ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಭಾರಿ ಬಂಪರ್ ಭತ್ತದ ಬೆಳೆ ಬಂದಿದ್ದು ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.
ಈಗಾಗಲೇ ವಿಜಯನಗರ ಕಾಲುವೆಗಳು ಮತ್ತು ಮೇಲ್ಭಾಗದ ರೈತರು ಭತ್ತದ ಕಟಾವು ಮಾಡಿದ್ದು, ಎಕರೆ 45-52 ಚೀಲ (75ಕೆಜಿ) ಇಳುವರಿ ಬಂದಿದೆ.ಕಳೆದ ನಾಲ್ಕೈದು ವರ್ಷಗಳಿಂದ ಅಚ್ಚುಕಟ್ಟು ಪ್ರದೇಶದ ರೈತರು ಮಳೆಯ ಕೊರತೆಯಿಂದ ಒಂದೇ ಬೆಳೆ ಬೆಳೆದಿದ್ದರು.
ಈ ವರ್ಷ ಮುಂಗಾರು ಅತ್ಯುತ್ತಮವಾಗಿದ್ದರಿಂದ ಕ್ರಿಮಿನಾಶಕ ರಸಗೊಬ್ಬರ ಬಳಕೆ ಮಾಡದೇ ರೈತರು ಉತ್ತಮವಾಗಿ ಬೆಳೆದಿದ್ದಾರೆ.ಈಗಾಗಲೇ ವಿಜಯನಗರ ಕಾಲುವೆಗಳ ವ್ಯಾಪ್ತಿ ಮತ್ತು ಪಂಪ್‌ಸೆಟ್ ಮೂಲಕ ಬೆಳೆದ ಭತ್ತದ ಶೇ.25 ಭತ್ತದ ಕಟಾವು ಮುಕ್ತಾಯವಾಗಿದೆ. ಈಗಾಗಲೇ ಭತ್ತವನ್ನು ರೈತರು ಮಾರುಕಟ್ಟೆಗೆ ತರುತ್ತಿದ್ದು, 75 ಕೆಜಿ ಚೀಲಕ್ಕೆ ಮೊದಲು 1590 ರೂ. ಇದ್ದ ದರ ಪ್ರಸ್ತುತ 1400 ರೂ.ಗೆ ಕುಸಿತ ಕಂಡಿದೆ. ಇನ್ನೂ ಶೇ.75 ಭತ್ತ ಕಟಾವು ಮಾಡುವುದೊಂದೇ ಬಾಕಿ ಇದ್ದು, ಬಹುತೇಕ ರೈತರು ಇದೇ ವಾರದಲ್ಲಿ ಭತ್ತ ಕಟಾವು ಮಾಡಿ ಮಾರುಕಟ್ಟೆಗೆ ತರುವುದರಿಂದ ಮತ್ತಷ್ಟು ದರ ಕುಸಿಯುವ ಸಂಭವವಿದೆ.
ಕೇಂದ್ರ ಸರಕಾರ ಭತ್ತಕ್ಕೆ(ಸೋನಾಮಸೂರಿ 100ಕೆಜಿ) ಕ್ವಿಂಟಲ್ ಗೆ 1835 ರೂ. ಬೆಂಬಲ ದರ ಘೋಷಣೆ ಮಾಡಿದೆ. ಸ್ಥಳೀಯ ಎಪಿಎಂಸಿಯಲ್ಲಿ 75 ಕೆಜಿ ಸೋನಾ ಮಸೂರಿ ಭತ್ತಕ್ಕೆ 1376 ರೂ.ದರ ನೀಡಲಾಗುತ್ತಿದೆ. ಸದ್ಯ ಶೇ.25 ರೈತರು ಭತ್ತ ಕಟಾವು ಮಾಡಿ ಮಾರಾಟ ಮಾಡುತ್ತಿದ್ದು, ಪ್ರಸ್ತುತ ಇರುವ ದರ ಮುಂಬರುವ ದಿನಗಳಲ್ಲಿ ಇರುವುದು ಖಚಿತವಿಲ್ಲ. ನಾಲ್ಕೈದು ವರ್ಷಗಳಿಂದ ಒಂದೇ ಬೆಳೆ ಬೆಳೆದಿರುವುದರಿಂದ ಭೂಮಿ ಉತ್ತಮ ಫಲವತ್ತತೆ ಇರುವ ಕಾರಣ ಎಕರೆಗೆ 45-52 ಚೀಲ ಭತ್ತದ
ಇಳುವರಿ ಬರುತ್ತಿದೆ. ಕೇಂದ್ರ ಸರಕಾರ ಘೋಷಿಸಿರುವ ಬೆಂಬಲ ಬೆಲೆ ಸೋನಾ ಮಸೂರಿ (100ಕೆಜಿ)ಗೆ 1835 ರೂ. ಇದ್ದು ಇದಕ್ಕಿಂತ ಕಡಿಮೆಯಾಗುವ ಸಂಭವಇರುವುದರಿಂದ ಕೂಡಲೇ ಜಿಲ್ಲಾಡಳಿತ ಗಂಗಾವತಿ, ಕಾಟರಗಿ, ಸಿದ್ದಾಪೂರ, ಶ್ರೀರಾಮನಗರದಲ್ಲಿ ಭತ್ತದ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ ಕೇಳಿ ಬರುತ್ತಿದೆ.
ಸದ್ಯ ಸೋನಾಮಸೂರಿ ಭತ್ತಕ್ಕೆ (100ಕೆಜಿ) 1835 ರೂ.ಬೆಲೆ ನಿಗದಿ ಮಾಡಲಾಗಿದೆ. ಡಿಸೆಂಬರ್ ಮೊದಲ ವಾರ ಮಾರುಕಟ್ಟೆಗೆ ಇನ್ನಷ್ಟು ಭತ್ತ ಬರುವ ನಿರೀಕ್ಷೆ ಇದೆ. ಬೆಂಬಲ ಬೆಲೆಗಿಂತ ಭತ್ತದ ಖರೀದಿ ಬೆಲೆ ಕುಸಿತ ಕಂಡರೆ ಕೂಡಲೇ ಜಿಲ್ಲಾ ಧಿಕಾರಿಗಳಿಗೆ ಪತ್ರ ಬರೆದು ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರ ಆರಂಭಿಸಲು ಮನವಿ ಮಾಡಲಾಗುತ್ತದೆ. ಕಳೆದ ವಾರ ಇದ್ದ ಭತ್ತದ ಬೆಲೆ ಪ್ರಸ್ತುತ ಇಲ್ಲ. ಇದು ಹೀಗೆ ಮುಂದುವರಿದರೆ ಮಾತ್ರ ಭತ್ತ ಖರೀದಿ ಕೇಂದ್ರ ಆರಂಭಿಸಲು ಮನವಿ ಮಾಡಲಾಗುತ್ತದೆ. ಜಿಲ್ಲಾಧಿ ಕಾರಿಗಳನೇತೃತ್ವದ ಜಿಲ್ಲಾ ಮಟ್ಟದ ಕಮೀಟಿ ಖರೀದಿಕೇಂದ್ರ ಆರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತದೆ. –
ಗುರುಪ್ರಸಾದ, ಕಾರ್ಯದರ್ಶಿ, ಎಪಿಎಂಸಿ.
-ಕೆ.ನಿಂಗಜ್ಜ