Advertisement

ರೈತರೇ ಬೆಳೆ ವಿಮೆ ಯೋಜನೆ ಸದ್ಬಳಸಿಕೊಳ್ಳಿ

03:38 PM Jul 27, 2023 | Team Udayavani |

ಕೋಲಾರ: ಕೇಂದ್ರ ಸರ್ಕಾರದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ, ರೈತರು ತಾವು ಬೆಳೆದ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವ ಪ್ರಯೋಜನವನ್ನು ಜಿಲ್ಲೆಯ ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಪ್ರತಿಯೊಬ್ಬ ರೈತರು ಎಫ್‌ಐಡಿ ಫ್ರೂಟ್ಸ್‌ ಐಡಿಯನ್ನು ಹೊಂದಬೇಕು. ಆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ರೈತ ಸ್ನೇಹಿ ಯೋಜನೆಗಳಿಗೆ ಫಲಾನುಭವಿಗಳಾಗಬೇಕು ಎಂದು ತಿಳಿಸಿದರು.

1.40 ಲಕ್ಷ ರೂ. ವರೆಗೂ ವಿಮೆ: ಪ್ರಕೃತಿ ವಿಕೋಪಗಳಿಂದ ಹೆಚ್ಚಿನ ಮಳೆ, ನೆರೆ ಪ್ರವಾಹಗಳಿಂದ ಬೆಳೆ ಮುಳುಗಡೆ ದೀರ್ಘ‌ಕಾಲದ ತೇವಾಂಶ ಕೊರತೆ ತೀವ್ರ ಬರಗಾಲ ಇವುಗಳಿಂದ ಉಂಟಾಗುವ ನಷ್ಟದ ನಿರ್ಧಾರಣೆ ಯನ್ನು ವೈಯಕ್ತಿಕವಾಗಿ ನಿರ್ಧರಿಸಿ, ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ. ಇಂತಹ ಪ್ರಯೋಜನಕಾರಿ ಯೋಜನೆಗಳನ್ನು ಜಿಲ್ಲೆಯ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕನಿಷ್ಠ ಪ್ರೀಮಿಯಮ್‌ ಮೊತ್ತದಲ್ಲಿ ಗರಿಷ್ಠ ವಿಮೆ ಲಭ್ಯವಾಗುವುದರಿಂದ ಇಂತಹ ಯೋಜನೆಗಳು ರೈತರಿಗೆ ಸಹಕಾರಿಯಾಗಲಿದೆ. ಕೇವಲ ಶೇಕಡ ಎರಡರಷ್ಟು ವಿಮಾ ಕಂತು ತುಂಬಿದಲ್ಲಿ ಗರಿಷ್ಠ ರೂ 1.40ಲಕ್ಷ ರೂ. ವರೆಗೆ ಬೆಳೆ ನಷ್ಟ ವಿಮೆ ಪಡೆಯಬಹುದಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಪಡೆಯದ ರೈತರು ವಿವಿಧ ಬೆಳೆಗಳಿಗೆ ನಿಗದಿಪಡಿಸಿರುವ ವಿಮಾ ಮತ್ತು ವಿಮಾ ಕಂತು ಹಾಗೂ ಘೋಷಣೆಯನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿವಿಧ ಯೋಜನೆಗಳಗೆ ಸರ್ಕಾರದಿಂದ ಸಹಾಯ ಧನ: ಪ್ರಧಾನಮಂತ್ರಿ ಕಿರು ಆಹಾರ ಉದ್ಯಮಗಳ ಔಪಚಾರಿಕೀಕರಣ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಆಹಾರ ಉತ್ಪನ್ನಗಳ ಸಂಸ್ಕರಣೆ ಪ್ರೋತ್ಸಾಹಿ ಸಲು, ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿ ಮಾಡುವ ಸಲುವಾಗಿ ಅಸಂಘಟಿತ ಕಿರು ಆಹಾರ ಉದ್ಯಮಗಳ ಬಲವರ್ಧನೆ ಮತ್ತು ಔಪಚಾರಿಕರಣ ಕ್ಕಾಗಿ ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲೆಯ ವೈಯಕ್ತಿಕ ವ್ಯಕ್ತಿಗಳು ಸ್ವಸಹಾಯ ಸಂಘಗಳು, ಸಹಕಾರ ಸಂಘಗಳು, ರೈತ ಉತ್ಪಾದನಾ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಪಾಲುದಾರ ಸಂಸ್ಥೆಗಳು ಅಥವಾ ಸರ್ಕಾರೇತರ ಸಂಸ್ಥೆಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಈ ಯೋಜನೆ ಅಡಿ ಕೇಂದ್ರ ಸರ್ಕಾರದಿಂದ ಶೇ. 35 ಮತ್ತು ರಾಜ್ಯ ಸರ್ಕಾರದಿಂದ ಶೇ. 15ರಷ್ಟು ಗರಿಷ್ಠ 10 ಲಕ್ಷಗಳವರೆಗೆ ಸಹಾಯಧನ ಪಡೆಯಬಹುದಾಗಿದೆ ಎಂದರು.

Advertisement

ಪರವಾನಗಿ ಕಾಲ ಕಾಲಕ್ಕೆ ನವೀಕರಿಸಿ: ಕೃಷಿ ಪರಿಕರ ಮಾರಾಟಗಾರರಿಗೆ ಅಧಿಕೃತ ಪರವಾನಿಗೆ ಪಡೆದು ಮಾರಾಟ ವ್ಯವಹಾರ ನಡೆಸಬೇಕು. ಅಂತಹ ಪರವಾನಗಿಯನ್ನು ಕಾಲಕಾಲಕ್ಕೆ ನವೀಕರಣ ಮಾಡಿಸಬೇಕು. ವಿವಿಧ ಕೃಷಿ ಪರಿಕರ ಕಾಯ್ದೆಯ ಅನ್ವಯ ನಿಗದಿತ ನಮೂನೆಗಳಲ್ಲಿ ವಹಿವಾಟುಗಳನ್ನು ನಿರ್ವಹಿಸಬೇಕು. ಮಾರಾಟ ಮಳಿಗೆಗಳಲ್ಲಿ ಕಡ್ಡಾಯವಾಗಿ ಪರವಾನಗಿ ರಸಗೊಬ್ಬರದ ಸ್ಥಾನ ವಿವರ ಮತ್ತು ದರ ಪಟ್ಟಿ ಪ್ರದರ್ಶಿಸಬೇಕು. ರೈತರಿಗೆ ನಿಗದಿತ ನಮೂನೆಯಲ್ಲಿ ಅಧಿಕೃತ ನಗದು ರಸೀದಿ ನೀಡಬೇಕು. ಅಂತೆಯೇ ನೋಂದಾಯಿತವಲ್ಲದ ಕೃಷಿ ಪರಿಕರಗಳ ಮಾರಾಟವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ವಿವರಗಳಿದ್ದಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರೂಪಾದೇವಿ, ಉಪ ನಿರ್ದೇಶಕರಾದ ಭವ್ಯರಾಣಿ, ತೋಟಗಾರಿಕೆ ಉಪ ನಿರ್ದೇಶಕರಾದ ಕುಮಾರಸ್ವಾಮಿ, ಕೃಷಿ ಪರಿಕರಗಳ ಮಾರಾಟಗಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next