ತಿಪಟೂರು: ಸರ್ಕಾರ ಮರು ಕೊಬ್ಬರಿ ನೋಂದಣಿ ಯನ್ನು ಸೋಮವಾರದಿಂದ ಪ್ರಾರಂಭಿಸಿದ್ದು ರೈತರು ಹಾಗೂ ಮಹಿಳೆಯರು, ವಯೋವೃದ್ಧರು, ಅಂಗವಿಕಲರು ಎಪಿಎಂಸಿ ಆವರಣದಲ್ಲಿ ಭಾನುವಾರ ಸಂಜೆಯಿಂದಲೇ ಜಮಾಯಿಸಿದ್ದರು.
ಮುಗಿಬಿದ್ದರು: ಆಯಾ ಹೋಬಳಿ ರೈತರಿಗೆ ಅನುಕೂಲವಾಗಲು ತಿಪಟೂರು ಎಪಿಎಂಸಿ ವ್ಯಾಪ್ತಿಯಲ್ಲಿ ಒಟ್ಟು 7ಖರೀದಿ ಕೇಂದ್ರ ತೆರೆಯಲಾಗಿದೆ. ತಿಪಟೂರು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 4 ಕೇಂದ್ರ ತೆರೆಯಲಾಗಿದ್ದು, ಒಂದು ಕೇಂದ್ರವನ್ನು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ. ಕರಡಾಳು, ಕೊನೇಹಳ್ಳಿ, ಕೆ.ಬಿ.ಕ್ರಾಸ್ ಉಪ ಎಪಿಎಂಸಿ ಮಾರುಕಟ್ಟೆಗಳಲ್ಲಿ ತಲಾ ಒಂದೊಂದು ಕೇಂದ್ರ ತೆರೆಯಲಾಗಿದೆ.
ನೋಂದಣೆ ವಿಷಯ ಮೊದಲೇ ತಮ್ಮ ಗಮನಕ್ಕೆ ಬಂದಿದ್ದರಿಂದ ರೈತರು ಭಾನುವಾರ ಸಂಜೆಯಿಂದಲೇ ಸಂಬಂಧಪಟ್ಟ ಎಪಿಎಂಸಿ ಆವರಣದಲ್ಲಿ ತಮ್ಮ ಪಾದರಕ್ಷೆಗಳನ್ನು ಸರದಿ ಸಾಲಿನಲ್ಲಿ ಬಿಟ್ಟು ಕಾಯುತ್ತಿದ್ದರು. ದೂರದ ಊರುಗಳಿಂದ ಬಂದಿದ್ದವರು ಚಾಪೆ, ಹೊದಿಕೆ ತಂದು ರಾತ್ರಿಪೂರ್ತಿ ಆವರಣದಲ್ಲಿಯೇ ಮಲಗಿದ್ದು, ಸೋಮವಾರ ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಹೆಸರು ನೋಂದಾಯಿಸಲು ಮುಗಿಬಿದ್ದರು.
ರೈತರಿಗೆ ನೆರಳು, ಕುಡಿವ ನೀರು, ನೋಂದಣೆಗೆ ಅವಶ್ಯವಿರುವ ಇಂಟರ್‌ನೆಟ್, ನುರಿತ ಕಂಪ್ಯೂಟರ್ ಆಪರೇಟರ್ ವ್ಯವಸ್ಥೆ ಮಾಡಲಾಗಿದೆ. ಉದ್ದುದ್ದ ಸಾಲುಗಳಲ್ಲಿ ವಯೋವೃದ್ಧರು, ಅಂಗವಿಕಲರು, ಮಹಿಳೆಯರಂತೂ ನಿಂತು ಸುಸ್ತಾಗಿ ಬಿರು ಬಿಸಿಲಿನಲ್ಲಿ ಊಟವಿಲ್ಲದೆ ಯಾತನೆ ಅನುಭವಿಸಿದರು.
ಅವಕಾಶ: ಬೆಂಬಲ ಬೆಲೆಯಡಿ ರೈತರಿಂದ ಉಂಡೆ ಕೊಬ್ಬರಿ ಖರೀದಿಗೆ ಹೆಸರು ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು ರೈತರು ಯಾವ ಕೇಂದ್ರದಲ್ಲಿ ತಮ್ಮ ಹೆಸರು ನೋಂದಾಯಿಸಿರುತ್ತಾರೋ ಅದೇ ಕೇಂದ್ರಕ್ಕೆ ಎಫ್ಎಕ್ಯೂ ಗುಣಮಟ್ಟದ ಕೊಬ್ಬರಿ ಜತೆಗೆ ತಮ್ಮ ಆಧಾರ್ ಕಾರ್ಡ್ ಪ್ರತಿ, ಫ್ರೂಟ್ ಐಡಿಯೊಂದಿಗೆ ಕೊಬ್ಬರಿ ಖರೀದಿಸುವ ದಿನಾಂಕ ತಿಳಿಸಿದಾಗ ತಂದು ಮಾರಾಟ ಮಾಡಬೇಕು. ಪ್ರತಿ ಎಕರೆಗೆ 6 ಕ್ವಿಂಟಲ್, ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಗೆ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ : ಕೊಬ್ಬರಿ ಬೆಲೆ ಕಳೆದ 2-3 ವರ್ಷಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿದ್ದು ಈಗ ನಫೆಡ್ ಮೂಲಕವಾದರೂ ಕ್ವಿಂಟಲ್ ಕೊಬ್ಬರಿಗೆ 13,500 ರೂ.ಗಳಾದರೂ ಸಿಗಲಿದೆ ಎಂಬ ಆಸೆಯಿಂದ ರೈತರು ನೋಂದಣೆಗೆ ಮುಗಿ ಬೀಳುತ್ತಿದ್ದು ಸರದಿ ಸಾಲಿನಲ್ಲಿ ಗಲಾಟೆ, ಘರ್ಷಣೆಗಳಾಗದಂತೆ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ 45 ದಿನಗಳವರೆಗೆ ಕೊಬ್ಬರಿ ನೋಂದಣಿ ಪ್ರಕ್ರಿಯೆ ಹಾಗೂ ಖರೀದಿಗೆ ಅವಕಾಶವಿದ್ದು ಈ ರೀತಿ ಬಂದು ಕಾಯಬೇಡಿ ಎಂದು ಅಧಿಕಾರಿಗಳು ತಿಳಿಸಿದರೂ ರೈತರು ಜಾಗ ಬಿಟ್ಟು ಹೋಗುತ್ತಿಲ್ಲ. ಕಳೆದ ಬಾರಿಯಂತೆ ಎಲ್ಲಿ ನೋಂದಣಿ ಬೇಗ ಮುಗಿಯುತ್ತದೆಯೋ ಎಂಬ ಆತಂಕದಿಂದ ರೈತರು ನೋಂದಣಿ ಮಾಡಿಸಿಕೊಂಡೇ ಹೋಗೋಣ ಎಂದು ಕಾದು ಕುಳಿತಿದ್ದಾರೆ.