ಶಿವಮೊಗ್ಗ: ಮಾರ್ಚ್ 20ರಂದು ಇಲ್ಲಿನ ಬಿ.ಎಚ್.ರಸ್ತೆಯ ಸೈನ್ಸ್ ಮೈದಾನದಲ್ಲಿ ನಡೆದ ದಕ್ಷಿಣ ಭಾರತದ ಮೊದಲ ರೈತರ ಮಹಾ ಪಂಚಾಯತ್‌ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದ ರೈತರು ಬೆಂಗಳೂರಿಗೆ ದಿಗ್ಬಂಧನ ಹಾಕಬೇಕು. ಟ್ರ್ಯಾಕ್ಟರ್‌ಗಳನ್ನೇ ಅಸ್ತ್ರವಾಗಿ ಬಳಸಬೇಕು ಎಂದು ನೀಡಿದ್ದ ಹೇಳಿಕೆ ಆಧಾರಿಸಿ ಅವರ ವಿರುದ್ಧ ಐಪಿಸಿ ಕಲಂ 153ರ ಅಡಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ರೀತಿಯಲ್ಲೇ ಪ್ರೇರೇಪಿಸುವ ಮಾದರಿಯಲ್ಲಿ ರಾಕೇಶ್ ಟಿಕಾಯತ್ ಅವರು ಭಾಷಣದಲ್ಲಿ ಪ್ರಚೋದಿಸಿದ್ದಾರೆ.ಈ ಭಾಷಣದಲ್ಲಿ ಸಾರ್ವಜನಿಕರು ಉದ್ರೇಕಗೊಂಡು ದೊಂಬಿ ನಡೆಸುವ ಸಾಧ್ಯತೆ ಇದ್ದು,ಉದ್ದೇಶಪೂರ್ವಕವಾಗಿ ಈ ರೀತಿ ಜನರನ್ನು ಪ್ರಚೋದಿಸಿದ್ದಾರೆ ಎಂದು ಕೋಟೆ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಐಕ್ಯ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಂದು ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ರಾಕೇಶ್ ಟಿಕಾಯತ್ ಸೇರಿದಂತೆ ಸಂಯುಕ್ತ ಮೋರ್ಚಾ ನಾಯಕರಾದ ದರ್ಶನ್ ಪಾಲ್, ಯುದ್ಧ್‌ವೀರ್ ಸಿಂಗ್ ಭಾಗವಹಿಸಿದ್ದರು. ಟಿಕಾಯತ್ ವಿರುದ್ಧ ಮಾತ್ರ ಪ್ರಕರಣ ದಾಖಲಾಗಿದೆ.