ರಾಮನಗರ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಗಳಿಂದ ಕೃಷಿಯನ್ನು ಹೊರಗಿಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕಂದಾಯ ಭವ ನದ ಬಳಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಮೆರವಣಿಕೆಯಲ್ಲಿ ಸಾಗಿ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಧರಣಿ ಕುಳಿತರು.
ರೈತರು, ಹೈನುಗಾರರಿಗೆ ಅಪಾಯ: ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ ಅನ್ಯ ಉತ್ಪನ್ನಗಳ ಜೊತೆಗೆಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ. ಅನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಲು ಮುಂದಾಗುತ್ತವೆ. ಇದರಿಂದ ದೇಶದ ಲಕ್ಷಾಂತರ ಸಣ್ಣ ರೈತರು ಮತ್ತು ಹೈನುಗಾರಿಕೆಗೂ ಅಪಾಯವಿದೆ. ಹೀಗಾಗಿ ಕೃಷಿ ಕ್ಷೇತ್ರವನ್ನು ಹೊರಗಿಟ್ಟು ಒಪ್ಪಂದ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.
ಕೈಗಾರಿಕಾ ಕೃಷಿಯಿಂದ ತಾಪಮಾನ ಹೆಚ್ಚಳ: ನವೆಂಬರ್ 4ರಂದು 16 ರಾಷ್ಟ್ರಗಳೊಂದಿಗೆ ಸಹಿ ಹಾಕಲು ಭಾರತ ಸಿದ್ಧತೆ ನಡೆಸಿದೆ. ಇದರ ಅಡಿಯಲ್ಲಿ ಆಮದು ವಸ್ತುಗಳ ಮೇಲೆ ತೆರಿಗೆ ವಿಧಿಸುವಂತಿಲ್ಲ. ಇದರಿಂದ ನಮ್ಮ ದೇಶದ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಗುಡಿ ಕೈಗಾರಿಕೆಗೆ ಹೊಡೆತ ಬೀಳಲಿದೆ. ಸ್ಥಳೀಯ ಮಾರುಕಟ್ಟೆ ವ್ಯವಸ್ಥೆ ಕುಸಿದು ಹೋಗಲಿದೆ. ಜಗತ್ತಿನ ಆಹಾರ ವ್ಯವಸ್ಥೆಯನ್ನು ಕೆಲವೇ ಕೆಲವು ಎಂಎನ್‌ಸಿಗಳು ನಿಯಂತ್ರಿಸಲಿವೆ. ಕೈಗಾರಿಕಾ ಕೃಷಿಯು ಹೆಚ್ಚಳವಾಗಿ ಭೂಮಿಯ ತಾಪಮಾನ ಇನ್ನಷ್ಟು ಹೆಚ್ಚಲಿದೆ. ಒಪ್ಪಂದದಿಂದ ದೇಶದ ರೈತರು ಜಮೀನನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ತೆರಿಗೆ ಮುಕ್ತ ಮಾಡುವುದು ಬೇಡ: ಕೇಂದ್ರ ಸರ್ಕಾರದ ಮಟ್ಟದಲ್ಲಿ ಒಪ್ಪಂದದ ಬಗ್ಗೆ ಅಂತಿಮ ಸುತ್ತಿನ ಚರ್ಚೆ ನಡೆಯುತ್ತಿದೆ. ಇದು ಜಾರಿಗೆ ಬಂದರೆ ಕೃಷಿ ವಲಯಕ್ಕೆ ತೀವ್ರ ಹೊಡೆತ ಬೀಳಲಿದೆ. ವಿದೇಶದಲ್ಲಿರುವ ಕೃಷಿ ಉತ್ಪನ್ನಗಳಿಗೆ ಸಾಕಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಕೃಷಿಯನ್ನೂ ಕೈಗಾರಿಕೆಯ ರೀತಿಯಲ್ಲಿ ಮಾಡಲಾಗುತ್ತಿದೆ. ಆದರೆ, ನಮ್ಮಲ್ಲಿ ಹೆಚ್ಚಿನವರು ಸಣ್ಣರೈತರು. ಅಲ್ಲಿರುವ ವ್ಯವಸ್ಥೆಯೂ ಇಲ್ಲಿಲ್ಲ. ವಿದೇಶಿ ಕೃಷಿ ಉತ್ಪನ್ನಗಳನ್ನು ತೆರಿಗೆ ಮುಕ್ತ ಮಾಡುವುದು ಬೇಡ. ನಮ್ಮ ದೇಶದಲ್ಲಿ ಇದರ ಅಗತ್ಯವಿಲ್ಲ. ಕೃಷಿ ವಲಯವನ್ನು ಈ ಒಪ್ಪಂದದಿಂದ ಕೈ ಬಿಡಬೇಕು ಎಂದು ರೈತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಗ್ರಾಹಕರು ಸಹಜವಾಗಿಯೇ ಅಗ್ಗದ ದರದ ಹಾಲು ಆಹಾರ ಉತ್ಪನ್ನಗಳತ್ತ ವಾಲುತ್ತಾರೆ. ಇದರಿಂದ ದೇಶಿ ಹಾಲಿನ ಬೇಡಿಕೆ ಕುಸಿಯಲಿದೆ. ಇದು ಒಂದು ರೀತಿಯಲ್ಲಿ ಮಾರಕ ಒಪ್ಪಂದ. ಇದರಿಂದ ಸಹಜವಾಗಿಯೇ ಇಲ್ಲಿನ ರೈತರು ನಿರುದ್ಯೋಗಿಗಳಾಗುತ್ತಾರೆ ಎಂದರು.
ಪ್ರತಿಭಟನಾಕಾರರು ನೀಡಿದ ಮನವಿಯನ್ನು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಸ್ವೀಕರಿಸಿದರು. ಪ್ರತಿಭಟನೆ ಯಲ್ಲಿ ಬಮೂಲ್ ಅಧ್ಯಕ್ಷ ನರ ಸಿಂಹಮೂರ್ತಿ, ನಿರ್ದೇಶಕ ಜಯಮುತ್ತು, ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಮು, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಲ್ಲಯ್ಯ, ಪದಾಧಿಕಾರಿಗಳಾದ ಸಿದ್ದೇಗೌಡ, ಶೋಭಾ, ಎಂ. ಪುಟ್ಟಸ್ವಾಮಿ, ತಿಮ್ಮೇಗೌಡ, ಮುನಿರಾಜು, ನಂಜಪ್ಪ, ರಾಮೇಗೌಡ, ಎಚ್.ಸಿ. ಕೃಷ್ಣಯ್ಯ, ಎಚ್. ನಾಗೇಶ್, ಲೋಕೇಶ್, ನಾಗರಾಜು, ಮಧುಗೌಡ, ಶಶಿಕುಮಾರ್ , ಕೃಷ್ಣ, ಕೆ. ನಾಗರಾಜು ಮತ್ತಿತರರು ಭಾಗವಹಿಸಿದ್ದರು.