ರಾಣಿಬೆನ್ನೂರ: ರೈತ ಮುಖಂಡ ರಾಜೇಶ್ ಟಿಕಾಯತ್ ಅವರ ಮೇಲೆ ಮತ್ತೆ ಕಿಡಿಗೇಡಿಗಳು ಕಪ್ಪು ಮಸಿ ಎರಚಿ, ದೌರ್ಜನ್ಯವೆಸಗಿರುವುದನ್ನು ಖಂಡಿಸಿ, ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘದ ಪದಾಧಿಕಾರಿಗಳು, ನಂತರ ಗ್ರೇಡ್-2 ತಹಶೀಲ್ದಾರ್ ಸಿದ್ದನಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಮುಖಂಡ ಹನುಮಂತಪ್ಪ ಕಬ್ಟಾರ ಮಾತನಾಡಿ, ರಾಜ್ಯ ರೈತ ಸಂಘದ ಮುಖಂಡ ಚಂದ್ರಶೇಖರ ಕೋಡಿಹಳ್ಳಿ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ.
ಇದು ರೈತ ಕುಲವನ್ನು ಅವಮಾನಿಸುವ ಸಂಗತಿಯಾಗಿದೆ. ಈ ಬಗ್ಗೆ ಮೇ 28 ರಂದು ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಕಿಡಿಗೇಡಿಗಳು, ಕೋಡಿಹಳ್ಳಿ ಚಂದ್ರಶೇಖರ ಅವರು ಭ್ರಷ್ಟಾಚಾರ ಮಾಡಿದ್ದಾರೆಂದು ಖಳನಾಯಕ ಎಂದು ಬಿಂಬಿಸಿದ್ದು ರೈತ ಕುಲಕ್ಕೆ ಅವಮಾನ ಮಾಡುವ ಸಂಗತಿಯಾಗಿದೆ. ಅಲ್ಲಿ ಕಿಡಿಗೇಡಿಗಳು ಕೋಡಿಹಳ್ಳಿ ಚಂದ್ರಶೇಖರ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಆಗ ಅಲ್ಲಿದ್ದ ರೈತ ಮುಖಂಡರು ಮುಂದೆ ಬಂದಾಗ ಅವರಿಗೆ ಕಪ್ಪು ಮಸಿ ಎರಚಿ ಓಡಿ ಹೋಗಿದ್ದಾರೆ ಎಂದರು.
ಮೇ 30 ರಂದು ಬೆಂಗಳೂರಿನಲ್ಲಿ ಕೆಲವು ರಾಜ್ಯದ ರೈತ ಮುಖಂಡರು ಮತ್ತು ಸತತವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಲು ಕಾರಣೀಕರ್ತರಾದ ರಾಜೇಶ್ ಟಿಕಾಯತ್ ಅವರ ಮೇಲೆ ಮತ್ತೆ ಕಿಡಿಗೇಡಿಗಳು ಕಪ್ಪು ಮಸಿ ಎರಚಿದ್ದಾರೆ. ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕೂಡಲೇ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
ಕೋಡಿಹಳ್ಳಿ ಚಂದ್ರಶೇಖರ ಅವರು ತಪ್ಪು ಮಾಡಿದ್ದಾರೋ, ಇಲ್ಲವೋ ಎಂಬುದನ್ನು ನೋಡಿಕೊಳ್ಳಲು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ, ಕಾನೂನು ವ್ಯವಸ್ಥೆ ಇದೆ. ರೈತ ಸಂಘಟನೆಗಳು ಒಗ್ಗಟ್ಟಾಗಿ ಇರೋಣ. ನ್ಯಾಯಕ್ಕಾಗಿ ಹೋರಾಟ ಮಾಡುವಂಥ ಸಂಘಟನೆ ನಮ್ಮದು. ರೈತರು ಯಾವುದೇ ರೀತಿಯಲ್ಲಿ ಗೊಂದಲ ಉಂಟು ಮಾಡದೇ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಒಗ್ಗಟ್ಟಾಗಿರೋಣ ಎಂದರು.
ಬಸವರಾಜ ಕುಪ್ಪೇಲೂರು, ಕುಮಾರಸ್ವಾಮಿ ಪಾಟೀಲ, ರುದ್ರಗೌಡ ಪಾಟೀಲ, ಸಿದ್ದಲಿಂಗಪ್ಪ ಹಲಗೇರಿ, ಸಂಜೀವರಡ್ಡಿ ಎರೆಹೊಸಳ್ಳಿ, ಸಂತೋಷ ಆಡೂರು, ಶಿವನಗೌಡ ಪಾಟೀಲ, ನಿಂಗಪ್ಪ ಕರಡೆಣ್ಣನವರ, ಮೈಲಪ್ಪ ಗಡ್ಡಿ, ಕೆಂಚಪ್ಪ ನಂದ್ಯಾಲ ಇದ್ದರು.