Advertisement

ಎಸ್‌ಟಿಪಿ ಸ್ಥಳಾಂತರಕ್ಕೆ ರೈತರ ಪ್ರತಿಭಟನೆ

10:19 AM Jul 30, 2019 | Team Udayavani |

ಬೆಳಗಾವಿ: ಹಲಗಾ ಗ್ರಾಮದಲ್ಲಿ ನಡೆಯುತ್ತಿರುವ ನಗರ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಳಾಂತರಗೊಳಿಸಬೇಕು. ಕಳಸಾ-ಬಂಡೂರಿ, ಮಹದಾಯಿ ಕಾಮಗಾರಿ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

Advertisement

ಹಲಗಾ ಬಳಿ ಎಸ್‌ಟಿಪಿ ನಿರ್ಮಾಣಕ್ಕೆ ಆಯ್ಕೆ ಮಾಡಿರುವ ಸ್ಥಳ ಸಮರ್ಪಕವಾಗಿಲ್ಲ. ಎಸ್‌ಟಿಪಿ ಕಾಮಗಾರಿ ಕೂಡಲೇ ನಿಲ್ಲಿಸಬೇಕು. ಪರಿಣಿತ ಎಂಜಿನಿಯರ್‌ಗಳ ತಂಡ ನೇಮಿಸಿ ಪರಿಶೀಲಿಸಬೇಕು. ಭೂಮಿ ಕಳೆದುಕೊಂಡ ಯಾವೊಬ್ಬ ರೈತರಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಎಕರೆಗೆ 3 ಕೋಟಿ ರೂ. ಬೆಲೆಬಾಳುವ ಜಮೀನಿಗೆ ಕೇವಲ 3 ಲಕ್ಷ ರೂ. ನೀಡುವ ಮೂಲಕ ರೈತರನ್ನು ಸುಲಿಗೆ ಮಾಡಲಾಗುತ್ತಿದೆ. ಕೂಡಲೇ ಕಾಮಗಾರಿ ನಿಲ್ಲಿಸಿ ಬೇರೆಡೆ ಸ್ಥಳಾಂತರ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಸಾಲ ಮರುಪಾವತಿಸುವಂತೆ ಬ್ಯಾಂಕುಗಳು, ಫೈನಾನ್ಸ್‌ಗಳು ರೈತರು ಹಾಗೂ ಮಹಿಳಾ ಸಂಘದ ಸದಸ್ಯರಿಗೆ ಕಿರುಕುಳ ನೀಡುತ್ತಿವೆ. ಈ ವರ್ಷ ಮಳೆ ತಡವಾಗಿ ಆಗುತ್ತಿದ್ದು, ಈಗ ಬಿತ್ತನೆ ಕಾರ್ಯ ಪೂರ್ಣಗೊಳಿಸಲಾಗಿದೆ. ಇನ್ನೂ ಕೈಗೆ ಬೆಳೆ ಬಂದಿಲ್ಲ. ಹೀಗಿರುವಾಗ ಏಕಾಏಕಿ ಸಾಲ ಪಾವತಿಸುವಂತೆ ನೋಟಿಸ್‌ ನೀಡಿದರೆ ರೈತರು ಹೇಗೆ ಪಾವತಿಸುತ್ತಾರೆ. ರೈತರಿಗೆ ಕಿರುಕುಳ ನೀಡದಂತೆ ಜಿಲ್ಲಾಧಿಕಾರಿಗಳು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ಸ್ವಾಮಿನಾಥನ್‌ ವರದಿಯನ್ನು ಜಾರಿಗೊಳಿಸಬೇಕು. ಕಳಸಾ-ಬಂಡೂರಿ ಯೋಜನೆಗೆ ಶೀಘ್ರ ಚಾಲನೆ ನೀಡಬೇಕು. ಪ್ರತಿ ಟನ್‌ ಕಬ್ಬಿಗೆ 3,500 ರೂ. ಬೆಲೆ ನಿಗದಿಪಡಿಸಬೇಕು. ಕಾರ್ಖಾನೆಗಳಿಂದ ಬಾಕಿ ಇರುವ ಬಿಲ್ ರೈತರಿಗೆ ಪಾವತಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಅವರು, ಹಲಗಾದಲ್ಲಿ ನಡೆಯುತ್ತಿರುವ ಎಸ್‌ಟಿಪಿ ಕಾಮಗಾರಿ ಸ್ಥಳವನ್ನು ಪರಿಶೀಲಿಸಲು ಎಂಜಿನಿಯರ್‌ಗಳ ತಂಡ ನೇಮಿಸಲಾಗುವುದು. ಯಾವ ಬ್ಯಾಂಕ್‌ ಹಾಗೂ ಫೈನಾನ್ಸ್‌ಗಳಿಂದ ತೊಂದರೆಯಾಗುತ್ತಿದೆ ಎಂದು ಲಿಖೀತ ಮಾಹಿತಿ ನೀಡಿದರೆ ಕಿರುಕುಳ ಕೊಡದಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಮುಖಂಡರಾದ ಚೂನಪ್ಪ ಪೂಜಾರಿ, ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಿಕ, ಅಶೋಕ ಯಮಕನಮರಡಿ, ಪ್ರಕಾಶ ನಾಯಕ, ಜಯಶ್ರೀ ಗುರಣ್ಣವರ, ರಾಜು ಮರವೆ ಸೇರಿದಂತೆ ಇತರರು ಇದ್ದರು.

19 ಕಾರ್ಖಾನೆಗಳಿಂದ ಪೂರ್ಣ ಬಿಲ್ ಪಾವತಿ:

ಜಿಲ್ಲೆಯ 24 ಸಕ್ಕರೆ ಕಾರ್ಖಾನೆಗಳ ಪೈಕಿ 19 ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿದ್ದ ಬಿಲ್ನ್ನು ಸಂಪೂರ್ಣ ಪಾವತಿ ಮಾಡಿವೆ. 3 ಕಾರ್ಖಾನೆಗಳು ಶೇ. 97, 98ರಷ್ಟು ಪಾವತಿಸಿವೆ. ಬಾಕಿ ಬಿಲ್ ನೀಡುವಂತೆ ಇನ್ನುಳಿದ 2 ಕಾರ್ಖಾನೆಗಳಿಗೆ ನೋಟಿಸ್‌ ನೀಡಲಾಗಿತ್ತು. ಆ ಕಾರ್ಖಾನೆಯವರು ನೋಟಿಸ್‌ ವಿರುದ್ಧ ಹೈಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಸುದ್ದಿಗಾರರಿಗೆ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next