Advertisement
ಕಳೆದ ನಾಲ್ಕು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೆ ಬರಗಾಲ ಅನುಭವಿಸಿರುವ ರೈತರು, ಈ ವರ್ಷ ಸಕಾಲದಲ್ಲಿ ಅಂದರೆ ಜುಲೈ ತಿಂಗಳು ವರೆಗೂ ಮುಂಗಾರು ಮಳೆ ಮಳೆಯಾಗದೆ ಚಿಂತಾಕ್ರಾಂತರಾಗಿದ್ದರು. ಕಳೆದ 15-20 ದಿನಗಳಿಂದ ಒಂದಿಷ್ಟು ಮಳೆಯಾಗುತ್ತಿದ್ದು, ಈಗಷ್ಟೇ ರೈತರು ಜಮೀನು ಹಸನುಗೊಳಿಸಿ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಇಂಥ ಸಂದರ್ಭದಲ್ಲೀಗ ರೈತರಿಗೆ ಈಗ ಜಿಂಕೆ, ಕೃಷ್ಣಮೃಗಗಳ ಹಾವಳಿ ರೈತರನ್ನು ಕಾಡುತ್ತಿದೆ.
Related Articles
Advertisement
ಹಗಲು ವೇಳೆಯಲ್ಲಿ ಅಷ್ಟಾಗಿ ಹೊರಗಡೆ ಕಾಣಿಸಿಕೊಳ್ಳದ ಈ ಜಿಂಕೆ, ಕೃಷ್ಣಮೃಗಗಳು ಬೆಳಗಿನ ಜಾವ ಹಾಗೂ ಸಂಜೆ ಮಾತ್ರ ಪೊದರಿನಿಂದ ಹೊರಬಂದು ಆಹಾರಕ್ಕಾಗಿ ಹೊಲಗಳತ್ತ ದಾಳಿ ಇಡುತ್ತವೆ. ಹೊಲದಲ್ಲಿ ಈಗಷ್ಟೆ ಭೂಮಿಯಿಂದ ಹೊರ ಏಳುತ್ತಿರುವ ಚಿಗುರು ಬೆಳೆಯೇ ಅವುಗಳಿಗೆ ಇಷ್ಟವಾದ ಆಹಾರವಾಗಿದೆ. ಹಾಗಾಗಿ ರೈತರು ಚಿಗುರು ಬೆಳೆಯನ್ನು ಕಾಪಾಡಿಕೊಳ್ಳಲು ಹರಸಾಹಸಪಡಬೇಕಾಗಿದೆ.
ಬೆಳೆ ಸ್ವಲ್ಪ ದೊಡ್ಡದಾಗಿ ಸಸಿಯಾದರೆ ಈ ಪ್ರಾಣಿಗಳು ತಿನ್ನುವುದಿಲ್ಲ. ಹೀಗಾಗಿ ರೈತರು ಈ ಚಿಗುರು ಹಂತದಲ್ಲಿ ಹಗಲು ರಾತ್ರಿ ಎನ್ನದೇ ಜಿಂಕೆ, ಕೃಷ್ಣಮೃಗಗಳನ್ನು ಓಡಿಸುವ ಕೆಲಸದಲ್ಲಿ ತೊಡಗಬೇಕಿದೆ.
ಬೆದರಿಸದ ಗೊಂಬೆ: ಇನ್ನು ಕೆಲವರು ಜಿಂಕೆ ಹಾಗೂ ಕೃಷ್ಣಮೃಗಗಳ ಹಾವಳಿ ನಿಯಂತ್ರಿಸಲು ಹೊಲಗಳಲ್ಲಿ ಅಲ್ಲಲ್ಲಿ ಬೆದರುಗೊಂಬೆಗಳನ್ನು ನಿಲ್ಲಿಸುತ್ತಾರೆ. ಮನುಷ್ಯ ನಿಂತಂತೆ ಗೋಚರಿಸುವುದರಿಂದ ಸ್ವಲ್ಪಮಟ್ಟಿನ ಜಿಂಕೆಗಳ ಹಾವಳಿ ತಪ್ಪುತ್ತದೆ. ಆದರೆ, ಮನುಷ್ಯನ ವಾಸನೆ ಬಾರದೆ, ಗೊಂಬೆಗಳ ಮೇಲೆ ಪಕ್ಷಿಗಳು ಕೂತಿದ್ದನ್ನು ಕಂಡರೆ ಜಾಣ ಜಿಂಕೆಗಳು ನಿರ್ಭಯವಾಗಿ ಆ ಜಮೀನಿಗೆ ದಾಳಿಯಿಟ್ಟು ಚಿಗುರು ಬೆಳೆ ಮೇಯುತ್ತವೆ.
ಅರಣ್ಯರೋದನ: ಈ ಭಾಗದಲ್ಲಿ ಪ್ರತಿವರ್ಷ ಜಿಂಕೆ ಹಾವಳಿ ಮಾಮೂಲು. ನೂರಾರು ಜಿಂಕೆಗಳು ನೂರಾರು ಎಕರೆ ಜಮೀನಿನಲ್ಲಿರು ಚಿಗುರು ಬೆಳೆ ಹಾನಿ ಮಾಡುತ್ತವೆ. ಜಿಂಕೆಗಳನ್ನು ಹಿಡಿದು ರಾಣಿಬೆನ್ನೂರು ಹತ್ತಿರ ಇರುವ ಕೃಷ್ಣಮೃಗಧಾಮಕ್ಕೆ ಸಾಗಿಸಬೇಕು. ತನ್ಮೂಲಕ ರೈತರ ಬೆಳೆ ರಕ್ಷಣೆಗೆ ಸಹಕರಿಸಬೇಕು ಎಂದು ರೈತರು ಹತ್ತಾರು ಬಾರಿ ಅರಣ್ಯಾಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನ ಮಾತ್ರ ಶೂನ್ಯ. ಮನವಿ, ಪ್ರತಿಭಟನೆ, ರಸ್ತೆತಡೆಗೆ ಕಿವಿಗೊಡದ ಅರಣ್ಯ ಇಲಾಖೆ ಜಾಣಕಿವುಡು ಮೆರೆಯುತ್ತಿದ್ದರೆ ರೈತರದ್ದು ಅಕ್ಷರಶಃ ಅರಣ್ಯರೋದನವಾಗಿದೆ.
ಸರ್ಕಾರಕ್ಕೆ ಪ್ರಸ್ತಾವನೆ:
ಇಲಾಖೆಯಲ್ಲಿ ಶೇ.50ರ ಸಹಾಯಧನದಲ್ಲಿ ತಂತಿಬೇಲಿ ಹಾಕಿಕೊಳ್ಳಲು ಅವಕಾಶವಿದೆ. ಆದರೆ, ಯಾವ ರೈತರೂ ಹಣ ಖರ್ಚು ಮಾಡಿ ತಂತಿ ಬೇಲಿ ಹಾಕಿಕೊಳ್ಳಲು ಮುಂದಾಗುತ್ತಿಲ್ಲ. ಹೀಗಾಗಿ ಆನೆ ಕಾರಿಡಾರ್ ಮಾದರಿಯಲ್ಲಿ ಜಿಂಕೆಗಳಿಗೂ ಪೂರ್ಣ ಪ್ರಮಾಣದಲ್ಲಿ ಸರ್ಕಾರವೇ ಜಿಂಕೆ ಇರುವ ಪ್ರದೇಶಕ್ಕೆ ಬೇಲಿ ಹಾಕುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. •ಅರಣ್ಯ ಸಂರಕ್ಷಣಾಧಿಕಾರಿ
ಅರಣ್ಯ ಇಲಾಖೆ ನಿರ್ಲಕ್ಶ್ಯ:
ಸಕಾಲಕ್ಕೆ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನು ತಡವಾಗಿಯಾದರೂ ಒಂದಿಷ್ಟು ಮಳೆಯಾಗುತ್ತಿದ್ದು ಅದನ್ನು ನಂಬಿ ಬಿತ್ತನೆ ಮಾಡಿದರೆ ಜಿಂಕೆಗಳ ಕಾಟ ರೈತರನ್ನು ಕಾಡುತ್ತಿದೆ. ಬೆಳೆ ಮೊಳಕೆಯೊಡುವ ಸಂದರ್ಭದಲ್ಲಿಯೇ ಜಿಂಕೆ. ಕೃಷ್ಣಮೃಗ, ಕಾಡುಹಂದಿ ತಿಂದು ಹಾನಿಯನ್ನುಂಟು ಮಾಡಿದರೆ ರೈತರು ಇನ್ನಷ್ಟು ತೀವ್ರ ತೊಂದರೆಗೊಳಗಾಗುತ್ತಾರೆ. ಆದ್ದರಿಂದ ಜಿಂಕೆಗಳನ್ನು ನಿಯಂತ್ರಿಸಲು ಸಾಕಷ್ಟು ಹೋರಾಟ, ಮನವಿ ಮಾಡಿದ್ದರೂ ಅರಣ್ಯ ಇಲಾಖೆ ಮೌನವಹಿಸಿರುವುದು ಖೇದಕರ ಸಂಗತಿ.•ರಾಮಣ್ಣ ಕೆಂಚಳ್ಳೇರ, ರೈತ ಮುಖಂಡ
•ಎಚ್.ಕೆ. ನಟರಾಜ