Advertisement
ಹೇಮಾವತಿ ಜಲಾಶಯ ವ್ಯಾಪ್ತಿಗೆ ಸೇರಿದ ಎಡದಂಡೆ ಮುಖ್ಯ ನಾಲೆ ಮೂಲಕ ರೈತರ ಕೃಷಿ ಜಮೀನುಗಳಿಗೆ ನೀರುಣಿಸಲು ಒಟ್ಟು 17 ವಿತರಣಾ ನಾಲೆಗಳಿವೆ. ಕಳೆದ ಐದು ವರ್ಷಗಳ ಹಿಂದೆ ಸುಮಾರು 9,800 ಕೋಟಿ ರೂ. ವೆಚ್ಚದಲ್ಲಿ ಮುಖ್ಯನಾಲೆಯ ಆಧುನೀಕರಣ ಕಾಮಗಾರಿ ಮಾಡಲಾಗಿದೆ. ಮುಖ್ಯ ನಾಲೆಯ ಅಧುನೀಕರಣಕ್ಕೆ ನೀಡಿದ ಪ್ರಮುಖ್ಯತೆಯನ್ನು ರಾಜ್ಯ ಸರ್ಕಾರ ರೈತರ ಜಮೀನುಗಳಿಗೆ ನೀರು ಹರಿಸುವ ಜೀವನಾಡಿಗಳಾದ ವಿತರಣಾ ನಾಲೆಗಳ ಆಧುನೀಕರಣಕ್ಕೆ ನೀಡಲಿಲ್ಲ. ಇದರ ಪರಿಣಾಮ ವಿತರಣಾ ನಾಲೆಗಳು ಹೂಳು ಮತ್ತು ಗಿಡಗಂಟೆಗಳಿಂದ ಆವೃತ್ತವಾಗಿವೆ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.
Related Articles
Advertisement
ಪೈಪ್‌ಗ್ಳಲ್ಲಿ ಹರಿಯುತ್ತಿಲ್ಲ ನೀರು: ವಿತರಣಾ ನಾಲೆಯಲ್ಲಿ ಎಲ್ಲ ಕಾಮಗಾರಿಗಳನ್ನು ಪೈಪ್‌ಗ್ಳಿಂದ ನಿರ್ಮಿಸಿದ್ದು, ಪೈಪ್‌ಗಳಲ್ಲಿ ಸರಿಯಾಗಿ ನೀರು ಹರಿಯುತ್ತಿಲ್ಲ. ಪೈಪ್‌ಗಳ ಹತ್ತಿರ ನೀರಿನಲ್ಲಿ ತೇಲಿ ಬರುವ ಮರದ ತುಂಡುಗಳು, ಗಿಡಗಂಟೆಗಳು ಸೇರಿಕೊಂಡು ನಾಲೆಯಲ್ಲಿ ಸರಾಗವಾಗಿ ನೀರು ಹರಿಸಲು ತೊಂದರೆಯಾಗಿದೆ. ಇದರಿಂದ ನೀರಿನ ಹರಿವಿನ ವೇಗ ಕಡಿಮೆಯಾಗಿದೆ. ಅಲ್ಲದೆ, ನೀರು ಹೆಚ್ಚು ವಸ್ತುಗಳು ಶೇಖರಣೆಯಾಗಿ ಹೆಚ್ಚಾದ ನೀರು ನಾಲೆ ಏರಿಯ ಮೇಲೆ ಹರಿದು ನಾಲೆಯು ಶಿಥಿಲವಾಗುತ್ತಿದೆ.
ನಾಲೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ರೈತರ ಒತ್ತಡಕ್ಕೆ ಮಣಿದು ಚುನಾವಣಾ ಪೂರ್ವದಲ್ಲಿ ಮಾಜಿ ಸಚಿವ ನಾರಾಯಣಗೌಡ ಅವರು 54ನೇ ವಿತರಣಾ ನಾಲೆಯ ಆಧುನೀಕರಣಕ್ಕೆ ಮುಂದಾಗಿದ್ದರು. ಇದಕ್ಕಾಗಿ ಸುಮಾರು 955 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಿ, ತರಾತುರಿಯಲ್ಲಿ ಟೆಂಡರ್ ಕರೆದು ಪಿ.ಕೆ.ಶಿವರಾಮು ಎಂಬ ಗುತ್ತಿಗೆದಾರರಿಗೆ ವಹಿಸಲಾಯಿತು. ಉದ್ಘಾಟನೆಗೆ ತೋರಿದ ಉತ್ಸಾಹ ಕಾಮಗಾರಿ ಮುಕ್ತಾಯಕ್ಕೆ ತೋರಿಸಲಿಲ್ಲ. ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರ ಅಲ್ಲಲ್ಲಿ ಕಾಮಗಾರಿ ಹೆಸರಿನಲ್ಲಿ ವಿತರಣಾ ನಾಲೆ ಕಿತ್ತುಹಾಕಿ ಆಮೆಗತಿಯಲ್ಲಿ ಕಾಮಗಾಡಿ ಸಾಗುತ್ತಿದೆ. ಈ ಕಾಮಗಾರಿಗೆ ವೇಗ ನೀಡಿ ಶೀಘ್ರದಲ್ಲೇ ಪೂರ್ಣಗೊಳಿಸಿ, ರೈತರ ಬಳಕೆಗೆ ನೀಡಬೇಕು ಎಂದು ಪ್ರಗತಿಪರ ರೈತರಾದ ಕುಂದನಹಳ್ಳಿ ಕುಮಾರಸ್ವಾಮಿ, ಹಿರೀಕಳಲೆ ಬಸವರಾಜು, ಗಣೇಶ್ ಆಗ್ರಹಿಸಿದ್ದಾರೆ.
ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸುವ ಶಕ್ತಿ ಇಲ್ಲದವರು ನಾಲೆಯನ್ನು ಕಿತ್ತು ಹಾಕಿದ್ದಾದರೂ ಏಕೆ?. ರಾಜಕೀಯ ಹಿತಕ್ಕಾಗಿ ನಾಲೆಯನ್ನು ಕಿತ್ತು ರೈತರಿಗೆ ತೊಂದರೆ ನೀಡಲಾಗಿದೆ. ನಾಲೆಯಲ್ಲಿ ನೀರು ಹರಿಸಿದರೂ ಸಿಗದ ಸ್ಥಿತಿಗೆ 54ನೇ ವಿತರಣಾ ನಾಲಾ ವ್ಯಾಪ್ತಿ ರೈತರು ಸಿಲುಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ರೈತರ ಹಿತರಕ್ಷಣೆಗೆ ಮುಂದಾಗಬೇಕು. ●ಕಾರಿಗನಹಳ್ಳಿ ಪುಟ್ಟೇಗೌಡ, ಅಧ್ಯಕ್ಷ, ತಾಲೂಕು ರೈತ ಸಂಘ, ಕೆ.ಆರ್.ಪೇಟೆ
ಮುಂದಿನ ಬೇಸಿಗೆಯವರೆಗೆ ನಾಲೆಯ ಲೈನಿಂಗ್ ಕಾಮಗಾರಿ ನಡೆಸಿ ಪೂರ್ಣಗೊಳಿಸುವುದು ಸಾಧ್ಯವಿಲ್ಲ. ಆದರೆ, ಎಲ್ಲೆಲ್ಲಿ ನೀರು ಪೋಲಾಗುತ್ತದೆಯೋ ಅಲ್ಲ ತಾತ್ಕಾಲಿಕ ಕಾಮಗಾರಿ ನಡೆಸಿ, ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ● ಗುರುಪ್ರಸಾದ್, ಎಂಜಿನಿಯರ್, ಹೇಮಾವತಿ ನಾಲಾ ವಿಭಾಗ
-ಅರುಣ್ ಕುಮಾರ್