Advertisement

ಭೂ ಸುಧಾರಣಾ ಕಾಯ್ದೆ ಹಿಂಪಡೆಯಲು ಒತ್ತಾಯ

02:59 PM Aug 15, 2020 | Suhan S |

ಬೆಳಗಾವಿ: ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಗೆ ಮನವಿ ಸಲ್ಲಿಸಿದರು.

Advertisement

ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ರೈತರು ಕೇಂದ್ರ- ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಇದ್ದ ಭೂ ಸುಧಾರಣಾ ಕಾಯ್ದೆ ರೈತರ ಭೂಮಿ ರಕ್ಷಣೆಗೆ ಇತ್ತು. ಆದರೆ ಈಗ ರಾಜ್ಯ ಸರ್ಕಾರ ಬಂಡವಾಳ ಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರದ ಈ ತಿದ್ದುಪಡಿಯಿಂದ ಇನ್ನು ಮುಂದೆ ಬಂಡವಾಳ ಶಾಹಿಗಳು ಹಾಗೂ ಲಾಭಕೋರರು ಸುಲಭವಾಗಿ ಕೃಷಿ ಭೂಮಿ ಕಬಳಿಸಬಹುದು. ಸಣ್ಣ ರೈತರು ವ್ಯವಸ್ಥಿತವಾಗಿ ಹಾಗೂ ಶಾಸನಬದ್ಧವಾಗಿ ಕೃಷಿ ಚಟುವಟಿಕೆಗಳಿಂದ ಹೊರದೂಡಲ್ಪಡುತ್ತಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಕೂಡಲೇ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಇನ್ನೊಂದೆಡೆ ಕೇಂದ್ರ ಸರ್ಕಾರ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ಸಮುದಾಯಕ್ಕೆ ಮಾರಕವಾಗಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗಳು ಸಂಪೂರ್ಣ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಗೆ ತೆರೆದಿಟ್ಟಿದೆ. ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ವಿದ್ಯುತ್‌ ಸುಧಾರಣೆಗಳು, ವಿದ್ಯುತ್‌ ವಲಯದಲ್ಲಿನ ಇಡೀ ಉತ್ಪಾದನೆ, ಪ್ರಸರಣ-ಸರಬರಾಜು ವ್ಯವಸ್ಥೆಗಳನ್ನು ಕಾರ್ಪೊರೇಟ್‌ ಸಂಸ್ತೆಗಳಿಗೆ ಪರಭಾರೆ ಮಾಡುವ ಇರಾದೆ ಹೊಂದಿದೆ ಎಂದು ದೂರಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಕ, ಸಲಹಾ ಸಮಿತಿ ಮುಖಂಡರಾದ ಚೂನಪ್ಪ ಪೂಜೇರಿ, ಜಯಶ್ರೀ ಗುರನ್ನವರ, ಅಶೋಕ ಯಮಕನಮರಡಿ ಇತರರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next