ಘಾಜಿಯಾಬಾದ್: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ತಕ್ಷಣವೇ ಹಿಂಪಡೆಯುವುದಿಲ್ಲ ಎಂದು ಭಾರತೀಯ ಕಿಸಾನ್ ಸಂಘ(ಬಿಕೆಯು)ದ ಮುಖಂಡ ರಾಕೇಶ್ ಟಿಕಾಯತ್ ಶುಕ್ರವಾರ(ನವೆಂಬರ್ 19) ತಿಳಿಸಿದ್ದು, ಲೋಕಸಭೆಯಲ್ಲಿ ಮೂರು ಕೃಷಿ ಕಾಯ್ದೆಗಳು ರದ್ದುಗೊಳ್ಳುವವರೆಗೆ ಕಾಯುವುದಾಗಿ ಹೇಳಿದರು.
ಇದನ್ನೂ ಓದಿ:ಭಾರತದಲ್ಲಿ 11,106 ನೂತನ ಕೋವಿಡ್ ಪ್ರಕರಣ ಪತ್ತೆ, 459 ಮಂದಿ ಸಾವು
ಮೂರು ಕೃಷಿ ಕಾಯ್ದೆಗಳು ಲೋಕಸಭೆಯಲ್ಲಿ ರದ್ದುಗೊಂಡ ನಂತರವೇ ಪ್ರತಿಭಟನೆಯನ್ನು ಕೊನೆಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಟಿಕಾಯತ್ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಇತರ ವಿಷಯಗಳ ಕುರಿತು ರೈತರ ಜತೆ ಚರ್ಚಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನಂತರ ರಾಕೇಶ್ ಟಿಕಾಯತ್ ಕೂಡಲೇ ಟ್ವೀಟರ್ ನಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಕೂಡಲೇ ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂಪಡೆಯಲ್ಲ. ಲೋಕಸಭೆಯಲ್ಲಿ ಕೃಷಿ ಕಾಯ್ದೆ ರದ್ದುಗೊಳ್ಳುವ ದಿನದವರೆಗೂ ಕಾಯುತ್ತೇವೆ. ಜೊತೆಗೆ ಬೆಳೆಗೆ ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ರೈತರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು ಎಂದು ತಿಳಿಸಿದ್ದಾರೆ.