Advertisement
ಅಪ್ಪನ ಬೆವರ ಹನಿಯನ್ನೇ ಲೆಕ್ಕ ಇಡುತ್ತಿದ್ದ ಆ ಹುಡುಗ. ಹೊಲದಲ್ಲಿ ಅಪ್ಪ ಪಡುವ ಕಷ್ಟ ನೋಡಿ, ತಾನೂ ಕೆಲವೊಮ್ಮೆ ಹೆಗಲಾಗಿದ್ದಿದೆ. ದಿನವೂ ಬೆವರು ಸುರಿಸಿ ದುಡಿಯುತ್ತಿದ್ದ ಅಪ್ಪನ ಪರಿಶ್ರಮಕ್ಕೆ ಬೆಲೆ ಬರುತ್ತಿದ್ದುದು ವರ್ಷದ ಕೊನೆಯಲ್ಲಿ ಫಸಲು ಕೈಗೆ ಬಂದಾಗಲೇ. ಅದೂ ಕೆಲವೊಮ್ಮೆ ಮಳೆಯ ಕಾರಣದಿಂದಲೋ, ಬರದ ಕಾರಣದಿಂದಲೋ ಫಸಲೆಲ್ಲ ಹುಸಿ ಆಗುತ್ತಿತ್ತು. ಆದರೂ, ಮರು ವರ್ಷ ಅಪ್ಪ ಮತ್ತದೇ ಉತ್ಸಾಹದಲ್ಲಿ ಹೊಲಕ್ಕೆ ಇಳಿಯುತ್ತಿದ್ದ. ಪ್ರತಿ ಬಾರಿ ಪರೀಕ್ಷೆಯಲ್ಲಿ ಸೋತಾಗಲೂ ಅಪ್ಪನ ಶ್ರಮವನ್ನು ನೆನಪಿಸಿಕೊಳ್ಳುತ್ತಿದ್ದ ಗಿರೀಶ್ ಕಲಗೊಂಡ, ಅಪ್ಪನಂತೆಯೇ ಛಲಗಾರ. ಆ ಸ್ವಭಾವವೇ ಅವರನ್ನು ಇಂದು ಐಎಎಸ್ ಪರೀಕ್ಷೆಯಲ್ಲಿ ಪಾಸು ಮಾಡಿದೆ.
Related Articles
ಕರ್ನಾಟಕ ಸರ್ಕಾರ ನಡೆಸುವ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಪಾಸಾದ ಗಿರೀಶ್‌ನನ್ನು ಸರ್ಕಾರವೇ ಫೀ ಭರಿಸಿ ದೆಹಲಿಗೆ ಕೋಚಿಂಗ್‌ಗೆ ಕಳುಹಿಸಿತು. ತಿಂಗಳಿಗೆ 8 ಸಾವಿರ ರೂ. ಸ್ಟೈಪಂಡ್ ಕೂಡಾ ಸಿಗುತ್ತಿತ್ತು. ದೆಹಲಿಯಲ್ಲಿ ವಾಜಿರಾಮ್ ಟ್ರೇನಿಂಗ್ ಸೆಂಟರ್‌ನಲ್ಲಿ ಭರ್ತಿ ಒಂದು ವರ್ಷ ಕೋಚಿಂಗ್ ತೆಗೆದುಕೊಂಡು ಪರೀಕ್ಷೆ ಬರೆದರು ಗಿರೀಶ್. ಅದಕ್ಕೂ ಮೊದಲೇ ಒಮ್ಮೆ ಪರೀಕ್ಷೆ ಬರೆದಿದ್ದ ಅವರು, ಕೋಚಿಂಗ್ ನಂತರದ ಪ್ರಯತ್ನದಲ್ಲೂ ಫೇಲಾಗಿದ್ದರು. ಆಗ ಕಣ್ಮುಂದೆ ಬಂದಿದ್ದು ಅಪ್ಪನ ಚಿತ್ರ. ಒಂದು ವರ್ಷ ವ್ಯರ್ಥವಾಯ್ತಲ್ಲಾ ಅಂತ ಚಿಂತಿಸದೆ, ಮತ್ತೆ ಓದಲು ಪ್ರಾರಂಭಿಸಿದರು. ತಮ್ಮ ಶಿವರಾಜ್, ಪ್ರತಿ ತಿಂಗಳೂ ಹಣ ಕಳಿಸುವುದರ ಜೊತೆಗೆ, ಪ್ರೋತ್ಸಾಹವನ್ನೂ ಪಾರ್ಸೆಲ್ ಮಾಡುತ್ತಿದ್ದ. ದಿನಕ್ಕೆ 10-12 ಗಂಟೆ ಅಭ್ಯಾಸ ಮಾಡಿದ ಗಿರೀಶ್, ಮುಂದಿನ ಪ್ರಯತ್ನದಲ್ಲಿ ಪ್ರಿಲಿಮ್ಸ್ ಪರೀಕ್ಷೆ ಪಾಸು ಮಾಡಿದರು.
Advertisement
ಸೋಲುಗಳಿಂದ ಪಾಠ ಕಲಿತರು…ಅದು ಕೇವಲ ಪ್ರವೇಶ ಪರೀಕ್ಷೆ ಮಾತ್ರ. ನಿಜವಾದ ಸ್ಪರ್ಧೆ ಈಗ ಶುರುವಾಗಿದೆ ಅಂತ ಗಿರೀಶ್‌ಗೆ ಗೊತ್ತಿತ್ತು. ಯಾಕೆಂದರೆ, 5 ಲಕ್ಷ ಜನ ಪ್ರಿಲಿಮ್ಸ್ ಬರೆದರೆ, ಅದರಲ್ಲಿ ಪಾಸ್ ಆಗುವರು 10-15 ಸಾವಿರ ಮಂದಿ ಮಾತ್ರ. ಅದರಲ್ಲಿ 2 ಸಾವಿರ ಜನರಿಗೆ ಮಾತ್ರ ಸಂದರ್ಶನ ನೀಡುವ ಅವಕಾಶ ಸಿಗುತ್ತೆ. ಸಂದರ್ಶನದಲ್ಲಿ ಪಾಸ್ ಆಗುವುದಂತೂ, ಚಕ್ರವ್ಯೂಹ ಭೇದಿಸಿದಂತೆಯೇ. ಆ ಬಾರಿ ಮೇನ್ಸ್ ಪರೀಕ್ಷೆಯನ್ನೂ ಪಾಸು ಮಾಡಿದ ಗಿರೀಶ್ ಕೇವಲ 10 ಅಂಕಗಳಿಂದ ಸಂದರ್ಶನದಲ್ಲಿ ಫೇಲ್ ಆದರು. ಸತತ ಮೂರು ಬಾರಿ ಫೇಲಾದರೂ ಗಿರೀಶ್ ಧೃತಿಗೆಡಲಿಲ್ಲ. ಅಷ್ಟೂ ವರ್ಷದ ಸೋಲುಗಳಿಂದ ಪಾಠ ಕಲಿತಿದ್ದ ಗಿರೀಶ್ ಕೊನೆಗೂ ಭಾರತಕ್ಕೆ 307ನೇ ರ್‍ಯಾಂಕ್ ಪಡೆದರು. ಆ ಡಿ.ಸಿ.ಯನ್ನು ನೋಡಿಯೇ ಡಿಸೈಡ್ ಮಾಡಿದ್ರು…
ಐಎಎಸ್ ಆಫೀಸರ್ ಆಗೋ ಕನಸು ಗಿರೀಶ್‌ರಲ್ಲಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದ್ದಲ್ಲ. ಹೈಸ್ಕೂಲ್‌ನಲ್ಲಿ ಇರುವಾಗಲೇ, ತಾನೊಬ್ಬ ಆಫೀಸರ್ ಆಗಬೇಕು ಅಂತ ಅವರು ಕನಸು ಕಂಡಿದ್ದರು. ಒಮ್ಮೆ ಅವರ ಊರಿಗೆ ಜಿಲ್ಲಾಧಿಕಾರಿಗಳು ಬಂದಿದ್ದರಂತೆ. ಊರಿನ ಜನರೆಲ್ಲ ಅವರಿಗೆ ನೀಡಿದ ಗೌರವವನ್ನು ಗಮನಿಸಿದ ಗಿರೀಶ್, ಅಪ್ಪನಲ್ಲಿ ಕೇಳಿದ್ದರಂತೆ- “ಯಾರಿವರು?’ ಅಂತ. ಆಗ ಅವರ ತಂದೆ- “ಇವರು ಡಿಸ್ಟ್ರಿಕ್ ಕಮಿಷನರ್. ಐಎಎಸ್ ಎಕ್ಸಾಂ ಪಾಸ್ ಮಾಡಿದ್ರ ಇಂಥ ಹುದ್ದೆ ಸಿಗುತ್ತೆ’ ಅಂದಿದ್ದರು. ಕನಸಿನ ಬೀಜ ಎದೆಯಲ್ಲಿ ಬಿದ್ದಿದ್ದು ಆಗಲೇ ಅಂತ ನೆನಪಿಸಿಕೊಳ್ತಾರೆ ಗಿರೀಶ್. ಜೀವನದ ಕಡೆಗಾಲದಲ್ಲಿ, ಅಯ್ಯೋ ನಾನು ಲೈಫಲ್ಲಿ ಏನೂ ಮಾಡ್ಲೆà ಇಲ್ವಲ್ಲ ಅಂತ ಅನ್ನಿಸಬಾರದು. ಗುರಿ ಸಾಧಿಸುವಲ್ಲಿ ಸೋತರೂ ಪರವಾಗಿಲ್ಲ, ಪ್ರಯತ್ನ ಮಾಡಲೇಬೇಕು ಅಂತ ನನ್ನ ತಮ್ಮಂದಿರು ಧೈರ್ಯ ತುಂಬಿದ್ರು. ಅವರ ಆ ಮಾತುಗಳೇ ನನ್ನ ಆತ್ಮವಿಶ್ವಾಸ ಹೆಚ್ಚಿಸಿತು.
ಗಿರೀಶ್ ಕಲಗೊಂಡ ರಂಗನಾಥ ಕಮತರ