ಮದ್ದೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ವಿದ್ಯುತ್ ಹಾಗೂ ಎಪಿಎಂಸಿ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ರೈತ ಸಂಘದ ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು.
ಪಟ್ಟಣದ ಕೊಪ್ಪ ವೃತ್ತದ ಬಳಿ ಜಮಾಯಿಸಿದ ಸಂಘಟನೆ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಮಾರಕ ಕಾಯ್ದೆಗಳನ್ನುಜಾರಿಗೆ ತರುವಮೂಲಕ ರೈತರ ಹಿತವನ್ನು ಮರೆತಿದೆ. ಕಾಯ್ದೆ ಅನುಷ್ಠಾನಕ್ಕೆ ಮುಂದಾದಲ್ಲಿ ರೈತ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತದೆ. ಇಂತಹ ರೈತವಿರೋಧಿನೀತಿಗಳನ್ನುಹಿಂಪಡೆದು ರೈತರ ಹಿತ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಹಿತ ಕಾಪಾಡಿ: ವಿದ್ಯುತ್ ಇಲಾಖೆ ಹಣ ಹೆಚ್ಚಳ ಮಾಡಿದ್ದು, ಇದರಿಂದ ಗ್ರಾಹಕರು, ರೈತರು ಆತಂಕಗೊಂಡಿದ್ದಾರೆ. ಕೊರೊನಾದಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಜೀವನ ನಡೆಸುವುದೇ ಕಷ್ಟಕರವಾಗಿದೆ. ಕೂಡಲೇ ಇದನ್ನು ವಾಪಸ್ ಪಡೆದು ರೈತರ ಹಿತ ಕಾಪಾಡಬೇಕು ಎಂದು ಹೇಳಿದರು.
ಹಣ ಬಿಡುಗಡೆ ಮಾಡಿ: ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್ಆರ್‌ಪಿ ದರ ಜತೆಗೆ ಎನ್‌ಎಸ್‌ಫಿ ಪ್ರತಿ ಟನ್‌ಗೆ ಕನಿಷ್ಠ 500 ರೂ. ನಿಗದಿಗೊಳಿಸಿ, ಕಬ್ಬು ಬೆಳೆಗಾರರ ಹಿತ ರಕ್ಷಣೆ ಜತೆಗೆಕಟಾವಿಗೆ ಬಂದಿರುವ ಕಬ್ಬನ್ನು ಕಾರ್ಖಾನೆಗಳಿಗೆ ಪೂರೈಕೆ ಮಾಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಭತ್ತ ಕಟಾವು ಕಾರ್ಯ ಪ್ರಗತಿ ಹಂತದಲ್ಲಿದೆ. ಜಿಲ್ಲಾಡಳಿತ ಪ್ರತಿ ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 200 ರೂ. ಪ್ರೋತ್ಸಾಹ ಧನ ನೀಡುವ ಆಶ್ವಾಸನೆ ನೀಡಿದ್ದು, ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಸೀತಾ ರಾಂ, ಪದಾಧಿಕಾರಿಗಳಾದ ಜಿ.ಎ. ಶಂಕರ್, ವರದರಾಜು, ಗೊಲ್ಲರದೊಡ್ಡಿಅಶೋಕ್, ರವಿ ಕುಮಾರ್, ಕೀಳಘಟ್ಟ ನಂಜುಂಡಯ್ಯ, ರಾಮಲಿಂಗಯ್ಯ, ವೆಂಕಟೇಶ್, ಸಿದ್ದೇಗೌಡ, ಪುಟ್ಟಸ್ವಾಮಿ,ಲಿಂಗಪ್ಪಾಜಿ, ರಾಮಣ್ಣ, ವೀರಪ್ಪ, ವೆಂಕಟೇಶ್, ನಾಗರಾಜು ಹಾಜರಿದ್ದರು.
ಕಾಯ್ದೆ ತಿದ್ದುಪಡಿಗೆ ವಿರೋಧ :
ಶ್ರೀರಂಗಪಟ್ಟಣ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ, ರೈತ ಸಂಘದ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್ ಕೆಂಪೂಗೌಡ ನೇತೃತ್ವದಲ್ಲಿ ಪಟ್ಟಣದ ಕುವೆಂಪು ವೃತ್ತದ ಬಳಿ ಹೆದ್ದಾರಿ ತಡೆದು ಪ್ರತಿಭಟಿಸಿ, ಕೇಂದ್ರ ಮತ್ತ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ರೈತರ ವಿರೋಧಿ
ನೀತಿ ಅನುಸರಿಸುತ್ತಿದೆ. ಕಾಯ್ದೆ ತಿದ್ದುಪಡಿಯಿಂದ ರೈತರಿಗೆ
ತೊಂದರೆಯಾಗುತ್ತಿದೆ. ಕೂಡಲೇ ವಿದ್ಯುತ್ ಖಾಸಗಿಕರಣ ಹಾಗೂ ಕಾಯ್ದೆ ತಿದ್ದುಪಡಿಕೈಬಿಡಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ರೈತ ಸಂಘದ ಮುಖಂಡರಾದ ಎಚ್.ಎಲ್.ಪ್ರಕಾಶ್, ಪಾಂಡು, ಕೃಷ್ಣೇಗೌಡ, ರಮೇಶ್, ಬಾಲಕೃಷ್ಣ, ಚಂದ್ರಶೇಖರ್ ಹಾಜರಿದ್ದರು.