ಆಲಮಟ್ಟಿ: ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಯ ಮೂಲಕ ದೇವರಹಿಪ್ಪರಗಿ ತಾಲ್ಲೂಕಿನ ವಿವಿಧ ಕೆರೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಬೊಮ್ಮನಜೋಗಿಯ ರೈತರು ಸೋಮವಾರ ಆಲಮಟ್ಟಿಯ ಕೃಷ್ಣಾ ಭಾಗ್ಯಜಲ ನಿಗಮದ ಮುಖ್ಯ ಅಭಿಯಂತರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬೊಮ್ಮನಜೋಗಿ ಕೆರೆ ಭರ್ತಿಗೆ ಆಗ್ರಹಿಸಿ, ಈಗಾಗಲೇ ಈ ಕುರಿತು ಹಲವಾರು ಬಾರಿ ಆಲಮಟ್ಟಿಗೆ ಆಗಮಿಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರೂ ನಮ್ಮ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಆರೋಪಿಸಿದರು.
ಕೃಷ್ಣಾ ಭಾಗ್ಯಜಲ ನಿಗಮದ ಆಲಮಟ್ಟಿ ವಲಯ ಮುಖ್ಯ ಅಭಿಯಂತರ ಆರ್.ಪಿ. ಕುಲಕರ್ಣಿ ಪ್ರತಿಭಟನಾನಿರತರನ್ನು ತಮ್ಮ ಕೊಠಡಿಯೊಳಗೆ ಕರೆಯಿಸಿ, ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆ ವ್ಯಾಪ್ತಿಯ 137ನೇ ಕಿ.ಮೀ.ದಲ್ಲಿ ನಾಗಠಾಣ, ಕೋರವಾರ ಶಾಖಾ ಕಾಲುವೆಯಡಿ ಈ ಕೆರೆಗಳ ಭರ್ತಿ ಮಾಡಬೇಕಿದೆ. ಆದರೆ ಚಿಮ್ಮಲಗಿ ಏತ ನೀರಾವರಿ ಮುಖ್ಯ ಕಾಲುವೆಯ ಕೆಲ ಕಡೆ ಭೂಸ್ವಾಧೀನ ಸಮಸ್ಯೆ ಕಾರಣ ಇನ್ನೂವರೆಗೂ ಕೆಲ ಮೀಟರ್ ಕಾಲುವೆ ನಿರ್ಮಾಣಗೊಂಡಿಲ್ಲ, ಅಲ್ಲಿಯ ರೈತರು ಕಾಲುವೆ ನಿರ್ಮಾಣಕ್ಕೆ ಅಡ್ಡವಾಗಿದ್ದಾರೆ. ಆ ಭೂಸ್ವಾಧೀನ ಸಮಸ್ಯೆ ಇನ್ನೂ ಬಗೆಹರಿದಿಲ್ಲ, ಅದಕ್ಕಾಗಿ ವಿಜಯಪುರ ಮುಖ್ಯ ಕಾಲುವೆಯ ಮೂಲಕ ದೇವರಹಿಪ್ಪರಗಿ ತಾಲೂಕಿನ ಕೆರೆಗಳ ಭರ್ತಿ ಕ್ರಮ ಕೈಗೊಳ್ಳಲಾಗಿದೆ. ದೇವರಹಿಪ್ಪರಗಿ ಭಾಗದ ಕೆರೆಗಳ ಭರ್ತಿಗೆ ಮಂಗಳವಾರವೇ ಖುದ್ದು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಆಲಮಟ್ಟಿ ಅಣೆಕಟ್ಟು ವೃತ್ತ ಪ್ರಭಾರಿ ಅಧೀಕ್ಷಕ ಅಭಿಯಂತರ ಬಿ.ಎಸ್. ಪಾಟೀಲ, ಆಲಮಟ್ಟಿ ಎಡದಂಡೆ ಕಾಳುವೆ ಕಾರ್ಯಪಾಲಕ ಅಭಿಯಂತರ ಎಂ.ಸಿ. ಛಬ್ಬಿ, ಅಧೀಕ್ಷಕ ಅಭಿಯಂತರ ಕಚೇರಿಯ ತಾಂತ್ರಿಕ ಸಹಾಯಕ ವಿ.ಜಿ. ಕುಲಕರ್ಣಿಯವರು ಕಾಳುವೆ ತೋಡಲು ಆಗಿರುವ ಸಮಸ್ಯೆಗಳನ್ನು ವಾಸ್ತವ ಸ್ಥಿತಿ ಕುರಿತು ರೈತರಿಗೆ ಮನವರಿಕೆ ಮಾಡಿದರು.
ರೈತರಾದ ರಾಮಚಂದ್ರ ಬಡಿಗೇರ, ಕಲ್ಲಪ್ಪ ಮೂಲಿಮನಿ, ಬಸವರಾಜ ಕಲ್ಲೂರ, ಚನ್ನು ಹೊರ್ತಿ, ಅಪ್ಪಣ್ಣ ಮೆಳ್ಳಿಗೇರಿ, ಅಶೋಕ ಸೂಳಿಭಾವಿ, ಬಸನಗೌಡ ಬಿರಾದಾರ, ಸಿದ್ಧನಗೌಡ ಬಿರಾದಾರ, ಮುಕ್ಕಣ್ಣ ಬಿರಾದಾರ, ಶಂಕರಗೌಡ ಬಿರಾದಾರ, ಆರ್.ಎನ್. ಪಾಟೀಲ, ಸುರೇಶಗೌಡ ಪಾಟೀಲ ಇದ್ದರು.