Advertisement

ಅಡಿಕೆ ದರ ಇಳಿಕೆ ಯತ್ನಕ್ಕೆ ಕೃಷಿಕರ ಸೆಡ್ಡು

06:15 AM Aug 22, 2017 | |

ವಿಟ್ಲ: ಕೆಲ ಖಾಸಗಿ ವ್ಯಾಪಾರಿಗಳು ಅಡಿಕೆ ದರ ಕುಸಿತಗೊಳಿಸಲು ಯತ್ನಿಸುತ್ತಿದ್ದಾರೆ. ಸಹಕಾರಿ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿರುವ ಖಾಸಗಿ ವ್ಯಾಪಾರಿಗಳು ಅನ್ಯಮಾರ್ಗವನ್ನು ಬಳಸಿ ಮಾರುಕಟ್ಟೆ ಹಿಡಿತವನ್ನು ತಮ್ಮ ಸುಪರ್ದಿಯಲ್ಲಿರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕೃಷಿಕರು ದೂರುತ್ತಿದ್ದಾರೆ. ಆದರೆ ಪಟ್ಟುಬಿಡದ ಕೃಷಿಕರು ಅಡಿಕೆಯನ್ನು ಮಾರುಕಟ್ಟೆಗೆ ಬಿಡುತ್ತಿಲ್ಲ.

Advertisement

ಸೋಮವಾರ ಕ್ಯಾಂಪ್ಕೋ ಸಂಸ್ಥೆಯು ಹಳೆ ಅಡಿಕೆಯನ್ನು ಕೆಜಿಗೆ 273ರಂತೆ ಖರೀದಿಸಿದೆ. ಖಾಸಗಿ ಮಾರುಕಟ್ಟೆಯಲ್ಲಿ 271ರ ದರವನ್ನು ನೀಡಲಾಗಿದೆ. ಹೊಸ ಅಡಿಕೆ ದರ ಕೆಜಿಗೆ 232ರ ಆಸುಪಾಸಲ್ಲಿದೆ. ಒಂದು ವಾರದ ಹಿಂದೆಯೂ ಮಾರುಕಟ್ಟೆಯ ಹಿಡಿತ ಸಾಧಿಸಿದ್ದ ಕೃಷಿಕರು ಹಬ್ಬದ ಸಂಭ್ರಮಕ್ಕಾಗಿ ನಿಲುವು ಸಡಿಲಗೊಳಿಸಿ, ಒಂದೆರಡು ಚೀಲ ಅಡಿಕೆಯನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ.

ದರ ಅಪಮೌಲ್ಯಗೊಳಿಸಲಾಗುತ್ತಿದೆಯೇ?
ಅಡಿಕೆ ದರ ಅಪಮೌಲ್ಯಗೊಳಿಸಲಾಗುತ್ತಿದೆ ಎಂದೂ ಕೃಷಿಕರು ದೂರುತ್ತಿದ್ದಾರೆ. ಉದಾಹರಣೆಗೆ ಕೃಷಿಕರು ಹಳೆ ಅಡಿಕೆಯನ್ನು ವ್ಯಾಪಾರಿಗಳಿಗೆ 273 ರೂ.ಗೆ ದರ ನಿಗದಿಪಡಿಸಿ, ಮಾರಾಟ ಮಾಡಿ, ರಶೀದಿ ಪಡೆದುಕೊಳ್ಳದೇ ಇದ್ದಲ್ಲಿ ಅದನ್ನೇ 232 ರೂ.ಗಳ ಹೊಸ ಅಡಿಕೆ ದರಕ್ಕೆ ಖರೀದಿಸಿದ ದಾಖಲೆ ಸಿದ್ಧಪಡಿಸುತ್ತಾರೆ ಎನ್ನಲಾಗಿದೆ. ಅಥವಾ ಪಟೋರದ ದರಕ್ಕೆ ಅಂದರೆ ಕೆಜಿಗೆ 183 ರೂ.ಗಳ ದರದಲ್ಲಿ ಅಡಿಕೆ ಖರೀದಿಸಿದ ದಾಖಲೆ ಸಿದ್ಧಪಡಿಸಲಾಗುತ್ತದೆ. ಪರಿಣಾಮವಾಗಿ ಅಡಿಕೆ ದರವನ್ನು ಅಪಮೌಲ್ಯಗೊಳಿಸಲಾಗುತ್ತದೆ. ಇದು ಮಾರುಕಟ್ಟೆ ದರದಲ್ಲಿ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಹಕಾರಿ ಸಂಘದ ಪ್ರತಿನಿಧಿಗಳು ಅಭಿಪ್ರಾಯಪಡುತ್ತಾರೆ.

ಅಡಿಕೆ ದರ ಏರಿಕೆ ಖಚಿತ
ಜಿಎಸ್‌ಟಿ ನಿಯಮಗಳನ್ನು ಪಾಲಿಸಿದಲ್ಲಿ ಅಡಿಕೆ ದರ ಏರಿಕೆ ನಿಶ್ಚಿತ. ಹಳೆ ಅಡಿಕೆ ಕೆಜಿಗೆ 280ರಿಂದ ತತ್‌ಕ್ಷಣದಲ್ಲೇ 310ಕ್ಕೇರಿಕೆಯಾಗಬಹುದು. ಹೊಸ ಅಡಿಕೆಯ ದರ 275ಕ್ಕೆ ತಲುಪುವ ಸಾಧ್ಯತೆ ಯಿದೆ. ಅಲ್ಲದೇ ಹಬ್ಬಗಳ ಸರಮಾಲೆ ಆರಂಭವಾಗಿರು ವುದರಿಂದ ಮಾರುಕಟ್ಟೆಗೆ ಅಡಿಕೆ ಆವಕ ಹೆಚ್ಚಾದರೂ ದರದಲ್ಲಿ ಏರಿಕೆಯೇ ಕಂಡುಬರಲಿದೆ ಎಂದು ತಜ್ಞರು ಭವಿಷ್ಯ ನುಡಿಯುತ್ತಾರೆ.

ಅಡಿಕೆ ಸಾಗಾಟಕ್ಕೆ  ಹಿಂದೇಟು?
ಗುಜರಾತ್‌ ಮತ್ತಿತರ ರಾಜ್ಯಕ್ಕೆ ಅಡಿಕೆ ಕಳುಹಿಸಲು ಹೊರರಾಜ್ಯದ ವ್ಯಾಪಾರಿಗಳಿಗೆ ಭಾರೀ ಹಿನ್ನಡೆ ಯಾಗಿದೆ. ಬಾಡಿಗೆ ದರದಲ್ಲಿ ಶೇ.50ರಷ್ಟು ಕುಸಿತ ಕಂಡು ಬಂದಿದ್ದರಿಂದ ಅಡಿಕೆ ಸಾಗಾಟಕ್ಕೆ ಲಾರಿ ಮಾಲಕರು ಆಸಕ್ತಿ ತೋರುವುದಿಲ್ಲ. ಹಿಂದೆ ಲಾರಿ ಮಾಲಕ ರಿಗೆ ಒಂದು ಗೋಣಿ ಚೀಲ ಅಡಿಕೆಗೆ 500 ರೂ. ಗಳ ದರ ಲಭ್ಯವಾಗುತ್ತಿತ್ತು. ಜಿಎಸ್‌ಟಿ ಪರಿಣಾಮ ಕೆಜಿಗೆ 3 ರೂ. ಅಂದರೆ ಒಂದು ಗೋಣಿಚೀಲಕ್ಕೆ 250 ರೂ.ಗಳು ಮಾತ್ರ ಸಿಗುತ್ತದೆ. ಇದು ಭಾರೀ ಹೊಡೆತ ಉಂಟುಮಾಡಿದೆ. ಹಿಂದೆ ಬಿಲ್‌ ಇಲ್ಲದೆ ಅಡಿಕೆ ಸಾಗಾಟ ಮಾಡ ಲಾಗುತ್ತಿತ್ತು. ಇಂದು ಬಿಲ್‌ ಇಲ್ಲದೆ ಅಡಿಕೆ ಸಾಗಾಟ ಮಾಡಲಾಗು ತ್ತಿಲ್ಲ. ಜಿಎಸ್‌ಟಿ ಲೆಕ್ಕಾಚಾರದ ಅಡಿಕೆ ಸಾಗಾಟದಲ್ಲಿ ನಷ್ಟ ವಾಗುತ್ತದೆ ಎಂದು ಲಾರಿ ಮಾಲಕರು ಅಭಿಪ್ರಾಯ ಪಟ್ಟಿದ್ದಾರೆ.

Advertisement

ಜಿಎಸ್‌ಟಿ ಆಪತ್ತಲ್ಲ 
ಕೃಷಿಕರಿಗೆ ಜಿಎಸ್‌ಟಿಯಿಂದ ಆಪತ್ತಿಲ್ಲ. ವ್ಯಾಪಾರಿಗಳು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದಿದ್ದಲ್ಲಿ ಅದರ ಅಡ್ಡಪರಿಣಾಮ ಕೃಷಿಕನಿಗೆ ಆಗುತ್ತದೆ. ಕೆಲ ವ್ಯಾಪಾರಿಗಳು ಇನ್ನೂ ಜಿಎಸ್‌ಟಿ ನೋಂದಣಿ ಮಾಡಿಕೊಂಡಿಲ್ಲ. ಮತ್ತೆ ಕೆಲವರು ನೋಂದಣಿ ಮಾಡಿಕೊಂಡಿದ್ದರೂ ಕೃಷಿಕರಿಗೆ ರಶೀದಿ ನೀಡುತ್ತಿಲ್ಲವೆನ್ನಲಾಗಿದೆ. 

ಕೆಲ ವ್ಯಾಪಾರಿಗಳು ಶೇ. 5 ಜಿಎಸ್‌ಟಿ ಮತ್ತು ಶೇ. 1 ಎಪಿಎಂಸಿ ತೆರಿಗೆ ಯನ್ನು ಕೃಷಿಕರ ಮೊತ್ತದಿಂದ ಕಡಿತ ಗೊಳಿಸುವುದು ಕಂಡು ಬಂದಿದೆ. ಮತ್ತೆ ಕೆಲವರು ಪ್ರಾಮಾ ಣಿಕವಾಗಿ ಶೇ. 5 ಜಿಎಸ್‌ಟಿ ಯನ್ನು ತಾವೇ ಭರಿಸು ತ್ತಿದ್ದಾರೆ. ಅಂತ ಹವರ ಸಂಖ್ಯೆ ಬಹುತೇಕ ಕಡಿಮೆ ಎನ್ನ ಲಾಗು  ತ್ತಿದೆ. ವಾಸ್ತವ ವಾಗಿ ಕೃಷಿಕರ ಮೊತ್ತ ದಿಂದ ಜಿಎಸ್‌ಟಿ ಮುರಿದು ಕೊಳ್ಳುವ ಹಾಗಿಲ್ಲ. ಮಾರುಕಟ್ಟೆ ಸ್ಥಿರತೆಗೆ ಮತ್ತು ದರ ಏರಿಕೆಗೆ ಪೂರಕ ವಾಗಿ ಪ್ರತಿ ಯೊಬ್ಬ ಕೃಷಿಕರೂ ಮಾರಾಟ ಮಾಡಿದ ಅಡಿಕೆಯ ಮೊತ್ತದ ರಶೀದಿಯನ್ನು ವ್ಯಾಪಾರಿ ಗಳಿಂದ ಪಡೆಯಲೇಬೇಕು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ.

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next