ಕೊಪ್ಪಳ: ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಎದುರಾಗಿದ್ದು, 2017-18 ಹಾಗೂ 2018-19ನೇ ಸಾಲಿನ ಬೆಳೆವಿಮೆ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಈ ಹಿಂದಿನ ವರ್ಷ ಮಳೆಯ ಕೊರತೆಯಿಂದ ನಮ್ಮ ಬೆಳೆಯಲ್ಲವೂ ಹಾಳಾಗಿ ಹೋಗಿದೆ. ಬೆಳೆ ಹಾನಿಯಾದರೆ ರೈತರಿಗೆ ಬೆಳೆ ವಿಮೆಯಾದರೂ ಕೈ ಹಿಡಿಯಲಿದೆ ಎಂಬ ದೃಷ್ಟಿಯಿಂದ ಬೆಳೆವಿಮೆ ಮಾಡಿಸಿದ್ದೇವೆ. ಆದರೆ ಸರ್ಕಾರವು ನಮಗೆ ವಿಮೆ ಮೊತ್ತ ಬಿಡುಗಡೆ ಮಾಡುತ್ತಿಲ್ಲ. ಪ್ರತಿ ಬಾರಿಯೂ ಒಂದಿಲ್ಲೊಂದು ಕಾರಣ ಹೇಳುತ್ತಿದೆ. ಇದರಿಂದ ನಮಗೆ ಸಾಕಾಗಿ ಹೋಗಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಯಾರೊಬ್ಬರೂ ನಮಗೆ ಸ್ಪಂದಿಸುತ್ತಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ವಿಮೆ ತುಂಬಿಸಿಕೊಳ್ಳುವಾಗ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ರೈತರಿಗೆ ಮಾಹಿತಿ ನೀಡುತ್ತಾರೆ. ವಿಮೆ ತುಂಬಿದ ಬಳಿಕ ಸಕಾಲಕ್ಕೆ ವಿಮೆ ಮೊತ್ತ ಕೊಡಿಸಿ ಎಂದರೆ ಯಾರೊಬ್ಬರು ನಮ್ಮ ಮನವಿ ಆಲಿಸುತ್ತಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ರಾಜ್ಯಮಟ್ಟದ ಅಧಿಕಾರಿಗಳತ್ತ ಕೈತೋರಿಸಿ ಸುಮ್ಮನಾಗುತ್ತಿದ್ದಾರೆ. ಇದರಿಂದ ನಾವು ನಿತ್ಯ ಕಚೇರಿಗೆ ಬಂದು ವಿಮೆ ಬಂದಿದೆಯಾ ಎಂದು ಕೇಳಿ ಹೋಗುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಒತ್ತಾಯಿಸಲಾಯಿತು.
ಜಿಲ್ಲೆಯಲ್ಲಿ ಬಾಕಿ ಇರುವ 2018-19ರ ಮುಂಗಾರು ಹಾಗೂ ಹಿಂಗಾರು ಬೆಳೆ ವಿಮೆ ಬಿಡುಗಡೆ ಮಾಡಬೇಕು. ಇನ್ನೂ 2016-17ನೇ ಸಾಲಿನಲ್ಲಿ ಕೆಲವೊಂದು ರೈತರಿಗೆ ವಿಮೆ ಮೊತ್ತ ಖಾತೆಗೆ ಜಮೆಯಾಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ರೈತರಿಗೆ ಹಣ ಜಮೆ ಮಾಡಲು ಕ್ರಮ ಕೈಗೊಳ್ಳಬೇಕು. ಬರದ ಪರಿಸ್ಥಿತಿಯಲ್ಲೂ ಅಲ್ಪ ನೀರಿನಲ್ಲಿಯೇ ಬೆಳೆ ಬೆಳೆಯಲಾಗುತ್ತಿದ್ದು, ಆದರೆ ಕಪಿಗಳು ಸೇರಿ ವನ್ಯ ಪ್ರಾಣಿಗಳು ಬೆಳೆಯನ್ನೆಲ್ಲ ಹಾಳು ಮಾಡುತ್ತಿವೆ. ಬೆಳೆ ಹಾನಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ಕೋಳೂರು ಪ್ರತಿಭಟನೆ ನೇತೃತ್ವ ವಹಿಸಿದ್ದರು.