Advertisement
ಅಖೀಲ ಭಾರತ ರೈತ ಸಂಘರ್ಷ ಸಮಿತಿಕರೆಯ ಮೇರೆಗೆ ರೈತ ಸಂಘಟನೆಗಳು, ಕರ್ನಾಟಕ ಜನಶಕ್ತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಗಳು(ಅಂಬೇಡ್ಕರ್ ವಾದ) ಗುರುವಾರ ನಗರದ ಎಂ.ಅರ್. ಎಸ್.ನಲ್ಲಿ ಹೆದ್ದಾರಿ ಬಂದ್ ಮಾಡಿ ಸರ್ಕಾರಗಳ ವಿರುದ್ಧ ಅಕ್ಷರಶಃ ರಣಕಹಳೆ ಮೊಳಗಿಸಿದವು. ಕೋವಿಡ್ ಲಾಕ್‌ಡೌನ್ ಸಂದರ್ಭ ಬಳಸಿಕೊಂಡು ರೈತರು ಮನೆಯಿಂದ ಹೊರಗಡೆ ಬರದಂತೆ ನಿರ್ಬಂಧ ಹೇರಿ ಜನರ ಬಾಯಿಗೆ ಬಟ್ಟೆ ಕಟ್ಟಿ , ಚರ್ಚೆಗೆ ಅವಕಾಶ ನೀಡದೆ ಸುಗ್ರೀವಾಜ್ಞೆಗಳ ಮೂಲಕ ಕೃಷಿ, ಕಾರ್ಮಿಕ, ಭೂ ಸುಧಾರಣೆ ಕಾಯ್ದೆಗಳನ್ನು ಜಾರಿಗೆ ತಂದಿದೆ. ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜ್ಯದಾದ್ಯಂತ ಅನ್ನದಾತರು ಬೀದಿಗಿಳಿದು ಹೋರಾಟ ನಡೆಸಿದರೂ ಸರ್ಕಾರ ರೈತರ ಕೂಗನ್ನೇ ಕೇಳದೆ ಸರ್ಕಾರ ಜಾಣಕುರುಡತನ ಪ್ರದರ್ಶನ ಮಾಡಿ, ಅನ್ನ ಕೊಡುವ ರೈತರಿಗಿಂತ ಬಂಡವಾಳಶಾಹಿಗಳ ಮಾತಿಗೆ ಬೆಲೆ ಕೊಡುತ್ತಿವೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಟ್ರಾಫಿಕ್ ಜಾಮ್: ಸರ್ಕಾರಗಳ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಹೆದ್ದಾರಿ ಬಂದ್‌ನಿಂದ ಮುಕ್ಕಾಲು ತಾಸಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ರೈತರು, ಕೃಷಿ ಕೂಲಿ ಕಾರ್ಮಿಕರು ರಸ್ತೆಗೆ ಅಡ್ಡ ಕುಳಿತಿದ್ದರು. ಇದರಿಂದ ನಾಲ್ಕು ದಿಕ್ಕಿನಿಂದಲೂ ಬರುವ ವಾಹನಗಳು ಒಂದು ಕಿಮೀವರೆಗೂ ವಾಹನಗಳು ನಿಂತಿದ್ದವು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇದ್ದದ್ದರಿಂದ ಬಸ್ ಗಳು ಸಂಚರಿಸಲು ತೊಂದರೆಯಾದ ಘಟನೆಯೂ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ಅವಕಾಶ ಮಾಡಿಕೊಟ್ಟರು.
ರೈತಸಂಘದ ಮುಖಂಡರಾದ ಎಸ್. ಶಿವಮೂರ್ತಿ, ಇ.ಬಿ. ಜಗದೀಶ್, ಟಿ.ಎಂ. ಚಂದ್ರಪ್ಪ, ಕೆ. ರಾಘವೇಂದ್ರ, ಜ್ಞಾನೇಶ್, ಹಿಟ್ಟೂರು ರಾಜು, ನಾಗರಾಜ್ ಪುರದಾಳ್ ಹಾಗೂ ಪ್ರಮುಖರಾದ ಕೆ.ಎಲ್. ಅಶೋಕ್, ಟಿ.ಎಚ್. ಹಾಲೇಶಪ್ಪ, ಶಿವಕುಮಾರ್ ಇದ್ದರು.