ಚಳ್ಳಕೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತ ವಿರೋಧಿಗಳು ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಾರ್ಮಿಕರು ಮತ್ತು ರೈತರ ಹಿತವನ್ನು ಕಡೆಗಣಿಸಿದ್ದಾರೆ ಎಂದುಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಆರೋಪಿಸಿದರು.
ಭಾರತ್ ಬಂದ್ ನಿಮಿತ್ತ ಇಲ್ಲಿನ ನೆಹರೂ ವೃತ್ತದಲ್ಲಿ ರೈತ ಸಂಘ, ಕಾರ್ಮಿಕ ಸಂಘಟನೆ, ಕಾಂಗ್ರೆಸ್, ಜೆಡಿಎಸ್ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ, ಎಲ್ಲಾ ವರ್ಗದ ಬಡವರಿಗೆ ಜನ್‌ಧನ್ ಮೂಲಕ ಪ್ರತಿ ವರ್ಷ ಹಣ ನೀಡುವ ಭರವಸೆ ನೀಡಿದ್ದ ಪ್ರಧಾನಿ ಅದನ್ನು ಮರೆತಿದ್ದಾರೆ. ರೈತರ ವಿರುದ್ಧ ತೆಗೆದುಕೊಂಡ ನಿರ್ಣಯಗಳ ಫಲವಾಗಿಇಂದು ರೈತರ ಬದುಕು ಬೀದಿಗೆ ಬರುವಂತಾಗಿದೆ. ಎಲ್ಲರೂ ಸಂಘಟಿತರಾಗಿ ಹೋರಾಡಿದಲ್ಲಿ ಮಾತ್ರ ರೈತರಿಗೆ ನ್ಯಾಯ ದೊರಕಿಸಿಕೊಡಬಹುದು ಎಂದರು.
ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ರೈತರೇ ನನ್ನ ಉಸಿರು ಎಂದು ಅಧಿಕಾರಕ್ಕೆ ಬಂದ ಬಿ.ಎಸ್. ಯಡಿಯೂರಪ್ಪ ಅಧಿಕಾರ ಬಂದ ಕೂಡಲೇ ರೈತರನ್ನೇ ಶೋಷಣೆ ಮಾಡುತ್ತಿದ್ದಾರೆ. ಪ್ರಧಾನಮಂತ್ರಿಗಳ ಅಣತಿಯಂತೆ ನಡೆಯುವ ಇವರಿಗೆ ರೈತರ ಸಂಕಷ್ಟಗಳ ಬಗ್ಗೆ ಅರಿವೇ ಇಲ್ಲವಾಗಿದೆ. ಸಂಘಟನೆಯ ಬಲ ಕುಗ್ಗುತ್ತಿರುವುದರಿಂದರೈತ ಪರ ಹೋರಾಟಗಳು ವಿಫಲವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ ಮಾತನಾಡಿ, ಸುಳ್ಳು ಭರವಸೆಗಳ ಮೂಲಕ ಅಧಿಕಾರ ಪಡೆದ ಬಿಜೆಪಿಗೆ ರೈತರು, ಕಾರ್ಮಿಕರು ಹಾಗೂ ಎಲ್ಲಾ ವರ್ಗದ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಹಾಗಾಗಿ ಶೀಘ್ರದಲ್ಲೇ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ರೈತರು, ಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗಿ ಅಧಿಕಾರ ಕಳೆದುಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸಿವೆ ಎಂದರು.
ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ. ಶಿವರುದ್ರಪ್ಪ ಮಾತನಾಡಿ, ಕಾರ್ಮಿಕರ ಮತ್ತು ರೈತರ ವಿರುದ್ದ ನಿಲುವು ತಾಳಿರುವ ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯದೇ ಇದ್ದಲ್ಲಿ ಹೋರಾಟವನ್ನುತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಜೆಡಿಸ್ ಮುಖಂಡ ಸಮರ್ಥರಾಯ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿದರು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಎಸ್.ಎಚ್. ಸಯ್ಯದ್, ನಗರಸಭಾ ಸದಸ್ಯರಾದ ರಮೇಶ್ ಗೌಡ, ಮಲ್ಲಿಕಾರ್ಜುನ್, ಕಿಸಾನ್ ಸಭಾ ಅಧ್ಯಕ್ಷ ದೊಡ್ಡಉಳ್ಳಾರ್ತಿ ಕರಿಯಣ್ಣ, ಟಿ. ಕೃಷ್ಣಮೂರ್ತಿ, ಬೋರಣ್ಣ, ಯುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಆದರ್ಶ, ಎತ್ತಿನಗಾಡಿ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಗಾಡಿ ತಿಪ್ಪೇಸ್ವಾಮಿ, ಸಿಐಟಿಯು ಅಧ್ಯಕ್ಷ ಕೆ.ವಿ. ವೀರಭದ್ರಪ್ಪ, ಜಿಲ್ಲಾ ಸಂಚಾಲಕ ಟಿ. ತಿಪ್ಪೇಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.