Advertisement

ಸಚಿವ ಜಗದೀಶ್ ಶೆಟ್ಟರ್ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

10:03 AM Sep 21, 2019 | Sriram |

ಬೆಳಗಾವಿ: ತಮ್ಮ ಯಾವುದೇ ಬೇಡಿಕೆಗಳಿಗೆ ಸರಕಾರದಿಂದ ಸ್ಪಷ್ಟ ಭರವಸೆ ಸಿಗಲಿಲ್ಲ ಹಾಗೂ ಯಾವುದೇ ಪ್ಯಾಕೇಜ್ ಘೋಷಣೆ ಆಗಲಿಲ್ಲ ಎಂದು ಆರೋಪಿಸಿ ರೈತರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ಶುಕ್ರವಾರ ಬೆಳಗಾವಿ ಯಲ್ಲಿ ನಡೆಯಿತು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ನೆರೆ ಹಾವಳಿ ಹಾಗೂ ಪರಿಹಾರ ಕಾರ್ಯಗಳ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಹಾಗೂ ರೈತರ ಸಭೆಯಲ್ಲಿ ಭಾಗವಹಿಸಿದ್ದ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸರಕಾರದಿಂದ ಇದುವರೆಗೆ ಕೈಗೊಂಡಿರುವ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಸರಕಾರ ಸಂತ್ರಸ್ತರ ಪರವಾಗಿದೆ. ಯಾರೂ ಭಯ ಪಡುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದರು.

ಆದರೆ ಇದರಿಂದ ತೃಪ್ತರಾಗದ ರೈತರು ಈ ಸಭೆಯಲ್ಲಿ ಉತ್ತರ ಕರ್ನಾಟಕ ಅದರಲ್ಲೂ ಬೆಳಗಾವಿ ಜಿಲ್ಲೆಗೆ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಬೇಕು. ಚಳಿಗಾಲದ ಅಧಿವೇಶನ ಇಲ್ಲಿ ಯೇ ನಡೆಸಬೇಕು ಎಂದು ಒತ್ತಾಯಿಸಿ ಸಭೆಯಲ್ಲೇ ಘೋಷಣೆ ಕೂಗಿದರು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸಚಿವರು ಅಲ್ಲಿಂದ ತೆರಳಿದರು.

ಇದರಿಂದ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಚೇರಿ ಹೊರಗಡೆ ಧಾವಿಸಿ ಸಚಿವರ ಕಾರಿಗೆ ಮುತ್ತಿಗೆ ಹಾಕಿದರು. ಇದೇ ಸಂದರ್ಭದಲ್ಲಿ ರೈತ ಮುಖಂಡರೊಬ್ಬರು ಕಾರಿಗೆ ಅಡ್ಡ ಮಲಗಲು ಮುಂದಾದರು. ತಕ್ಷಣ ಅಲ್ಲಿಯೇ ಇದ್ದ ನಗರ ಪೊಲೀಸ್ ಆಯುಕ್ತ ಲೋಕೇಶಕುಮಾರ ರೈತರನ್ನು ಬದಿಗೆ ಎತ್ತಿಕೊಂಡು ಹೋಗಿ ಸಚಿವರ ಕಾರಿಗೆ ದಾರಿಮಾಡಿಕೊಟ್ಟರು. ಇದರಿಂದ ಕೆಲಕಾಲ ಅಲ್ಲಿ ಗೊಂದಲ ಉಂಟಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next