೇರಿಗೆ ಬಂದಾಗ ತೀವ್ರತರವಾದ ಹಲ್ಲೆ ಮಾಡಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದ್ದು, ಈತನಕ ಕ್ರಮ ಜರುಗಿಸಿಲ್ಲ. ಸುರೇಶ್ ಅವರು ಘಟನೆಗೆ ಸಂಬಂಧಪಟ್ಟಂತೆ ಕಚೇರಿಯಲ್ಲಿರುವ ಸಿ.ಸಿ. ಕ್ಯಾಮರಾ ದೃಶ್ಯಾವಳಿಯನ್ನು ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪಿಡಿಓ ಸುರೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೇಸ್ ಹಾಕುವ ಬೆದರಿಕೆ ಒಡ್ಡಿರುವುದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಮಾ. 19ರಂದು ಸುರೇಶ್ ಅವರು ಮಾಹಿತಿ ಹಕ್ಕಿನಡಿ ಸಿಸಿ ಕ್ಯಾಮರಾ ದೃಶ್ಯಾವಳಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಯು ಯಾವುದೇ ಮಾಹಿತಿಯನ್ನು ಸಹ ಕೊಡದೆ ಸತಾಯಿಸುತ್ತಿದ್ದಾರೆ. ಪಿಡಿಓ ಮಂಜಾನಾಯ್ಕ್ ನಮ್ಮ ಸಂಘದ ಸದಸ್ಯರ ಹಕ್ಕನ್ನು ಕಸಿದುಕೊಂಡು ಅವರಿಗೆ ಅನ್ಯಾಯ ಮಾಡಿರುತ್ತಾರೆ. ಅವರ ವಿರುದ್ಧ ಅನೇಕ ಸಾರ್ವಜನಿಕ ದೂರುಗಳಿವೆ. ಕರ್ತವ್ಯಲೋಪ ಎಸಗಿರುವ ಅಧಿಕಾರಿಯನ್ನು ತಕ್ಷಣ ಅಮಾನತ್ತು ಮಾಡಿ ವಿಚಾರಣೆಗೆ ಒಳಪಡಿಸಬೇಕು. ಇಲ್ಲವಾದಲ್ಲಿ ಪಂಚಾಯತ್ ಅಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರ ಮನೆ ಎದುರು ರೈತ ಸಂಘ ಪ್ರತಿಭಟನೆ ನಡೆಸುವುದು ಅನಿರ್ವಾಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘದ ಸಂಚಾಲಕ ರಮೇಶ್ ಈ. ಕೆಳದಿ ಮಾತನಾಡಿ, ತಾಲೂಕಿನಲ್ಲಿರುವ ಭ್ರಷ್ಟ ಅಧಿಕಾರಿಗಳಿಗೆ ಎಸಿ ಡಾ. ನಾಗರಾಜ್ ಎಲ್. ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ. ಇಂತಹ ಅಧಿಕಾರಿಯನ್ನು ಶಾಸಕರು ದಕ್ಷ ಅಧಿಕಾರಿ ಎಂದು ಹೋದ ಕಡೆಯೆಲ್ಲಾ ಬಿಂಬಿಸುವ ಪ್ರಯತ್ನ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಪಿಡಿಓ ವಿರುದ್ಧ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ರೈತ ಸಂಘ ಅಸಹಕಾರ ಚಳುವಳಿ ಮಾರ್ಗ ತುಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಸುರೇಶ್ ಬೆಳ್ಳಿಕೊಪ್ಪ, ಸುರೇಶ್ ಬಿ., ಸೂರಜ್, ಹೊಯ್ಸಳ ಗಣಪತಿಯಪ್ಪ, ಸಂತೋಷ್ ಕುಮಾರ್, ಪರಶುರಾಮ್, ಚಂದ್ರಶೇಖರ ಗೌಡ, ಹಾಲಸ್ವಾಮಿ, ಕನ್ನಪ್ಪ ಇನ್ನಿತರರು ಹಾಜರಿದ್ದರು.