ಚಂಡೀಗಡ: ರಾಷ್ಟ್ರ ರಾಜಧಾನಿ ಗಡಿ ಪ್ರದೇಶದ ಸಿಂಘು, ಟಿಕ್ರಿ ಹಾಗೂ ಗಾಜಿಯಾಬಾದ್ ಗಡಿ ಪ್ರದೇಶಗಳಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು, ಶನಿವಾರದಂದು ಹರ್ಯಾಣದ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದು, ಬೆಂಬಲ ಬೆಲೆ ಹಾಗೂ ರೈತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಲಿಖೀತ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಕೈಬಿಡಲು ಗುರುವಾರ ನಿರ್ಧರಿಸಿದ್ದವು.
ಪ್ರತಿಭಟನಾ ಸ್ಥಳದಿಂದ ರೈತರಿದ್ದ ಟ್ರ್ಯಾಕ್ಟರ್‌ಗಳು ಸಾಲಾಗಿ ಹರ್ಯಾಣದತ್ತ ಪ್ರಯಾಣ ಬೆಳೆಸಿದವು. ಇದರಿಂದಾಗಿ, ಚಂಡೀಗಡ-ದೆಹಲಿ, ಜೈಪುರ-ದೆಹಲಿ ಹೆದ್ದಾರಿಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮನೆಗಳಿಗೆ ತೆರಳುತ್ತಿರುವ ರೈತರನ್ನು ಹೆದ್ದಾರಿಗಳಲ್ಲಿ ಸಾಗುತ್ತಿದ್ದ ಸಾರ್ವಜನಿಕರು, ಅಭಿನಂದನೆ ಸಲ್ಲಿಸುತ್ತಿದ್ದುದು ಸಾಮಾನ್ಯವಾಗಿತ್ತು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಸಂಘಟನೆಗಳ ಮುಖ್ಯಸ್ಥ ರಾಕೇಶ್ ಟಿಕಾಯತ್, “ರೈತರಿಂದ ಹೆದ್ದಾರಿ ತೆರವು ಇನ್ನು 3-4 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆಯಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮತಾಂತರ ನಿಷೇಧ ಕಾಯ್ದೆ ಜಾರಿ ಖಚಿತ: ಈಶ್ವರಪ್ಪ
ಹಾಗಾಗಿ, ಶುಕ್ರವಾರದಂದೇ ಈ ವಿಜಯದ ಮೆರವಣಿಗೆ ನಡೆಸಲು ರೈತರು ತೀರ್ಮಾನಿಸಿದ್ದರು. ಆದರೆ, ದೆಹಲಿಯಲ್ಲಿ ಸಶಸ್ತ್ರ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ದಂಪತಿಯ ಅಂತ್ಯಸಂಸ್ಕಾರ ಇದ್ದಿದ್ದರಿಂದ ವಿಜಯದ ಪರೇಡ್ ಅನ್ನು ಶನಿವಾರಕ್ಕೆ ಮುಂದೂಡಲಾಗಿತ್ತು.