ಚಿತ್ರದುರ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಅಧಿ ಕೃತವಾಗಿ ಕಾನೂನು ಪ್ರಕ್ರಿಯೆ ಮೂಲಕ ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳು ಶುಕ್ರವಾರ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 4 ಹಾಗೂ 13 ಎರಡೂ ಕಡೆಗಳಲ್ಲಿ ಪುಣೆ-ಬೆಂಗಳೂರು ಮಾರ್ಗ ಮತ್ತು ಮಂಗಳೂರು-ಸೊಲಾಪುರ ಮಾರ್ಗವನ್ನು ಸುಮಾರು ಒಂದು ತಾಸು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಿಲೋ ಮೀಟರ್‌ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಒಂದು ವರ್ಷ ಸಂದಿದೆ. ಕರಾಳ ಕೃಷಿ ಕಾಯ್ದೆಗಳ ಪರಿಣಾಮದ ಕುರಿತು ರೈತರು ಪರಿಪರಿಯಾಗಿ ವಿವರಿಸುವ ಪ್ರಯತ್ನ ಮಾಡಿದರೂ ಸರ್ಕಾರ ನಿರ್ಲಕ್ಷಿಸಿದೆ. ಜತೆಗೆ ರೈತ ಹೋರಾಟಕ್ಕೆ ಖಲಿಸ್ತಾನ, ಭಯೋತ್ಪಾದನೆ, ಮಾರುಕಟ್ಟೆ ಹಿತಾಸಕ್ತಿಗಳ ಜತೆ ಶಾಮೀಲಾಗಿದ್ದಾರೆ ಎನ್ನುವ ಹಣೆಪಟ್ಟಿ ಕಟ್ಟಿ ಮೂಲೆಗುಂಪು ಮಾಡುವ ಪ್ರಯತ್ನ ನಡೆಯಿತು.
ಈಗ ಉತ್ತರದ ರಾಜ್ಯಗಳಲ್ಲಿ ಎದುರಾಗಿರುವ ಚುನಾವಣೆಗಳಲ್ಲಿ ಸೋಲಿನ ನೆರಳಿನಿಂದ ಹೊರಬರಲು ಕೃಷಿ ಕಾಯ್ದೆ ಹಿಂಪಡೆಯುವ ಮಾತನ್ನಾಡಿದ್ದಾರೆ ಎಂದು ರೈತರು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಕಪ್ಪು ಹಣ ವಾಪಸ್ ತರಲಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ನೀಡಲಿಲ್ಲ. ಬೆಂಬಲ ಬೆಲೆ ಘೋಷಿಸಿದರೂ ರೈತರಿಗೆ ಅದರ ಪ್ರಯೋಜನ ಸಿಗಲಿಲ್ಲ. ಹೋರಾಟದಲ್ಲಿ ನೂರಾರು ರೈತರು ಮೃತಪಟ್ಟರೂ ಮೃತ ಕುಟುಂಗಳಿಗೆ ಪರಿಹಾರ ನೀಡಲಿಲ್ಲ. ಮಂತ್ರಿ ಮಗ ಹೋರಾಟ ನಿರತ ರೈತರ ಮೇಲೆ ಕಾರು ಹರಿಸಿದರೂ ಕ್ರಮ ಜರುಗಿಸಲಿಲ್ಲ. ಬದಲಿಗೆ ಹೋರಾಟಗಾರರ ಮೇಲೆ ಕೇಸು ದಾಖಲಿಸಲಾಗಿದೆ ಎಂದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ಜಾನುವಾರು ರಕ್ಷಣಾ ಕಾಯ್ದೆಗಳನ್ನು ಅಧಿ ವೇಶನದಲ್ಲಿ ವಾಪಸ್ಸು ಪಡೆಯಬೇಕು. ವಿದ್ಯುತ್ ಮಸೂದೆಗೆ ತಿದ್ದುಪಡಿ ತಂದು ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘದ ಎಲ್ಲಾ ಬಣಗಳು, ಸಿಐಟಿಯು, ಎಐಯುಟಿಯುಸಿ, ಎಐಟಿಯುಸಿ ಕಟ್ಟಡ ಕಾರ್ಮಿಕರು, ಜನಶಕ್ತಿ, ಅಸಂಘಟಿತ ಕಾರ್ಮಿಕರ ಸಂಘ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ, ಸ್ವರಾಜ್ ಇಂಡಿಯಾ, ಯುವ ಮುನ್ನಡೆ ಸಂಘಟನೆಗಳು ಭಾಗವಹಿಸಿದ್ದವು. ದೆಹಲಿ ಮೂಲದ ಯುವ ರೈತ ಮುಖಂಡ ಉಸಾಮಾ ಚೌದರಿ ಭಾಗವಹಿಸಿದ್ದರು. ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಪ್ರವೀಣ್, ಬಸವರಾಜಪ್ಪ, ಮಹೇಶ್ ಕೊರಟಿಗೆರೆ ಇದ್ದರು.
ಕ್ಯಾದಿಗೆರೆ ಬಳಿ ನಡೆದ ಹೋರಾಟದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಎಂ.ಶಂಕ್ರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಮುಖಂಡರಾದ ಭೂತಯ್ಯ, ಚಿಕ್ಕಬ್ಬಿಗೆರೆ ನಾಗರಾಜ್, ದೊಡ್ಡುಳ್ಳಾರ್ತಿ ಕರಿಯಣ್ಣ ಮತ್ತಿತರರಿದ್ದರು.