ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದಲ್ಲಿ ಉರುಳು ಸೇವೆ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಸೋಮವಾರ ನಗರದ ಮಹಾತ್ಮ ಗಾಂಧೀಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉರುಳು ಸೇವೆ ಆರಂಭಿಸಿದ ರೈತರು ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಮುಖಂಡ ಮಲ್ಲಿಕಾರ್ಜುನ
ಕೆಂಗನಾಳ, ಜಿಲ್ಲೆಯಲ್ಲಿ ರೈತರಿಗೆ ಫಸಲ್ ಬಿಮಾ ಯೋಜನೆ ಅಡಿಯಲ್ಲಿ 105 ಕೋಟಿ ರೂ. ಬಿಡುಗಡೆ ಆಗಿದ್ದರೂ
ಬ್ಯಾಂಕ್ ಅಧಿಕಾರಿಗಳು ರೈತರಿಗೆ ನೀಡದೇ ಸಾಲಕ್ಕೆ ಕಡಿತ ಮಾಡಿಕೊಳ್ಳುವ ಮೂಲಕ ಅನ್ಯಾಯ ಎಸಗುತ್ತಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ರೈತರಿಗೆ ಬೆಳೆ ವಿಮಾ ಹಣ ನೀಡಲು ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಡಳಿತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಇದಲ್ಲದೇ ಕೂಡಲೇ ಜಿಲ್ಲೆಯಲ್ಲಿ ತೊರಗಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರೈತರಿಗೆ ಎಫ್‌ಆರ್‌ಎಫ್
ದರದಂತೆ ಕಬ್ಬಿಗೆ ಬೆಲೆ ನೀಡಬೇಕು. ಈರುಳ್ಳಿ, ಕಡಲೆ ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ
ಖರೀದಿಸಬೇಕು. ಮತ್ತೂಂದೆಡೆ ತಾವು ತರಕಾರಿ ಮಾರಲು ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು
ಎಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಬಸನಗೌಡ ಧರ್ಮಗೊಂಡ, ಪ್ರಧಾನ ಕಾರ್ಯದರ್ಶಿ ನಿಂಗರಾಜ ಆಲೂರ, ಸಿದ್ದಪ್ಪ ಇಂಗಳೇಶ್ವರ, ತಿರುಪತಿ ಬಂಡಿವಡ್ಡರ, ಬಾಪುಗೌಡ ಬಿರಾದಾರ, ಸಾಬಣ್ಣ ಅಂಗಡಿ, ಸಿದ್ದರಾಯ ಜಂಗಮಶೆಟ್ಟಿ, ದುಂಡಪ್ಪ ಕೊರಬು, ಗಿರೀಶ ಹಿರೇಮಠ, ಸಿದ್ದನಗೌಡ ಬಿರಾದಾರ, ಗುರುಗೌಡ ಬಿರಾದಾರ, ಶಿವಪ್ಪ ಪಾಟೀಲ, ಹನುಮಂತ ವಡ್ಡರ, ಸಿದ್ದಪ್ಪ ನಾಟೀಕಾರ, ಸುರೇಶ ವಡ್ಡರ, ಅರ್ಜುನ ಗೊಳಪ್ಪಗೋಳ, ಸುನೀಲಗೌಡ ಬಿರಾದಾರ, ಸಮೀರ ತೊರವಿ, ಮಹಿಬೂಬ ಟಕ್ಕೆ, ಸಂತೋಷ ಬಿರಾದಾರ ಇದ್ದರು.