ಬಾಗಲಕೋಟೆ: ಜಿಲ್ಲೆಯ ತೇರದಾಳ ಸಮೀಪದ ಸಾವರಿನ್ ಸಕ್ಕರೆ ಕಾರ್ಖಾನೆ ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ಬಾಕಿ ಹಣ ಕೊಡಿಸುವಂತೆ ಒತ್ತಾಯಿಸಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಮದಬಾವಿ, ಮಾರಾಪುರ ಮುಂತಾದ ಗ್ರಾಮಗಳ ರೈತರು ಜಿಲ್ಲಾಡಳಿತ ಭವನ ಎದುರು ಕೆಲ ಹೊತ್ತು ಧರಣಿ ನಡೆಸಿ, ಕಬ್ಬಿನ ಬಾಕಿ ಹಣಕ್ಕಾಗಿ ಒತ್ತಾಯಿಸಿದರು.
ಸಾವರಿನ್ ಸಕ್ಕರೆ ಕಾರ್ಖಾನೆಗೆ ಕಳೆದ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ್ದೇವೆ. ಕಾರ್ಖಾನೆಯಿಂದ ಚೆಕ್ ನೀಡಿದ್ದು, ಚೆಕ್‌ಗಳು ಬೌನ್ಸ್ ಆಗಿದೆ. ಬಾಕಿ ಹಣ ಕೊಡುವಂತೆ ಕಾರ್ಖಾನೆಗೆ ತೆರಳಿ ಕೇಳಿದರೆ ಹಣ ಕೊಡುತ್ತಿಲ್ಲ. ಕಳೆದ 9 ತಿಂಗಳಿಂದ ಬಾಕಿ ಹಣಕ್ಕಾಗಿ ಅಲೆದಾಡುತ್ತಿದ್ದೇವೆ. ಕೂಡಲೇ ಹಣ ಕೊಡಿಸಬೇಕು ಎಂದು ಆಗ್ರಹಿಸಿದರು.
ರೈತರ ಮನವಿ ಪಡೆದ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಸಾವರಿನ್ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಾಕಿ ಹಣ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಕ್ಕರೆ ಜಪ್ತಿ ಮಾಡಲು ಹೋದಾಗ, ಗೋಡಾವನ್‌ನಲ್ಲಿ ಸಕ್ಕರೆ ಇರಲಿಲ್ಲ. ಹೀಗಾಗಿ ಕಾರ್ಖಾನೆಯ ಸ್ಥಿರಾಸ್ಥಿ ಜಪ್ತಿ ಮಾಡಿ, ರೈತರ ಬಾಕಿ ಹಣ ಕೊಡಿಸಲಾಗುವುದು. ರೈತರು ಆತಂಕ ಪಡಬಾರದು ಎಂದು ತಿಳಿಸಿದರು.
ರೈತ ಪ್ರಮುಖರಾದ ಅಜೀತ ಹಾದಿಮನಿ, ಸುಭಾಸ, ಬಾಸು ನದಾಫ, ಹುಸೇನಸಾಬ ನದಾಫ, ಅಬ್ದುಲ್ ನದಾಫ, ಹನಮಂತ ಚಿಚಖಂಡಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.