ಮೊಳಕಾಲ್ಮೂರು: ಸತತ ಬರಕ್ಕೆ ಸಿಲುಕುವ ತಾಲೂಕಿನಲ್ಲಿ ಈ ಬಾರಿಯೂ ಮಳೆ ಅಭಾವದಿಂದ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ ಸೇರಿದಂತೆ ಇನ್ನಿತರ ಬೆಳೆಗಳು ನೆಲ ಕಚ್ಚಿವೆ. ಕೋಟ್ಯಂತರ ರೂ. ಮೌಲ್ಯದ ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಬಹುತೇಕ ಮಳೆಯಾಶ್ರಿತ ಬೆಳೆಗಳನ್ನೇ ಹೆಚ್ಚು ಬೆಳೆಯಲಾಗುತ್ತದೆ. ಸುಮಾರು 26,800 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ.
Advertisement
ಶೇಂಗಾ, ರಾಗಿ, ಜೋಳ, ಸಜ್ಜೆ, ನವಣೆ, ಹತ್ತಿ, ತೊಗರಿ, ಅಲಸಂದಿ, ಹೆಸರು ಸೇರಿದಂತೆ ಇನ್ನಿತರ ಬೆಳೆಗಳನ್ನು 32,800 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಇತ್ತು. ಬಿತ್ತನೆಗಿಂತ ಪೂರ್ವದಲ್ಲಿ ಉತ್ತಮವಾಗಿ ಹದ ಮಳೆಯಾದ ಪರಿಣಾಮ ಸಾಲ ಮಾಡಿ ಉಳುಮೆ ಮಾಡಿಕೊಂಡು ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ಸಕಾಲಕ್ಕೆ ರೈತರು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ನಂತರದ ದಿನಗಳಲ್ಲಿ ಶೇಂಗಾ ಕಾಯಿ ಕಟ್ಟುವ ಸಮಯದಲ್ಲಿ ಉತ್ತರೆ ಮಳೆ ಬಾರದೆ ಕೈಕೊಟ್ಟ ಪರಿಣಾಮ ಶೇಂಗಾ ಬೆಳೆ ಬಿರು ಬಿಸಿಲಿಗೆ ಒಣಗಿ ಕಮರಿ ಹೋಗಿದೆ. ಕಸಬಾ ಮತ್ತು ದೇವಸಮುದ್ರ ಹೋಬಳಿ ಪ್ರದೇಶದ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಶೇಂಗಾ ಸೇರಿದಂತೆ ರಾಗಿ, ಜೋಳ, ಹತ್ತಿ, ನವಣೆ, ತೊಗರಿ, ಮುಸುಕಿನಜೋಳ ಇನ್ನಿತರ ಬೆಳೆಗಳು ಒಣಗಿ ಹಾನಿಯಾಗಿರುವುದರಿಂದ ಕೋಟ್ಯಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ಸಕಾಲಕ್ಕೆ ಮಳೆ ಬಾರದೆ ಶೇಂಗಾ ಹಾಗೂ ಇನ್ನಿತರ ಬೆಳೆಗಳು ಒಣಗಿ ಹಾನಿಯಾಗಿದೆ.
Related Articles
Advertisement
ತಾಲೂಕಿನಲ್ಲಿ ಮಳೆ ಕೊರತೆಯಿಂದ ಶೇ. 50 ಕ್ಕಿಂತ ಹೆಚ್ಚು ಇಳುವರಿ ನಷ್ಟವಾಗಿದೆ. ಆದ್ದರಿಂದ ಕೃಷಿ ಮತ್ತು ಕಂದಾಯ ಇಲಾಖೆಯವರು ನೀಡಿದ ವರದಿ ಆಧಾರದ ಮೇಲೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮಾ ಕಂಪನಿಯವರು ಕಟಾವಿನ ಮುಂಚೆ ಪರಿಹಾರ ನೀಡಬೇಕು. ನಂತರ ಉಳಿದ ಹಣ ನೀಡಲು ಮುಂದಾಗಲಿ.
ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷರು