Advertisement

ಹಿಂಸೆಗೆ ತಿರುಗಿದ ರೈತರ ಪ್ರತಿಭಟನೆ, ಮುಂದೇನು ದಾರಿ?

01:01 AM Jan 27, 2021 | Team Udayavani |

ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಾ ಬಂದಿದ್ದ ರೈತರ ಪ್ರತಿಭಟನೆಗಳು ಈಗ ಭಿನ್ನ ಆಯಾಮ ಪಡೆದುಬಿಟ್ಟಿವೆ. ಗಣರಾಜ್ಯೋತ್ಸವ ದಿನದಂದೇ ದಿಲ್ಲಿಯಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಹೋರಾಟದ ಉದ್ದೇಶವೇ ಹಾಳಾಗುವ ಹಂತಕ್ಕೆ ಬಂದು ನಿಂತಿದೆ. ಪ್ರತಿಭಟನಕಾರರು ಬಸ್‌ಗಳ ಮೇಲೆ ದಾಳಿ ಮಾಡಿದ್ದು, ಕೆಲವರು ಖಡ್ಗ ಹಿಡಿದು ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಬ್ಯಾರಿಕೇಡ್‌ಗಳನ್ನು ಕಿತ್ತೆಸೆದದ್ದು, ಬ್ಯಾರಿಕೇಡ್‌ಗಳ ಮೇಲೆ ಟ್ರ್ಯಾಕ್ಟರ್‌ ನುಗ್ಗಿಸಲು ಮುಂದಾದದ್ದು, ಪರಿಣಾಮವಾಗಿ ಟ್ರ್ಯಾಕ್ಟರ್‌ ಮಗುಚಿ ಒಬ್ಬ ವ್ಯಕ್ತಿ ಸತ್ತಿದ್ದು ಒಂದೆಡೆಯಾದರೆ, ಕೆಂಪುಕೋಟೆಯ ಮುಂದೆ ಸಿಕ್ಖ್ ಧ್ವಜವನ್ನು ಸ್ಥಾಪಿಸಿದ್ದು ಅತೀದೊಡ್ಡ ತಪ್ಪು. ಧ್ವಜ ಏರಿಸಿದ ಪುಂಡ ಯಾರೋ ಹಿಡಿದಿದ್ದ ರಾಷ್ಟ್ರ ಧ್ವಜವನ್ನು ಕಿತ್ತು ದೂರದಲ್ಲಿ ಎಸೆದ ಕೃತ್ಯವಂತೂ ಅಕ್ಷಮ್ಯ.

Advertisement

ಖಂಡಿತ ಇಂಥ ಹಿಂಸಾತ್ಮಕ ಘಟನೆಗಳು ಹೋರಾಟದ ಹಾದಿಯನ್ನು, ಅದರೆಡೆಗಿನ ಅನುಕಂಪವನ್ನು ಧ್ವಂಸಗೊಳಿಸುತ್ತವೆ. ಗಣರಾಜ್ಯೋತ್ಸವದಂದೂ ಸರಕಾರ ಮತ್ತು ಪೊಲೀಸರು ರೈತರಿಗೆ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದರು. ಎನ್‌ಒಸಿ ಪಾಸ್‌ ಮಾಡಿದ್ದರು. ಆದರೆ ನಿರ್ದಿಷ್ಟ ಮಾರ್ಗದಲ್ಲೇ ಪ್ರತಿಭಟನೆಗಳು ಆಗಬೇಕೆಂದಿದ್ದರೂ, ಪ್ರತಿಭಟನಕಾರರು ಇದನ್ನು ಉಲ್ಲಂ ಸಿದ್ದಾರೆ. “ಸಮಾಜ ವಿರೋಧಿ ಶಕ್ತಿಗಳು ಈ ಪ್ರತಿಭಟನೆಯಲ್ಲಿ ಒಳನುಸುಳಿದ್ದಾರೆ. ಶಾಂತಿಯೇ ನಮ್ಮ ದೊಡ್ಡ ಶಕ್ತಿಯಾಗಿದೆ. ಹಿಂಸೆಯು ನಮ್ಮ ಆಂದೋಲನಕ್ಕೆ ಘಾಸಿ ಮಾಡುತ್ತಿದೆ’ ಎಂದು ಸಂಯುಕ್ತ ಕಿಸಾನ್‌ ಮುಕ್ತಿ ಮೋರ್ಚಾ ಹೇಳುತ್ತಿದೆ. ಆದರೆ ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕಿರುವುದು ಅದರ ಜವಾಬ್ದಾರಿ. ಯಾರೋ ತೂರಿಕೊಂಡಿದ್ದಾರೆ ಎಂದು ಕೈ ತೊಳೆದುಕೊಳ್ಳಬಾರದು. ಹೋರಾಟಗಾರರಿಗೆ, ಅದು ಪ್ರಬಲ ಸಂದೇಶ ಕಳುಹಿಸಲೇಬೇಕಿದೆ.

ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಇದುವರೆಗೂ 11 ಬಾರಿ ಸಭೆ ನಡೆದಿದ್ದರೂ ಯಾವುದೂ ಫ‌ಲಪ್ರದವಾಗಿಲ್ಲ. ಕಾಯ್ದೆಗಳನ್ನು ಒಂದೂವರೆ ವರ್ಷದವರೆಗೆ ಮುಂದೂಡುವ ಪ್ರಸ್ತಾವವನ್ನೂ ಸಂಘಟನೆಗಳು ಒಪ್ಪಿಕೊಂಡಿಲ್ಲ. 3 ಕಾಯ್ದೆಗಳು ರದ್ದಾಗಲೇಬೇಕು, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಾನೂನಿನ ರೂಪದಲ್ಲಿ ಖಾತ್ರಿ ಪಡಿಸಬೇಕು ಎನ್ನುವುದು ಅದರ ವಾದ. ಕೇಂದ್ರ ಈ ಕಾಯ್ದೆಗಳು ರೈತಪರವಾಗಿವೆ ಎಂದೇ ಹೇಳುತ್ತಿದೆ. ಆದರೆ ಯಾವುದೇ ಕಾಯ್ದೆಯಿರಲಿ ಅದರಲ್ಲಿ ಲೋಪಗಳಿರುವುದು ಸಹಜವೇ, ಹೀಗಾಗಿ ಆ ಲೋಪಗಳನ್ನು ಪರಿಹರಿಸುವ ನಿಟ್ಟಿನಲ್ಲೂ ಮಾತುಕತೆಗಳು ನಡೆಯಲೇಬೇಕು. ಕಾಯ್ದೆಗಳು ಬದಲಾವಣೆಯೊಂದಿಗೆ ಅನುಷ್ಠಾನಕ್ಕೆ ಬರುತ್ತವೋ, ರದ್ದಾಗುತ್ತವೋ ಎನ್ನುವುದೂ ಸಹ ಮಾತುಕತೆಯಿಂದಲೇ ಹೊರಬರಬೇಕಾದ ಫ‌ಲಿತಾಂಶ. ಆದರೆ ಆರೋಪ-ಪ್ರತ್ಯಾರೋಪ, ಹಿಂಸಾಚಾರಗಳಿಂದ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗುತ್ತಲೇ ಹೋಗುತ್ತದೆ. ರೈತ ಸಂಘಟನೆಗಳು ಪರಿಸ್ಥಿತಿ ಕೈಜಾರದಂತೆ ಎಚ್ಚರಿಕೆ ವಹಿಸಲೇಬೇಕಿದೆ. ಅನ್ನದಾತರಿಗೆ ಒಳ್ಳೆಯದಾಗಬೇಕೆಂಬುದು ಎಲ್ಲರ ಬಯಕೆ. ಆದರೆ ಯಾವಾಗ ಇಂಥ ಹೋರಾಟಗಳಲ್ಲಿ ಸಮಾಜ ವಿರೋಧಿ ಕೃತ್ಯಗಳು, ರಾಜಕೀಯದ ಮಿಶ್ರಣವಾಗುತ್ತದೋ ಪ್ರಯತ್ನಗಳೆಲ್ಲ ದಾರಿ ತಪ್ಪುತ್ತವೆ. ಈ ಕಾರಣಕ್ಕಾಗಿಯೇ ಆಂದೋಲನದ ಕಿಡಿಯಲ್ಲಿ ಗಳ ಹಿರಿಯಲು ಪ್ರಯತ್ನಿಸುತ್ತಿರುವ ರಾಜಕೀಯ ಪಕ್ಷಗಳನ್ನು, ಸಿದ್ಧಾಂತವಾದಿಗಳನ್ನು ಗುರುತಿಸಿ ದೂರವಿಡುವುದೂ ಅತ್ಯಗತ್ಯ ಎನ್ನುವುದನ್ನು ಅರಿಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next